Advertisement

73ರಲ್ಲಿ ಗೆಜ್ಜೆಕಟ್ಟಿದ ಸಾವಿತ್ರಿ 

06:00 AM May 25, 2018 | Team Udayavani |

ಸಾವಿತ್ರಿ ಎಸ್‌ . ರಾವ್‌ ಇವರು ಸುರತ್ಕಲ್‌ನಲ್ಲಿ ಜನಿಸಿ, ಕೂಡು ಕುಟುಂಬದಲ್ಲಿ ಅಕ್ಕ-ತಂಗಿ, ಅಣ್ಣ-ತಮ್ಮಂದಿರೊಡನಾಡಿ ಬೆಳೆದು, ಮಂಗಳೂರಿನ ಉರ್ವದ ಕಲ್ಲಾವು ಕುಟುಂಬಕ್ಕೆ ಸೊಸೆಯಾಗಿ, ಶ್ರೀನಿವಾಸ ರಾವ್‌ ಅವರ ಮಡದಿಯಾಗಿ ಬಂದು ಮೇ 13ಕ್ಕೆ 50 ವರ್ಷ ತುಂಬಿತು. ಈ ಅವಧಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ದುಡಿದು, ಮಕ್ಕಳ ಅಪಾರ ಪ್ರೀತಿಯನ್ನು ಗಳಿಸಿದ ಅವರು ರಾಜ್ಯ ಪ್ರಶಸ್ತಿಯನ್ನು ಪಡೆದರು. ಮಕ್ಕಳ ಸಾಹಿತಿಯಾಗಿ ಹಲವಾರು ಕಥೆ ಕವನಗಳನ್ನು ಬರೆದರು. ತೋಟದ ಆರೈಕೆ, ಮಕ್ಕಳಿಗೆ ಭಗವದ್ಗೀತೆಯನ್ನು ಕಲಿಸುವುದು, ಕಥಾ,ಕವನದ ಕಮ್ಮಟಗಳನ್ನು ನಡೆಸುವುದೇ ಮುಂತಾದ ಹಲವಾರು ಚಟುವಟಿಕೆಗಳಲ್ಲಿ ಇವರು ತಮ್ಮನ್ನು ತೊಡಗಿಸಿಕೊಂಡವರು. ಸ್ವಯಂ ನಿವೃತ್ತಿಯನ್ನು ಪಡೆದು ಇಂತಹ ಹಲವಾರು ಪ್ರವೃತ್ತಿಗಳಿಗೆ ಸಮಯವನ್ನು ಮುಡಿಪಾಗಿಟ್ಟರು. ತನ್ನ 66ನೇ ವಯಸ್ಸಿನಲ್ಲಿ ಇವೆಲ್ಲವನ್ನು ಮೀರಿಸಿದ ಹೊಸ ಪ್ರಯೋಗವೊಂದನ್ನು ಮಾಡಿದರು ಹಾಗು ಯಶಸ್ವಿಯೂ ಆದರು. ಅದೇ ಯಕ್ಷಲೋಕಕ್ಕೆ ಪದಾರ್ಪಣೆ. 

Advertisement

ಇಂದು ಅವರಿಗೆ 73ರ ಹರೆಯ. ನವತರುಣ-ತರುಣಿಯರು ನಾಚುವಂತೆ ಅವರು ಯಕ್ಷಗಾನದಲ್ಲಿ ಗೆಜ್ಜೆ ಕಟ್ಟಿ ಕುಣಿದು ಕಲಾಭಿಮಾನಿಗಳನ್ನು ಮಂತ್ರ ಮುಗ್ಧಗೊಳಿಸಬಲ್ಲರು. ಇಳಿ ವಯಸ್ಸಿನಲ್ಲಿ ಯಕ್ಷಗಾನದಲ್ಲಿ ಮಿಂಚುವ ಕನಸು ಕೂಡಾ ಕಂಡವರಲ್ಲ. ಆದರೆ ಅವರ ಉತ್ಸಾಹ, ಕಲಿಯುವ ಮನಸ್ಸು, ಉತ್ತಮ ಆರೋಗ್ಯ ಸಾಧನೆಯ ಗುಟ್ಟು. ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರೂ ಆದ ಪತಿಯ ನಿರಂತರ ಸಹಕಾರ ಮತ್ತು ಬೆಂಬಲ, ಯಕ್ಷಗುರು ಸುಮಂಗಲ ರತ್ನಾಕರ ಅವರ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ಅವರ ಸಾಧನೆಯ ಹಾದಿಯ ಮೆಟ್ಟಿಲುಗಳಾದವು. 

50ನೇ ವಿವಾಹ ವಾರ್ಷಿಕೋತ್ಸವದಂದು ಯಕ್ಷಗಾನದ 100ನೇ ಪ್ರದರ್ಶನವನ್ನು ನಗರದ ಪುರಭವನದಲ್ಲಿ ಏರ್ಪಡಿಸಿದ್ದರು. ಸುಮಂಗಲ ರತ್ನಾಕರ ಅವರ ನೇತೃತ್ವದಲ್ಲಿ ದಂಪತಿಯನ್ನು ಸಮ್ಮಾನಿಸಲಾಯಿತು.ಅನಂತರ ನಡೆದ “ನರಕಾಸುರ ವಧೆ’ ಪ್ರದರ್ಶನದಲ್ಲಿ ಸಾವಿತ್ರಿಯವರು ದೇವೇಂದ್ರನ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದರು. ಇವರ ಈ ಜೀವನೋತ್ಸಾಹ ಸರ್ವರಿಗೂ ಆದರ್ಶ. ಮಧ್ಯ ವಯಸ್ಸಿನಲ್ಲೇ ಎಲ್ಲ ಮುಗಿಯಿತೆಂದುಕೊಂಡು ನೀರಸ ಬಾಳು ಬಾಳುವವರಿಗೊಂದು ದಾರಿದೀಪ, ಸ್ಫೂರ್ತಿ. 

ಯಕ್ಷಪ್ರಿಯ 

Advertisement

Udayavani is now on Telegram. Click here to join our channel and stay updated with the latest news.

Next