ಬೆಳ್ಮಣ್: ಕನ್ನಡ ಮಾಧ್ಯಮ ಶಾಲೆಗಳು ಅದರಲ್ಲೂ ಸರಕಾರಿ ಶಾಲೆಗಳು ವಿವಿಧ ಕಾರಣಗಳಿಂದ ಅವನತಿಯತ್ತ ಸಾಗುತ್ತಿರುವಾಗ ನಂದಳಿಕೆ ಸರಕಾರಿ ಶಾಲೆಯ ಹಿರಿಯ ವಿದ್ಯಾರ್ಥಿಗಳು ಶಾಲಾ ವಿದ್ಯಾರ್ಥಿಗಳ ದಾಖಲಾತಿಗೆ ನೂತನ ಕೊಡುಗೆ ಘೋಷಿಸಿದ್ದಾರೆ. ಶಾಲೆಗೆ ನೂತನವಾಗಿ ದಾಖಲಾಗುವ ವಿದ್ಯಾರ್ಥಿ ಗಳಿಗೆ 1,000 ರೂ.ನ ಹೊಸ ಆಫರ್ ಘೋಷಿಸಿ ಶೈಕ್ಷಣಿಕ ಕಾಳಜಿ ಮೆರೆದಿದ್ದಾರೆ.
ಒಂದೆಡೆ ಖಾಸಗಿ ಆಂಗ್ಲಮಾಧ್ಯಮ ಶಾಲೆಗಳ ಪ್ರಭಾವ ಹಾಗೂ ವಿವಿಧ ಕಾರಣಗಳಿಂದ ನೇಪಥ್ಯಕ್ಕೆ ಸರಿಯುತ್ತಿರುವ ಕನ್ನಡ ಮಾಧ್ಯಮದ ಸರಕಾರಿ ಶಾಲೆಯನ್ನು ಉಳಿಸಲು ನಂದಳಿಕೆಯಲ್ಲಿ ಈ ವಿನೂತನ ಯೋಜನೆಯ ಮೂಲಕ ಮಕ್ಕಳನ್ನು ಸರಕಾರಿ ಶಾಲೆಯತ್ತ ಸೆಳೆಯಲು ವಿಶೇಷ ಪ್ರಯತ್ನ ನಡೆಯುತ್ತಿದೆ.
ಶತಮಾನದ ಹೊಸ್ತಿಲಲ್ಲಿರುವ ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮದ ಏಕೈಕ ಕನ್ನಡ ಸರಕಾರಿ ಶಾಲೆಯನ್ನು ಉಳಿಸಲು ಇಲ್ಲಿನ ಹಳೆ ವಿದ್ಯಾರ್ಥಿಗಳಿಂದ ವಿಶೇಷ ಯೋಜನೆ ರೂಪಿಸಲಾಗಿದ್ದು. ಮುಂದಿನ ಶೆ„ಕ್ಷಣಿಕ ವರ್ಷದಿಂದ ನಂದಳಿಕೆ ಸರಕಾರಿ ಪ್ರಾಥಮಿಕ ಶಾಲೆಗೆ ಸೇರ್ಪಡೆಗೊಳ್ಳಲಿರುವ ವಿದ್ಯಾರ್ಥಿಗಳಿಗೆ ತಲಾ 1,000 ರೂ. ನೀಡುವುದಾಗಿ ಘೋಷಿಸಿದೆ. ಈ ಮೂಲಕ ಸರಕಾರಿ ಶಾಲೆಯತ್ತ ಮಕ್ಕಳನ್ನು ಸೆಳೆಯಲು ವಿಶೇಷ ಪ್ರಯತ್ನ ನಡೆಯುತ್ತಿದೆ. ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಬಾಲಚಂದ್ರ ಶೆಟ್ಟಿ ಈ ವಿಶೇಷ ಕೊಡುಗೆ ಘೋಷಣೆ ಮಾಡಿದ್ದು ಸಂಘ ಈ ಪರಿಕಲ್ಪನೆಗೆ ಕೈ ಜೋಡಿಸಿದೆ.
ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯ
ಕಳೆದ 5 ವರ್ಷಗಳಿಂದ ಈ ಶಾಲೆಗೆ ಬರುವ ವಿದ್ಯಾರ್ಥಿಗಳಿಗಾಗಿ ಬಸ್ ವ್ಯವಸ್ಥೆಯನ್ನು ಹಳೆ ವಿದ್ಯಾರ್ಥಿ ಸಂಘದಿಂದ ಮಾಡಲಾಗಿದ್ದು ಈ ಯೋಜನೆ ಈ ವರ್ಷವೂ ಮುಂದುವರಿಯುತ್ತಿದೆ. ಶತಮಾನ ಕಾಣುತ್ತಿರುವ ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸುವ ಹಾಗೂ ಕನ್ನಡ ಮಾಧ್ಯಮ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಇಲ್ಲಿನ ಹಳೆ ವಿದ್ಯಾರ್ಥಿ ಸಂಘ ಪ್ರತೀ ಬಾರಿಯೂ ವಿಶೇಷ ಯೋಜನೆ ರೂಪಿಸುತ್ತಿದೆ.
ಗ್ರಾಮದ ಏಕೈಕ ಕನ್ನಡ ಶಾಲೆ
ಇಲ್ಲಿನ ಪ್ರಾಥಮಿಕ ಶಾಲೆ (ಬೋರ್ಡ್ ಶಾಲೆ) ನಂದಳಿಕೆ ಗ್ರಾಮದಲ್ಲಿರುವ ಏಕೈಕ ಸರಕಾರಿ ಕನ್ನಡ ಶಾಲೆಯಾಗಿದ್ದು ಇಲ್ಲಿ ಕಲಿತ ವಿದ್ಯಾರ್ಥಿಗಳು ಇದೀಗ ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ ಅಲ್ಲದೆ ಸರಕಾರಿ ಸೇವೆಯಲ್ಲಿಯೂ ಇದ್ದಾರೆ. ಉತ್ತಮ ಶಿಕ್ಷಕರ ತಂಡವನ್ನು ಹೊಂದಿರುವ ಗ್ರಾಮದ ಏಕೈಕ ಶಾಲೆಯನ್ನು ಉಳಿಸಲು ಇದೀಗ ಹಳೆ ವಿದ್ಯಾರ್ಥಿಗಳು ಶ್ರಮಿಸುತ್ತಿದ್ದು ಪ್ರಸ್ತುತ ವರ್ಷದಲ್ಲಿ ಈ ಶಾಲೆ ಶತಮಾನೋತ್ಸವದ ಸಂಭ್ರಮದಲ್ಲಿದೆ.