ಕೀವ್/ಮಾಸ್ಕೋ: ಉಕ್ರೇನ್ ಮೇಲೆ ದಾಳಿ ನಡೆಸಿ ರಷ್ಯಾ ಇದುವರೆಗೆ 9,861 ಸೈನಿಕರನ್ನು ಕಳೆದುಕೊಂಡಿದೆ ಮತ್ತು 16 ಸಾವಿರಕ್ಕಿಂತಲೂ ಅಧಿಕ ಮಂದಿಗೆ ಗಾಯಗಳಾಗಿವೆ. ರಷ್ಯಾ ಸರಕಾರದ ಪರವಾಗಿರುವ ವೆಬ್‌ಸೈಟ್ ಒಂದರಲ್ಲಿ ಈ ಮಾಹಿತಿಯನ್ನು ಅಪ್‌ಲೋಡ್ ಮಾಡಲಾಗಿದೆ.
ಜಗತ್ತಿನಾದ್ಯಂತ ಈ ಅಂಶ ಪ್ರಚಾರ ಪಡೆದುಕೊಳ್ಳುತ್ತಲೇ ಅದನ್ನು ವಾಪಸ್ ಪಡೆಯಲಾಗಿದೆ.
ಅಫ್ಘಾನಿಸ್ಥಾನದಲ್ಲಿ ರಷ್ಯಾ 1979ರಿಂದ 10 ವರ್ಷ ಗಳ ಕಾಲ ನಡೆಸಿದ್ದ ಸಂಘರ್ಷದಲ್ಲಿ 15 ಸಾವಿರ ಮಂದಿ ಸೈನಿಕರು ಸಾವಿಗೀಡಾಗಿದ್ದರು. ಈ ನಡುವೆ 2,389 ಮಂದಿ ಮಕ್ಕಳನ್ನು ಲುಗಾನ್ಸ್ಕ್ ಮತ್ತು ಡಾನೆಸ್ಕ್ ನಿಂದ ರಷ್ಯಾ ಅಪಹರಿಸಿದೆ ಎಂದು ಅಮೆರಿಕ ಸರಕಾರ ಆರೋಪಿಸಿದೆ. ಇದೇ ವೇಳೆ, ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರಿಸಿದೆ. ಇನ್ನೊಂದೆಡೆ, ಕೀವ್ ನಗರದ ಹೊರವಲಯವನ್ನು ಉಕ್ರೇನ್ ಸೇನೆ ಮರುವಶ ಮಾಡಿಕೊಂಡಿದೆ.
ಪುತಿನ್ ಕಳ್ಳ ಆಸ್ತಿ ಮೊತ್ತ 1.2 ಲಕ್ಷ ಕೋಟಿ!: ವಿಶ್ವದ ನಾನಾ ರಾಷ್ಟ್ರಗಳಲ್ಲಿ ರಷ್ಯಾ ಅಧ್ಯಕ್ಷ ಪುತಿನ್‌ರವರಿಗೆ ಸೇರಿದೆಯೆನ್ನಲಾದ ಅಂದಾಜು 1.2 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿಪಾಸ್ತಿ ಇದೆ ಎಂಬ ಮಾಹಿತಿಯನ್ನು “ಆರ್ಗನೈಸ್ಡ್ ಕ್ರೈಮ್ ಆ್ಯಂಡ್ ಕರಪ್ಷನ್ ರಿಪೋರ್ಟಿಂಗ್ ಪ್ರಾಜೆಕ್ಟ್’ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ವರದಿಯಲ್ಲಿ, “ಪುತಿನ್‌ರವರ ಈ ಬೇನಾಮಿ ಆಸ್ತಿಯಲ್ಲಿ ನಾನಾ ದೇಶಗಳಲ್ಲಿ ಹೇರಳವಾದ ಧನವಿರುವ ಬ್ಯಾಂಕ್ ಖಾತೆಗಳು, ಐಷಾರಾಮಿ ಹಡಗುಗಳು, ಖಾಸಗಿ ಜೆಟ್‌ಗಳು, ಲಂಡನ್, ದುಬೈಯಲ್ಲಿರುವ ಐಷಾರಾಮಿ ಬಂಗಲೆ ಸೇರಿದೆ’ ಎನ್ನಲಾಗಿದೆ.
ಭಾರತವನ್ನು ಟೀಕಿಸಿದ ಬೈಡನ್: ಉಕ್ರೇನ್ ಮೇಲೆ ದಾಳಿ ನಡೆಸಿರುವ ರಷ್ಯಾದ ಬಗ್ಗೆ ಭಾರತ ಮಾತನಾಡಲು ಹೆದರುತ್ತಿದೆ ಎಂದು ಅಮೆರಿಕದ ಅಧ್ಯಕ್ಷ ಭಾರತವನ್ನು ಟೀಕಿಸಿದ್ದಾರೆ. “ಪುತಿನ್‌ರವರ ಯುದ್ಧದಾಹವನ್ನು ಕ್ವಾಡ್ ಸದಸ್ಯ ರಾಷ್ಟ್ರಗಳಾದ ಜಪಾನ್, ಆಸ್ಟ್ರೇಲಿಯ ಖಂಡಿಸಿವೆ. ಆದರೆ ಕ್ವಾಡ್ ಸದಸ್ಯನಾಗಿರುವ ಭಾರತ ಸುಮ್ಮನಿದೆ. ಇದು, ರಷ್ಯಾ ಬಗ್ಗೆ ಭಾರತ ಹೊಂದಿರುವ ಭೀತಿಯನ್ನು ತೋರಿಸುತ್ತದೆ’ ಎಂದಿದ್ದಾರೆ.
3.5 ಕೋಟಿ ಮಂದಿ ವಲಸೆ
ಉಕ್ರೇನ್ ವಿರುದ್ಧ ರಷ್ಯಾ ಪ್ರಹಾರ ನಡೆಸಲಾರಂಭಿಸಿದ ಬಳಿಕದಿಂದ ಇದುವರೆಗೆ 3.5 ಕೋಟಿ ಮಂದಿ (35 ಮಿಲಿಯ) ಆ ದೇಶವನ್ನು ತೊರೆದಿದ್ದಾರೆ. ಎರಡನೇ ವಿಶ್ವ ಮಹಾಯುದ್ಧದ ಬಳಿಕ ಐರೋಪ್ಯ ಒಕ್ಕೂಟ ಕಂಡ ಅತ್ಯಂತ ದೊಡ್ಡ ಜನರ ವಲಸೆ ಇದು ಎಂದು ಸ್ವಿಜರ್ಲೆಂಡ್‌ನ ಜಿನೇವಾದಲ್ಲಿರುವ ವಿಶ್ವಸಂಸ್ಥೆಯ ನಿರಾಶ್ರಿತರ ಆಯುಕ್ತರ ಕಚೇರಿ (ಯುಎನ್‌ಎಚ್‌ಸಿಆರ್) ಪ್ರಕಟಿಸಿದೆ. ಪೋಲೆಂಡ್‌ಗೆ 2. 1 ಮಿಲಿಯ (21 ಲಕ್ಷ ) ಮಂದಿ ಪ್ರವೇಶಿಸಿದ್ದಾರೆ. ರೊಮೇನಿಯಾಕ್ಕೆ 5.40 ಲಕ್ಷ, ಮಾಲ್ಡೋವಾಕ್ಕೆ 3.67 ಲಕ್ಷಕ್ಕಿಂತ ಅಧಿಕ ಮಂದಿ ಉಕ್ರೇನಿಯನ್ನರು ನಿರಾಶ್ರಿತರಾಗಿ ಪ್ರವೇಶಿಸಿದ್ದಾರೆ.