ನವದೆಹಲಿ: ಉತ್ತರಾಖಂಡದ ಯಮುನೋತ್ರಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಯ ಸುರಕ್ಷಾ ತಡೆಗೋಡೆ ಕುಸಿದು ಬಿದ್ದ ಪರಿಣಾಮ ಸುಮಾರು ಹತ್ತು ಸಾವಿರ ಮಂದಿ ಸಂಚಾರಕ್ಕೆ ಅಡ್ಡಿಯುಂಟಾಗಿ ಪರದಾಡುವಂತಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಪಠ್ಯಪುಸ್ತಕದಲ್ಲಿ ಕೇಸರಿಕರಣ ನುಸುಳುತ್ತಿರುವುದು ಅಪಾಯಕಾರಿ: ಎಚ್. ವಿಶ್ವನಾಥ್
ಈ ರಸ್ತೆಯಲ್ಲಿನ ಸಂಚಾರವನ್ನು ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ವಿವಿಧ ಸ್ಥಳಗಳಲ್ಲಿ ಸುಮಾರು ಹತ್ತು ಸಾವಿರ ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ ಎಂದು ವರದಿ ವಿವರಿಸಿದೆ.
ರಾಣಾಚಟ್ಟಿ ಪ್ರದೇಶದ ಸಮೀಪ ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯ ಸುರಕ್ಷಾ ತಡೆಗೋಡೆ ಶನಿವಾರ (ಮೇ 21) ಕುಸಿದು ಬಿದ್ದ ಘಟನೆಯಿಂದಾಗಿ ಪ್ರವಾಸಿಗರ ವಾಹನ ಮತ್ತು ಇತರ ಭಾರೀ ಗಾತ್ರದ ವಾಹನಗಳು ಮುಂದೆ ಚಲಿಸಲಾಗದೆ ಜನರು ಸಂಕಷ್ಟದಲ್ಲಿ ಸಿಲುಕಿಕೊಂಡಂತಾಗಿದೆ ಎಂದು ಮೂಲಗಳು ತಿಳಿಸಿವೆ.
ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿ ದುರಸ್ತಿಗೊಳಿಸಲು 2-3 ದಿನಗಳ ಅಗತ್ಯವಿದ್ದು, ಯಾತ್ರಾರ್ಥಿಗಳು ಮೊದಲು ಗಂಗೋತ್ರಿಗೆ ಭೇಟಿ ನೀಡಿ ನಂತರ ಯಮುನೋತ್ರಿಗೆ ಆಗಮಿಸುವಂತೆ ಜಿಲ್ಲಾಡಳಿತ ಮನವಿ ಮಾಡಿಕೊಂಡಿದೆ.
ಭಾರೀ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯ ಸುಮಾರು 12 ಮೀಟರ್ ನಷ್ಟು ದೂರದವರೆಗಿನ ಸುರಕ್ಷಾ ತಡೆಗೋಡೆ ಕುಸಿದುಬಿದ್ದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯಿಂದ ಬಾರ್ಕೋಟ್ ಮತ್ತು ಜಾನ್ಕಿಚಟ್ಟಿ ಪ್ರದೇಶದ ವಿವಿಧ ಪ್ರದೇಶಗಳಲ್ಲಿ ಸುಮಾರು 10 ಸಾವಿರ ಪ್ರವಾಸಿಗರು ಪರದಾಡುವಂತಾಗಿದೆ ಎಂದು ವರದಿ ಹೇಳಿದೆ.