Advertisement

20 ವಿವಿಗಳ ವಿಶ್ವದರ್ಜೆಗೆ 10,000 ಕೋ. ರೂ. ಕೊಡುಗೆ

11:55 AM Oct 15, 2017 | Harsha Rao |

ಹೊಸದಿಲ್ಲಿ: ದೇಶದ 20 ಅತ್ಯುತ್ತಮ ವಿಶ್ವವಿದ್ಯಾಲಯಗಳ ಅಭಿವೃದ್ಧಿಗಾಗಿ 10 ಸಾವಿರ ಕೋಟಿ ರೂ. ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. 

Advertisement

ಶನಿವಾರ ಬಿಹಾರಕ್ಕೆ ಭೇಟಿ ನೀಡಿದ ಅವರು, ಹಲವಾರು ಯೋಜನೆಗಳಿಗೆ ಚಾಲನೆ ನೀಡಿದರಲ್ಲದೆ, ದೇಶದ 7ನೇ ಅತಿ ಹಳೆಯ ವಿ.ವಿ. ಗಳಲ್ಲೊಂದಾದ ಪಟ್ನಾ ವಿ.ವಿ.ಯ ಶತ ಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದರು. ದೇಶದ ಅಗ್ರ 20 ವಿ.ವಿ.ಗಳನ್ನು ಜಾಗತಿಕ ಮಟ್ಟದ ವಿವಿಗಳ ಮಟ್ಟಕ್ಕೆ ಏರಿಸುವ ಸಂಕಲ್ಪದೊಂದಿಗೆ 10 ಸಾವಿರ ಕೋಟಿ ರೂ. ಅನುದಾನ ನೀಡುವುದಾಗಿ ಅವರು ತಿಳಿಸಿದರು. ಈ ಅಪೂರ್ವ ಅವಕಾಶ ಪಡೆಯ ಲಿರುವ 20 ವಿವಿಗಳಲ್ಲಿ 10 ಸರಕಾರಿ ಹಾಗೂ 10 ಖಾಸಗಿ ವಿವಿಗಳಾಗಿರಲಿವೆ ಎಂದು ಸ್ಪಷ್ಟಪಡಿಸಿದರು. 

ಸೆಂಟ್ರಲ್‌ ಬೇಡ, ವಿಶ್ವಮಾನ್ಯ ಬೇಕು: ಸಮಾರಂಭ ದಲ್ಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಪಟ್ನಾ ವಿಶ್ವವಿದ್ಯಾಲಯಕ್ಕೆ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾನಮಾನ ನೀಡಬೇಕೆಂಬ ಮನವಿಗೆ ಪ್ರತಿಕ್ರಿಯಿಸಿದ ಮೋದಿ, “ಪ್ರತಿಷ್ಠಿತ ವಿವಿಗಳಿಗೆ ಕೇಂದ್ರೀಯ ಸ್ಥಾನಮಾನ ನೀಡುವ ಪದ್ಧತಿ ಹಳತಾಗಿದ್ದು, ಈಗ ದೇಶದ ಪ್ರತಿಷ್ಠಿತ ವಿವಿಗಳನ್ನು ಅಂತಾರಾಷ್ಟ್ರೀಯ ದರ್ಜೆಗೆ ಏರಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಪಟ್ನಾ ವಿವಿಯೂ ಸವಾಲನ್ನು ಸ್ವೀಕರಿಸಿ, ವಿಶ್ವ
ದರ್ಜೆಗೇರುವ ನಿಟ್ಟಿನಲ್ಲಿ ಪ್ರಯತ್ನಶೀಲವಾ ಗಬೇಕು’ ಎಂದು ಕರೆ ನೀಡಿದರು. 

ನಿತೀಶ್‌ ಕೊಂಡಾಡಿದ ಮೋದಿ:  ಸಮಾರಂಭದಲ್ಲಿ ಸಿಎಂ ನಿತೀಶ್‌ ಕುಮಾರ್‌ ಅವರನ್ನು ಪ್ರಧಾನಿ ಮೋದಿ ಹಾಡಿ ಹೊಗಳಿದರು. ನಿತೀಶ್‌ ಅವರು ಬಿಹಾರದ ಅಭಿವೃದ್ಧಿಗಾಗಿ ತೀವ್ರವಾದ ಕಳಕಳಿ ಹೊಂದಿದ್ದಾರೆಂದು ಹೇಳಿದ ಮೋದಿ, ನಿತೀಶ್‌ ನಾಯಕತ್ವದಲ್ಲಿ ರಾಜ್ಯವು ನಿರೀಕ್ಷಿತ ಪ್ರಗತಿ ಸಾಧಿಸಲಿದೆ ಎಂದು ಆಶಿಸಿದರು. ಆರ್‌ಜೆಡಿ ಸಖ್ಯ ತೊರೆದು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡ ಬಳಿಕ ಇದೇ ಮೊದಲ ಬಾರಿಗೆ ನಿತೀಶ್‌ ಅವರು ಮೋದಿ ಜತೆ ವೇದಿಕೆ ಹಂಚಿಕೊಂಡರು.

ಬಿಹಾರಕ್ಕೆ ದೀಪಾವಳಿಯ ಭರ್ಜರಿ ಕೊಡುಗೆ 
ಮಹಾಘಟಬಂಧನ್‌ನಿಂದ ಹೊರಬಂದು ಬಿಜೆಪಿಯೊಂದಿಗೆ ಮೈತ್ರಿ ಬೆಳೆಸಿ ಜೆಡಿಯು ನಾಯಕ ನಿತೀಶ್‌ ಕುಮಾರ್‌ ಅವರು ಮುಖ್ಯಮಂತ್ರಿಯಾದ ನಂತರ ಇದೇ ಮೊದಲ ಬಾರಿಗೆ ಪೂರ್ಣಪ್ರಮಾಣದಲ್ಲಿ ಬಿಹಾರಕ್ಕೆ ಭೇಟಿ ನೀಡಿರುವ ಪ್ರಧಾನಿ ಮೋದಿ, ಆ ರಾಜ್ಯಕ್ಕೆ ಬರೋಬ್ಬರಿ 3,700 ಕೋಟಿ ರೂ. ವೆಚ್ಚದ ಯೋಜನೆಗಳ ಬಂಪರ್‌ ಕೊಡುಗೆ ನೀಡಿದರು.

Advertisement

ಮಂಗಳವಾರ ಪಟ್ನಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿ, ಪಾಟ್ನಾ ಸಮೀಪದ ಮೊಕಾಮಕ್ಕೆ ತೆರಳಿ ನಮಾಮಿ ಗಂಗಾ ಯೋಜನೆಯಡಿ ಗಂಗಾ ನದಿಗೆ ಅಡ್ಡಲಾಗಿ ಕಟ್ಟಲಾಗುವ ಆರು ಲೇನ್‌ಗಳ ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಿದರು. ಆನಂತರ, ಮೊಕಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಚಾಲನೆ ನೀಡಿದ ಅವರು, ಬಿಹಾರದ ಅಭಿವೃದ್ಧಿಯಲ್ಲಿ ಹೆದ್ದಾರಿಗಳ ಪಾತ್ರ ಹಿರಿದಾಗಿದ್ದು, ಇದಕ್ಕೆ ಕೇಂದ್ರ ಸರಕಾರ ಸಂಪೂರ್ಣ ಸಹಕಾರ ನೀಡುತ್ತದೆ ಎಂದರು. ಇದಾದ ಮೇಲೆ, ಪಾಟ್ನಾದಲ್ಲಿ 738.14 ಕೋಟಿ ರು.ಗಳ ವೆಚ್ಚದಲ್ಲಿ ನಿರ್ಮಾಣವಾಗಲಿರುವ, ದಿನಪ್ರತಿ 140 ದಶಲಕ್ಷ ಲೀಟರ್‌ ತ್ಯಾಜ್ಯ ನೀರನ್ನು ಶುದ್ಧೀಕರಿಸಬಲ್ಲ ಘಟಕಕ್ಕೆ (ಎಸ್‌ಟಿಪಿ) ಚಾಲನೆ ನೀಡಿದರು. 

ಯಾವೆಲ್ಲ ಯೋಜನೆಗಳು?
ಪಟ್ನಾ ಬಳಿಯ ಮೊಕಾಮದಲ್ಲಿ ಸುಮಾರು 3,700 ಕೋಟಿ ರೂ. ಮೊತ್ತದ ಆರು ಯೋಜನೆಗಳಿಗೆ ಚಾಲನೆ. 
ಗಂಗಾ ನದಿಗೆ ಅಡ್ಡಲಾಗಿ ಕಟ್ಟಲಾಗುವ 1,200 ಕೋಟಿ ರೂ. ವೆಚ್ಚದ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ . 
ಎನ್‌ಎಚ್‌ 30, ಎನ್‌ಎಚ್‌ 84, ಎನ್‌ಎಚ್‌ 31, ಎನ್‌ಎಚ್‌ 104, ಎನ್‌ಎಚ್‌ 106 ಹೆದ್ದಾರಿ ಯೋಜನೆಗಳಿಗೆೆ ಚಾಲನೆ. 

ದೇಶದ 7ನೇ ಅತಿ ಹಳೆಯ ವಿಶ್ವವಿದ್ಯಾಲಯವಾದ ಪಟ್ನಾ ವಿವಿ ಶತ ಮಾನೋ ತ್ಸವ ಆಚರಣೆಯಲ್ಲಿ ಭಾಗಿ.

Advertisement

Udayavani is now on Telegram. Click here to join our channel and stay updated with the latest news.

Next