ಮುಂಬಯಿ: ಕೋವಿಡ್ ನ ಹೊಸ ರೂಪಾಂತರಿ ಒಮಿಕ್ರಾನ್ ಜಗತ್ತಿನಾದ್ಯಂತ ಭೀತಿ ಹುಟ್ಟಿಸಿರುವ ನಡುವೆಯೇ ಕಳೆದ 15 ದಿನಗಳಲ್ಲಿ ಆಫ್ರಿಕಾ ದೇಶಗಳಿಂದ ವಾಣಿಜ್ಯ ನಗರಿ ಮುಂಬಯಿಗೆ ಕನಿಷ್ಠ ಒಂದು ಸಾವಿರ ಮಂದಿ ಪ್ರಯಾಣಿಕರು ಆಗಮಿಸಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.
ಇದನ್ನೂ ಓದಿ:ಸದ್ಯಕ್ಕೆ ಲಾಕ್ ಡೌನ್ ಮಾಡುವ ಉದ್ದೇಶ ಸರ್ಕಾರದ ಮುಂದಿಲ್ಲ: ಸಿಎಂ ಬೊಮ್ಮಾಯಿ ಸ್ಪಷ್ಟನೆ
ಪಿಟಿಐ ಜೊತೆ ಮಾತನಾಡಿರುವ ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೋರೇಷನ್ ನ ಅಡಿಷನಲ್ ಮುನ್ಸಿಪಲ್ ಕಮಿಷನರ್ ಸುರೇಶ್ ಕಾಕಾನಿ, ಕಳೆದ 15 ದಿನಗಳಿಂದ ಆಫ್ರಿಕಾ ದೇಶಗಳಿಂದ ಸುಮಾರು ಒಂದು ಸಾವಿರ ಮಂದಿ ಪ್ರಯಾಣಿಕರು ಮುಂಬಯಿಗೆ ಬಂದಿಳಿದಿರುವುದಾಗಿ ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ತಿಳಿಸಿದ್ದಾರೆ. ಆದರೆ ಮಹಾನಗರ ಪಾಲಿಕೆಗೆ ಕೇವಲ 466 ಪ್ರಯಾಣಿಕರ ಮಾಹಿತಿಯನ್ನು ಮಾತ್ರ ನೀಡಲಾಗಿದೆ.
ಪಟ್ಟಿಯಲ್ಲಿರುವ 466 ಪ್ರಯಾಣಿಕರಲ್ಲಿ ಕನಿಷ್ಠ 100 ಮಂದಿಯ ಗಂಟಲು ದ್ರವವನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 466 ಮಂದಿ ಪ್ರಯಾಣಿಕರಲ್ಲಿ 100 ಮಂದಿ ಮುಂಬಯಿ ನಿವಾಸಿಗಳಾಗಿದ್ದು, ಅವರ ಗಂಟಲ ದ್ರವ ಸಂಗ್ರಹಿಸಲಾಗಿದೆ. ಮಂಗಳವಾರ ಅಥವಾ ಬುಧವಾರ ಪ್ರಯೋಗಾಲಯದ ವರದಿ ಕೈಸೇರುವ ನಿರೀಕ್ಷೆ ಇದೆ ಎಂದು ವರದಿ ವಿವರಿಸಿದೆ.
ಒಂದು ವೇಳೆ ಟೆಸ್ಟ್ ವರದಿ ನೆಗೆಟಿವ್ ಅಂತ ಬಂದರೆ ಯಾವುದೇ ಸಮಸ್ಯೆ ಇಲ್ಲ. ಆದರೆ ವಿಶ್ವಸಂಸ್ಥೆ ಎಚ್ಚರಿಸಿದಂತೆ ಕೋವಿಡ್ ನ ಹೊಸ ರೂಪಾಂತರಿ ಒಮಿಕ್ರಾನ್ ವೈರಸ್ ಸೋಂಕಿದ್ದರೆ ಆ ಬಗ್ಗೆ ಪರೀಕ್ಷಿಸಬೇಕಾಗುತ್ತದೆ ಎಂದು ಕಾಕಾನಿ ತಿಳಿಸಿದ್ದಾರೆ. ಅಂತಹ ಲಕ್ಷಣ ಕಂಡು ಬಂದಲ್ಲಿ ಆ ಪ್ರಯಾಣಿಕರನ್ನು ಅಂಧೇರಿಯಲ್ಲಿರುವ ಸೆವೆನ್ ಹಿಲ್ಸ್ ಆಸ್ಪತ್ರೆಯಲ್ಲಿ ಕ್ವಾರಂಟೈನ್ ನಲ್ಲಿ ಇಡಲಾಗುವುದು ಎಂದು ವಿವರಿಸಿದ್ದಾರೆ.