ಚೆನ್ನೈ: ಬರೋಬ್ಬರಿ 104 ವರ್ಷದ ಪತಿ ಸಾವನ್ನಪ್ಪಿದ್ದ ಒಂದು ಗಂಟೆಯೊಳಗೆ ಶತಾಯುಷಿ (100ವರ್ಷ) ಪತ್ನಿ ಕೂಡಾ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಪುದುಕೋಟೈ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ನಡೆದಿದೆ ಎಂದು ವರದಿ ತಿಳಿಸಿದೆ.
ಪತಿ ವೇಟ್ರಿವೇಲ್ (104ವರ್ಷ) ಹಾಗೂ ಪತ್ನಿ ಪಿಚಾಯಿ(100) ದಂಪತಿ ವೈವಾಹಿಕ ಜೀವನಕ್ಕೆ 75 ವರ್ಷ ತುಂಬಿತ್ತು. ಪುದುಕೋಟೈಯ ಅಲಾಂಗುಡಿ ತಾಲೂಕಿನ ಕುಪ್ಪಕ್ಕುಡಿ ಆದಿ ದ್ರಾವಿಡ ಕಾಲೋನಿಯಲ್ಲಿ ವಾಸವಾಗಿದ್ದರು. ಶತಾಯುಷಿ ದಂಪತಿ ಆರೋಗ್ಯವಾಗಿದ್ದರು ಎಂದು ವರದಿ ವಿವರಿಸಿದೆ.
ಸೋಮವಾರ ರಾತ್ರಿ ವೇಟ್ರಿವೇಲ್ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಮೊಮ್ಮಕ್ಕಳು ಹಾಗೂ ಮರಿಮೊಮ್ಮಕ್ಕಳು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅಷ್ಟರಲ್ಲಿಯೇ ಅವರು ನಿಧನರಾಗಿರುವುದಾಗಿ ವೈದ್ಯರು ತಿಳಿಸಿದ್ದರು. ಪಾರ್ಥಿವ ಶರೀರವನ್ನು ಮನೆಗೆ ತಂದ ನಂತರ ಸಂಬಂಧಿಕರು ಆಗಮಿಸಿ ಅಂತಿಮ ನಮನ ಸಲ್ಲಿಸಿದ್ದರು. ಈ ವೇಳೆ ಪತ್ನಿ ಪಿಚಾಯಿ ಪತಿಯ ಪಾರ್ಥಿವ ಶರೀರ ನೋಡುತ್ತಲೇ ಕುಸಿದು ಬಿದ್ದಿದ್ದರು.
ಸ್ಥಳೀಯ ವೈದ್ಯರು ಬಂದು ಆಕೆಯ ನಾಡಿಯನ್ನು ಪರೀಕ್ಷಿಸಿ ಸಾವನ್ನಪ್ಪಿರುವುದಾಗಿ ತಿಳಿಸಿದ್ದರು. ಪತಿ ಸಾವನ್ನಪ್ಪಿದ್ದ ಗಂಟೆಯೊಳಗೆ ಪತ್ನಿಯೂ ವಿಧಿವಶರಾಗಿರುವುದಾಗಿ ಮೊಮ್ಮಗ ಎಲ್.ಕುಮಾರವೇಲ್ ತಿಳಿಸಿದ್ದಾರೆ.
ಶತಾಯುಷಿ ದಂಪತಿಗೆ ಐವರು ಪುತ್ರರು, ಒಬ್ಬಳು ಮಗಳು. 23 ಮೊಮ್ಮಕ್ಕಳು ಹಾಗೂ ಹಲವು ಮರಿಮೊಮ್ಮಕ್ಕಳನ್ನು ಹೊಂದಿರುವುದಾಗಿ ವರದಿ ತಿಳಿಸಿದೆ.