Advertisement

ಹೊನ್ನಾಳಿ ತುಂಗಭದ್ರಾ ಸೇತುವೆಗೆ ನೂರರ ಹಿರಿಮೆ

05:13 PM Apr 11, 2022 | Team Udayavani |

ದಾವಣಗೆರೆ: ಕಟ್ಟಿದ ನಾಲ್ಕೈದು ವರ್ಷಗಳಲ್ಲೇ ಸೇತುವೆಗಳು ಕುಸಿಯುವ ಸುದ್ದಿ ಸಾಕಷ್ಟು ಕೇಳಿಬರುತ್ತಿರುವ ಹೊತ್ತಲ್ಲಿ ಸೇತುವೆಯೊಂದು ನೂರು ವರ್ಷವಾದರೂ ಗಟ್ಟಿಮುಟ್ಟಾಗಿ ನಿಂತಿರುವುದು ಸೋಜಿಗವೇ ಸರಿ. ಇಂಥ ಅಚ್ಚರಿಗೆ ಹೊನ್ನಾಳಿ ಸಮೀಪ ತುಂಗಭದ್ರಾ ನದಿಗೆ ಕಟ್ಟಿರುವ ಸೇತುವೆ ಸಾಕ್ಷಿಯಾಗಿದೆ. ನೂರು ವರ್ಷಗಳ ಹಿಂದೆ ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ನಡುವೆ ಸಂಪರ್ಕ ಕಲ್ಪಿಸಿ ಎಲ್ಲ ರೀತಿಯ ವ್ಯಾಪಾರ, ವ್ಯವಹಾರ, ಕೈಗಾರಿಕೆ ಸಂಪರ್ಕಗಳಿಗೆ ಕೈಜೋಡಿಸಿದ ಈ ಸೇತುವೆ, ಆಗ ರಾಜ್ಯದ ಅತಿ ಉದ್ದನೆಯ ಕಮಾನು ಸೇತುವೆ ಎಂಬ ಪ್ರಸಿದ್ಧಿಗೂ ಪಾತ್ರವಾಗಿತ್ತು.

Advertisement

ಈ ಸೇತುವೆ ಈಗಲೂ ಗಟ್ಟಿಮುಟ್ಟಾಗಿದ್ದು ಶತಾಯುಷಿಯಾಗಲು ಸೇತುವೆ ನಿರ್ಮಾಣದ ಮೇಲ್ವಿಚಾರಣೆ ಹೊತ್ತಿದ್ದ ಸರ್‌ ಎಂ.ವಿಶ್ವೇಶ್ವರಯ್ಯನವರು ಸಹ ಕಾರಣ ಎಂಬುದನ್ನು ಮರೆಯುವಂತಿಲ್ಲ. 1922ರಲ್ಲಿ ಈ ಸೇತುವೆಯನ್ನು ಕೇವಲ 3.28 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸೇತುವೆಯು 365 ಮೀಟರ್‌ ಉದ್ದ ಹಾಗೂ ನಾಲ್ಕು ಮೀಟರ್‌ ಅಗಲವಿದೆ. ಪ್ರತಿ 15 ಮೀಟರ್‌ಗೆ ಒಂದರಂತೆ ಒಟ್ಟು 21 ಕಮಾನುಗಳಿವೆ. ಕೇವಲ ಸುಣ್ಣ, ಬೆಲ್ಲ ಮತ್ತು ಮರಳನ್ನು ಉಪಯೋಗಿಸಿ ಸೇತುವೆ ನಿರ್ಮಾಣ ಮಾಡಲಾಗಿದ್ದು, ಸಿಮೆಂಟ್‌ ಹಾಗೂ ಕಬ್ಬಿಣ ಬಳಸದೆ ನಿರ್ಮಿಸಿರುವುದು ವಿಶೇಷ.

ಗಟ್ಟಿತನದ ಗುಟ್ಟು

ಮೈಸೂರಿನ ಒಡೆಯರ್‌ ಕಾಲದಲ್ಲಿ ಅಂದರೆ 1918ರಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿ 1922ರಲ್ಲಿ ಮುಕ್ತಾಯಗೊಂಡು ಸಾರ್ವಜನಿಕ ಸೇವೆಗೆ ಸಮರ್ಪಣೆಯಾಗಿದೆ. ಸೇತುವೆ ನಿರ್ಮಾಣಕ್ಕೆ ಕರಿ ಕಲ್ಲುಗಳನ್ನು ಬಳಸಲಾಗಿದೆ. ಸೇತುವೆಯ ಎರಡು ಕಮಾನುಗಳ ಮಧ್ಯೆ 60 ಅಡಿ ಎತ್ತರ ಹಾಗೂ 40 ಅಡಿ ಅಗಲದ ಕಂಬಗಳಿದ್ದು ಈಗಲೂ ಗಟ್ಟಿಯಾಗಿವೆ. 20 ಅಡಿಗೂ ಹೆಚ್ಚಿನ ಆಳದ ಈ ಕಂಬಗಳ ಬುನಾದಿಯು ಸೇತುವೆ ಇಂದಿಗೂ ಸುರಕ್ಷಿತವಾಗಿರಲು ಸಹಾಯಕವಾಗಿವೆ. ನೂರಿನ್ನೂರು ಟನ್‌ ತೂಕದ ವಾಹನಗಳು ಸಂಚರಿಸಿದರೂ ಸೇತುವೆ ಸ್ವಲ್ಪವೂ ಅಲುಗಾಡುವುದಿಲ್ಲ. ಮಳೆಗಾಲದಲ್ಲಿ ನದಿ ತುಂಬಿ ಬಿರುಸಾಗಿ ನೀರು ಹರಿದರೂ ಸೇತುವೆಗೆ ಯಾವುದೇ ಅಪಾಯವೂ ಆಗಿಲ್ಲ . ಈ ಸೇತುವೆಯ ಮೂಲಕ ಕೋಟ್ಯಂತರ ವಾಹನ, ಜನ ಸಂಚರಿಸಿದ್ದು ಇದಕ್ಕೆ ಲೆಕ್ಕವೇ ಇಲ್ಲ. ಇದು ಶತಾಯುಷಿ ಸೇತುವೆಯ ಗಟ್ಟಿತನಕ್ಕೆ ಸಾಕ್ಷಿ.

ಹೊಸ ಸೇತುವೆ ಬೇಕಿರಲಿಲ್ಲ

Advertisement

ಕಳೆದ ಎರಡು ವರ್ಷಗಳ ಹಿಂದೆ ಪಕ್ಕದಲ್ಲೇ 23 ಕೋಟಿ ರೂ. ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಿಸಲಾಗಿದೆ. ಈ ಸೇತುವೆ ನಿರ್ಮಾಣವಾದಾಗಿನಿಂದ ಈ ಕಮಾನು ಸೇತುವೆ ಮೇಲಿನ ಒತ್ತಡ ಸ್ವಲ್ಪ ಕಡಿಮೆಯಾಗಿದೆ. ಈಗ ಕಮಾನು ಸೇತುವೆ ಮೇಲೆ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಒಂದು ವೇಳೆ ಈ ಸೇತುವೆ ಎರಡು ದೊಡ್ಡ ವಾಹನಗಳು ಸಂಚರಿಸುವಷ್ಟು ಅಗಲವಿದ್ದಿದ್ದರೆ ಇನ್ನೊಂದು ಹೊಸ ಸೇತುವೆ ನಿರ್ಮಾಣದ ಅಗತ್ಯವೇ ಇರಲಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಸೇತುವೆಗೆ ನೂರು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ನಿರ್ಮಾಣದ ಕುತೂಹಲಕಾರಿ ಅಂಶಗಳನ್ನು ಹಂಚಿಕೊಳ್ಳುವ ಮತ್ತು ಸೇತುವೆ 100 ವರ್ಷ ಗಟ್ಟಿಯಾಗಿ ಬಾಳಿದ ಘನತೆ ಸಾರುವ ಸಲುವಾಗಿ ಶತಮಾನೋತ್ಸವ ಆಚರಿಸಲು ಸ್ಥಳೀಯರು ಮುಂದಾಗಿದ್ದಾರೆ. ಹೊನ್ನಾಳಿಯ ನಿವೃತ್ತ ಎಂಜಿನಿಯರ್‌ ಆನಂದಕುಮಾರ್‌ ಅಧ್ಯಕ್ಷತೆಯ ಶತಮಾನೋತ್ಸವ ಸಮಿತಿ ಕೂಡ ರಚನೆಯಾಗಿದೆ. ‘ನಮ್ಮ ಸೇತುವೆ ನಮ್ಮ ಹೆಮ್ಮೆ’ ಹೆಸರಲ್ಲಿ ಶತಮಾನೋತ್ಸವ ಆಚರಣೆಗೆ ಸಿದ್ಧತೆ ನಡೆದಿದೆ. ಶತ ವರ್ಷ ಪೂರ್ಣಗೊಳಿಸಿಯೂ ಅಲುಗಾಡದೆ ನಿಂತ ಈ ಸೇತುವೆ ಅಂದಿನ ಎಂಜಿನಿಯರ್‌ಗಳ ಕಾರ್ಯಕ್ಷಮತೆಗೆ ಹಿಡಿದ ಕೈಗನ್ನಡಿ.

ಹೊನ್ನಾಳಿ ಬಳಿ ತುಂಗಭದ್ರಾ ನದಿಗೆ ಕಟ್ಟಿರುವ ಸೇತುವೆಗೆ ನೂರು ವರ್ಷ ದಾಟಿದೆ. ಸೇತುವೆಯೊಂದು ನೂರು ವರ್ಷ ಪೂರೈಸಿರುವುದು ವಿಶೇಷ. ಆದ್ದರಿಂದ ಈ ಸೇತುವೆಯನ್ನು ಸರ್ಕಾರ ಪಾರಂಪರಿಕ ತಾಣವೆಂದು ಘೋಷಿಸಬೇಕು. ಜತೆಗೆ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಸುತ್ತ ನಡೆಯುತ್ತಿರುವ ಮರಳುಗಾರಿಕೆ ತಡೆಗೆ ಕ್ರಮ ವಹಿಸಬೇಕು. ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲಕರ ವ್ಯವಸ್ಥೆ ಮಾಡಿಕೊಡಬೇಕು ಎಂಬ ಬೇಡಿಕೆಯನ್ನು ಸರ್ಕಾರದ ಮುಂದಿಡಲು ಯೋಚಿಸಲಾಗಿದೆ. ಸೇತುವೆಗೆ 100 ವರ್ಷ ಸಂದ ಪ್ರಯುಕ್ತ ಮೇ ತಿಂಗಳಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಶತಮಾನೋತ್ಸವ ಆಚರಣೆಗೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಆನಂದ ರಾವ್‌, ನಿವೃತ್ತ ಎಂಜಿನಿಯರ್‌-ಹೊನ್ನಾಳಿ

-ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next