ಮೋದಿ ಸರ್ಕಾರ ದೇಶೀಯ ವಿಮಾನನಿಲ್ದಾಣಗಳ ಅಭಿವೃದ್ಧಿಗೆ ಭಾರೀ ಗಮನ ಹರಿಸಿದೆ. ಜನಸಾಮಾನ್ಯರೂ ಕಡಿಮೆವೆಚ್ಚದಲ್ಲಿ ವಿಮಾನ ಹತ್ತುವಂತಾಗಬೇಕು ಎನ್ನುವ ಉದ್ದೇಶದಿಂದ ಉಡಾನ್ ಯೋಜನೆಯನ್ನು ಜಾರಿ ಮಾಡಲಾಗಿದೆ. ಕಳೆದ ವರ್ಷ ಉಡಾನ್ ಅಡಿ 50 ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ 480 ಕೋಟಿ ರೂ. ಮೀಸಲಿಡಲಾಗಿತ್ತು. ಈಗ ತನ್ನ ಗುರಿಯನ್ನು ಕೇಂದ್ರ ವಿಸ್ತರಿಸಿಕೊಂಡಿದೆ.
2025ರೊಳಗೆ 100 ಹೊಸ ವಿಮಾನನಿಲ್ದಾಣಗಳನ್ನು ನಿರ್ಮಿಸುವು ದಾಗಿ ಘೋಷಿಸಿದೆ. 2020-21ರ ಅವಧಿಯಲ್ಲಿ ಸಾರಿಗೆ ಮೂಲಸೌಕರ್ಯ ನಿರ್ಮಾಣಕ್ಕಾಗಿ ಕೇಂದ್ರ 1.7 ಲಕ್ಷ ಕೋಟಿ ರೂ.ಗಳನ್ನು ಮೀಸಲಿರಿಸಿದೆ. ಇದರಲ್ಲಿ 465 ಕೋಟಿ ರೂ. ಉಡಾನ್‌ಗೂ ಸಂದಾಯವಾಗಲಿದೆ.
ಪಿಪಿಪಿಯಡಿ 150 ರೈಲು ಸಂಚಾರ: ಸರ್ಕಾರಿ ಯೋಜನೆಗಳಿಗೆ ಖಾಸಗಿ ನೆರವನ್ನು (ಪಿಪಿಪಿ) ಕೇಂದ್ರ ಸರ್ಕಾರ ಪಡೆಯುತ್ತಿದೆ. ಅಂದರೆ ಸರ್ಕಾರದ ಯೋಜನೆಗಳಲ್ಲಿ ಖಾಸಗಿ ಕಂಪನಿಗಳೂ ಹೂಡಿಕೆ ಮಾಡುತ್ತವೆ. ಲಾಭದಲ್ಲಿ ಅವಕ್ಕೂ ಪಾಲು ಸಿಗುತ್ತದೆ. ಈ ಬಾರಿ 150 ಹೊಸ ಟ್ರೈನುಗಳನ್ನು ಪಿಪಿಪಿ ಮಾದರಿಯಲ್ಲಿ ಓಡಿಸಲು ಕೇಂದ್ರ ನಿರ್ಧರಿಸಿದೆ. ಅಲ್ಲದೇ ನಾಲ್ಕು ನಿಲ್ದಾಣಗಳನ್ನು ಪುನರಭಿವೃದ್ಧಿ ಮಾಡಲಾಗುತ್ತದೆ. ಪ್ರವಾಸಿ ತಾಣಗಳನ್ನು ಸಂಪರ್ಕಿಸಲು ಇನ್ನೂ ಹೆಚ್ಚು ತೇಜಸ್ ಮಾದರಿಯ ರೈಲುಗಳು ಕಾರ್ಯಾಚರಣೆ ಆರಂಭಿಸಲಿವೆ ಎಂದು ವಿತ್ತ ಸಚಿವೆ ನಿರ್ಮಲಾ ಭರವಸೆ ನೀಡಿದ್ದಾರೆ.
ರೈಲ್ವೆ ಟ್ರ್ಯಾಕ್ ಬದಿ ಸೌರವಿದ್ಯುತ್: ರೈಲ್ವೆ ಟ್ರ್ಯಾಕ್‌ಗಳ ಎರಡೂ ಬದಿಯಲ್ಲಿ ಬೃಹತ್ ಪ್ರಮಾಣದಲ್ಲಿ ಸೌರ ವಿದ್ಯುತ್ ಘಟಕಗಳನ್ನು ಸ್ಥಾಪಿಸಲು ಕೇಂದ್ರ ಚಿಂತನೆ ನಡೆಸುತ್ತಿದೆ. ಸಾಮಾನ್ಯವಾಗಿ ಟ್ರ್ಯಾಕ್‌ಗಳ ಪಕ್ಕದಲ್ಲಿ ಜಾಗ ಖಾಲಿಯಿರುತ್ತದೆ. ಅಲ್ಲಿ ಸೌರವಿದ್ಯುತ್ ಘಟಕ ಸ್ಥಾಪಿಸುವುದು ಸೃಜನಶೀಲ ಚಿಂತನೆ. ಇದು ಎಷ್ಟರಮಟ್ಟಿಗೆ ಕಾರ್ಯಸಾಧು ಎನ್ನುವುದನ್ನು ಕಾದು ನೋಡಬೇಕು.
ವಿಮಾನಯಾನಕ್ಕೆ 3797 ಕೋಟಿ ರೂ.: ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಈ ಬಾರಿ 3797 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಕಳೆದ ಬಾರಿಯ ಅನುದಾನಕ್ಕೆ ಹೋಲಿಸಿದರೆ ಶೇ.2.62ರಷ್ಟು ಹೆಚ್ಚಳವಾಗಿದೆ. ಕಳೆದ ಬಾರಿ 3700 ಕೋಟಿ ರೂ.ಗಳನ್ನು ನೀಡಲಾಗಿತ್ತು. ಈ ಬಾರಿ ಎರಡು ಬಿ777 ವಿಮಾನಗಳನ್ನು ಖರೀದಿಸಲು ನಿರ್ಧರಿಸಲಾಗಿದೆ. ಪ್ರಧಾನಿ, ರಾಷ್ಟ್ರಪತಿ, ಉಪರಾಷ್ಟ್ರಪತಿಗಳ ಪ್ರಯಾಣಕ್ಕಾಗಿ ಬಳಕೆಯಾಗುವ ಈ ವಿಮಾನಗಳ ಖರೀದಿಗೆ 810 ಕೋಟಿ ರೂ. ಮೀಸಲಿಡಲಾಗಿದೆ. ಇದಕ್ಕೂ ಮುನ್ನ ಈ ಮೂವರು ಏರ್ ಇಂಡಿಯಾದ ಬಿ747 ವಿಮಾನಗಳಲ್ಲಿ ಪ್ರಯಾಣಿಸುತ್ತಿದ್ದರು.
ಪ್ರಸ್ತುತ ವರ್ಷದಂತೆ ಮುಂದಿನ ವರ್ಷಕ್ಕೂ ಏರ್ ಇಂಡಿಯಾಕ್ಕೆ 1 ಲಕ್ಷ ರೂ.ಗಳನ್ನು ಮಾತ್ರ ನೀಡಲಾಗಿದೆ. ಈ ಕ್ರಮ ವಿಚಿತ್ರವೆನಿಸಿದೆ. ಏರ್ ಇಂಡಿಯಾವನ್ನು ಮಾರಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎನ್ನುವುದನ್ನು ಇಲ್ಲಿ ಗಮನಿಸಬೇಕು. ಸಾಲಬಾಧಿತ ಈ ಸಂಸ್ಥೆಯನ್ನು ಮತ್ತೆ ಹಳಿಗೆ ತರಲು ಏರ್ ಇಂಡಿಯಾ ಅಸೆಟ್ ಹೋಲ್ಡಿಂಗ್ ಲಿಮಿಟೆಡ್ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಸದ್ಯದ ಬಜೆಟ್ ದಾಖಲೆಗಳ ಪ್ರಕಾರ ಈ ಸಂಸ್ಥೆಗೆ 2205 ಕೋಟಿ ರೂ. ಎತ್ತಿಡಲಾಗಿದೆ.