Advertisement

ಪೋಷಕರಿಂದ ತಿಂಗಳಿಗೆ 100 ರೂ. ಸಂಗ್ರಹ ; ಶಿಕ್ಷಣ ಸಚಿವ ನಾಗೇಶ್ ಸ್ಪಷ್ಟನೆ

03:38 PM Oct 22, 2022 | Team Udayavani |

ಮೈಸೂರು : ”ಶಾಲಾ ಶ್ರೇಯೋಭಿವೃದ್ಧಿಗೆ ಪೋಷಕರಿಂದ ಹಣ ಸಂಗ್ರಹ ವಿಚಾರ ಶಿಕ್ಷಣ ಇಲಾಖೆ ಆಯುಕ್ತರು ಹೊರಡಿಸಿರುವ ಸುತ್ತೋಲೆಯಾಗಿದ್ದು, ಶಿಕ್ಷಣ ಮಂತ್ರಿಗಾಗಲಿ, ಮುಖ್ಯಮಂತ್ರಿಗಳಿಗಾಗಲಿ ಸಂಬಂಧ ಇಲ್ಲ” ಎಂದು ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಶನಿವಾರ ಸ್ಪಷ್ಟನೆ ನೀಡಿದ್ದಾರೆ.

Advertisement

”ಕೆಲವರು ಸರಿಯಾಗಿ ಓದಿಕೊಳ್ಳದೇ ಪ್ರತಿಕ್ರಿಯೆ ನೀಡಿದ್ದು,ತಕ್ಷಣ ನಾನು ಆಯುಕ್ತರನ್ನು ಕೇಳಿದೆ. ಎಸ್‌ಡಿಎಂಸಿಗಳ ಸಲಹೆ ಮೇರೆಗೆ ಈ ಸುತ್ತೋಲೆ ಹೊರಡಿಸಲಾಗಿದೆ. ಗೊಂದಲಗಳನ್ನು ನಿವಾರಿಸಲು, ಸುತ್ತೋಲೆ ಹೊರಡಿಸಲು ಆಯುಕ್ತರಿಗೆ ಸಂವಿಧಾನದಲ್ಲೇ ಅವಕಾಶ ಕಲ್ಪಿಸಲಾಗಿದೆ. ಎಲ್ಲ ಸುತ್ತೋಲೆಗಳನ್ನೂ ಸರ್ಕಾರದ ಗಮನಕ್ಕೆ ತಂದೇ ಹೊರಡಿಸಬೇಕು ಅಂತೇನೂ ಇಲ್ಲ.ಶಾಲೆಯ ಅಭಿವೃದ್ಧಿಗೆ ಸ್ಥಳೀಯವಾಗಿ ಹಣ ಸಂಗ್ರಹಿಸಲು ಆರ್‌ಟಿಇ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಆರ್‌ಟಿಇ ಒಳ್ಳೆಯ ಕಾಯ್ದೆ, ಅದನ್ನು ಜಾರಿಗೆ ತಂದವರು ಸಿದ್ದರಾಮಯ್ಯನವರ ಸರ್ಕಾರದವರು.ಎಲ್ಲಿಯೂ ಪೋಷಕರು ಕಡ್ಡಾಯವಾಗಿ ಹಣ ಕೊಡಬೇಕು ಎಂದು ಹೇಳಿಲ್ಲ” ಎಂದು ಸಚಿವ ನಾಗೇಶ್ ಹೇಳಿದ್ದಾರೆ.

”ಅವರಾಗಿಯೇ ಕೊಟ್ಟರೆ, ತಿಂಗಳಿಗೆ 100 ರೂಪಾಯಿವರೆಗೆ ಪಡೆದು ರಶೀದಿ ಕೊಡಬೇಕು. ಆದರೆ ದೇಶದಲ್ಲೇ ಕಾನೂನು ಪಂಡಿತ ಎನಿಸಿಕೊಂಡ ಸಿದ್ದರಾಮಯ್ಯ ಅವರು ಇದರಲ್ಲಿ ರಾಜಕೀಯ ಮಾಡೋದು ಸರಿಯಲ್ಲ. ಎಲ್‌ಕೆಜಿ ಹಾಗೂ ಯುಕೆಜಿ ತರಗತಿ ಶುರು ಮಾಡಿದ್ದಾರೆ. ಅವರಿಗೆ ಸಂಭಾವನೆ ಕೊಡುವ ನಿಟ್ಟಿನಲ್ಲಿ ಆಯಾ ಎಸ್‌ಡಿ‌ಎಂಸಿ ತೀರ್ಮಾನ ಮಾಡುತ್ತವೆ. ಸುತ್ತೋಲೆ ದುರುಪಯೋಗವಾದರೆ ಹಿಂಪಡೆಯಲಾಗುವುದು” ಎಂದು ಸಚಿವರು ಹೇಳಿದ್ದಾರೆ.

ಸಿದ್ದರಾಮಯ್ಯ ಆಕ್ರೋಶ

ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳ ಪೋಷಕರಿಂದ ಹಣ ಸಂಗ್ರಹಿಸುವಂತೆ ಹೊರಡಿಸಿರುವ ಆದೇಶವನ್ನು ಈ ಕೂಡಲೇ ಹಿಂಪಡೆಯಬೇಕು ಮತ್ತು ಅನುದಾನ ಕೊರತೆಯಿಂದ ಸ್ಥಗಿತಗೊಂಡಿರುವ ಎಲ್ಲಾ ಶೈಕ್ಷಣಿಕ ಯೋಜನೆಗಳಿಗೆ ಪುನರ್ ಚಾಲನೆ ನೀಡಬೇಕು ಎಂದು ರಾಜ್ಯ ಸರ್ಕಾರವನ್ನು ಸಿದ್ದರಾಮಯ್ಯ ಒತ್ತಾಯಿಸಿದ್ದರು.

Advertisement

ಸರ್ಕಾರಿ ಶಾಲೆಯ ಬಡ ಮಕ್ಕಳ ಮೇಲೆ ಬಿಜೆಪಿ ಸರ್ಕಾರದ ಭ್ರಷ್ಟ ಕಣ್ಣು ಬಿದ್ದಿದೆ.ಕಮಿಷನ್ ಹೆಸರಲ್ಲಿ ರಾಜ್ಯದ ಖಜಾನೆ ಲೂಟಿ ಆಯಿತು, ಈಗ ಬಡ ಮಕ್ಕಳ ಪೋಷಕರ ಜೇಬಿಗೂ ಕತ್ತರಿ..!. ಬಿಜೆಪಿ ಸರ್ಕಾರಕ್ಕೆ ಇಂಥಾ ದೈನೇಸಿ ಸ್ಥಿತಿ ಬರಬಾರದಿತ್ತು.ವಿದ್ಯಾರ್ಥಿಗಳಿಗೆ ಹಾಲು,‌ ಬಿಸಿ ಊಟ, ಸಮವಸ್ತ್ರ-ಶೂ, ವಿದ್ಯಾಸಿರಿ, ಹಾಸ್ಟೆಲ್ ಸೌಲಭ್ಯಗಳನ್ನು ನೀಡಿದ್ದು ನಾವು. ಅವರಿಂದ ಒಂದೊಂದನ್ನೇ ಕಿತ್ತುಕೊಳ್ಳುತ್ತಿರುವ ಬಿಜೆಪಿ ಸರ್ಕಾರ ಈಗ ಅವರಿಂದ ದುಡ್ಡು‌ಕಿತ್ತುಕೊಳ್ಳಲು ಹೊರಟಿದೆ ಎಂದು ಸಿದ್ದರಾಮಯ್ಯ ಅವ್ರು ಸರಣಿ ಟ್ವೀಟ್ ಮೂಲಕ ಆಕ್ರೋಶ ಹೊರ ಹಾಕಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next