ರಕ್ಷಿತ್ ಶೆಟ್ಟಿ ನಟನೆಯ “777 ಚಾರ್ಲಿ’ ಸಿನಿಮಾದ ಕ್ರೇಜ್ ದಿನೇ ದಿನೇ ಹೆಚ್ಚುತ್ತಿದೆ. ಈಗಾಗಲೇ ಹಲವು ಕಡೆಗಳಲ್ಲಿ ಚಿತ್ರದ ಪ್ರೀಮಿಯರ್ ಶೋ ನಡೆದಿದ್ದು, ಸಿನಿಮಾ ನೋಡಿದವರಿಂದ ಮೆಚ್ಚುಗೆ ವ್ಯಕ್ತವಾಗುವ ಜೊತೆಗೆ ಬಾಯಿಮಾತಿನ ಮೂಲಕ ಚಿತ್ರ ಹೆಚ್ಚು ಪ್ರಚಾರ ಪಡೆದುಕೊಳ್ಳುತ್ತಿದೆ. ಅದರಲ್ಲೂ ಪ್ರಾಣಿ ಪ್ರಿಯರನ್ನು ಈ ಚಿತ್ರ ಹೆಚ್ಚೆಚ್ಚು ಸೆಳೆಯುತ್ತಿದೆ. ಈ ಮೂಲಕ ಈ ವರ್ಷದ ಬಿಗ್ ಹಿಟ್ ಆಗಿ “777 ಚಾರ್ಲಿ’ ಹೊರಹೊಮ್ಮುವ ಎಲ್ಲಾ ಲಕ್ಷಣಗಳು ದಟ್ಟವಾಗಿ ಕಾಣುತ್ತಿವೆ.
ಚಿತ್ರ ಜೂನ್ 10 ರಂದು ತೆರೆಕಾಣುತ್ತಿದೆ. ಆದರೆ, ಒಂದು ದಿನ ಮುನ್ನ ಅಂದರೆ ಇಂದು (ಜೂ.09) ಸುಮಾರು 100 ಕಡೆಗಳಲ್ಲಿ ಚಿತ್ರದ ಪ್ರೀಮಿಯರ್ ಶೋ ನಡೆಯಲಿದೆ. ಇದು “777 ಚಾರ್ಲಿ’ ಚಿತ್ರದ ಕ್ರೇಜ್ ಅನ್ನು ತೋರಿಸುತ್ತಿದೆ. ಈಗಾಗಲೇ ಚಿತ್ರತಂಡ ಉತ್ತರ ಭಾರತವನ್ನು ಸುತ್ತಿ ಬಂದಿದ್ದು, ಎಲ್ಲೆಡೆಯಿಂದ ಮೆಚ್ಚುಗೆ ಸಿಗುತ್ತಿದೆ.
ದೆಹಲಿಯಲ್ಲಿ ಆಯೋಜಿಸಿದ್ದ ಪ್ರೀಮಿಯರ್ ಶೋನಲ್ಲಿ ಲೋಕಸಭಾ ಸದಸ್ಯೆ ಮನೇಕಾ ಗಾಂಧಿ ಕೂಡಾ ಸಿನಿಮಾ ವೀಕ್ಷಿಸಿ, “ಈ ಸಿನಿಮಾಕ್ಕೆ ನಾನು 5 ಸ್ಟಾರ್ ಕೊಡುತ್ತೇನೆ’ ಎಂದಿದ್ದರು. ಇದೇ ರೀತಿ ಪ್ರೀಮಿಯರ್ ಶೋ ವೀಕ್ಷಿಸಿದ ಎಲ್ಲರೂ ಕ್ಲೈಮ್ಯಾಕ್ಸ್‌ನಲ್ಲಿ ಎದ್ದು ನಿಂತು ಚಪ್ಪಾಳೆ ಮೂಲಕ ಸಿನಿಮಾಕ್ಕೆ ಜೈಕಾರ ಹಾಕಿದ್ದಾರೆ.
ಇದನ್ನೂ ಓದಿ:2022ರ ವಿಶ್ವದ ಟಾಪ್ 5 ಅತಿ ದುಬಾರಿ ನಗರಗಳಿವು!
“ಕೆಜಿಎಫ್-2′ ಸಿನಿಮಾದ ಸೂಪರ್ ಹಿಟ್ ಸಕ್ಸಸ್ ಬಳಿಕ, ಐದು ಭಾಷೆಗಳಲ್ಲಿ ಏಕಕಾಲದಲ್ಲಿ ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಿಡುಗಡೆಯಾಗುತ್ತಿರುವ ಮತ್ತೂಂದು ಕನ್ನಡ ಸಿನಿಮಾ “777 ಚಾರ್ಲಿ’ಯ ಬಗ್ಗೆ ಇಡೀ ಭಾರತೀಯ ಚಿತ್ರರಂಗವೇ ಕುತೂಹಲದಿಂದ ಎದುರು ನೋಡುತ್ತಿದೆ. ಈ ಚಿತ್ರವನ್ನು ಕಿರಣ್ ರಾಜ್ ನಿರ್ದೇಶಿಸಿದ್ದಾರೆ. “ಇದೊಂದು ಸಂಪೂರ್ಣ ಭಾವನಾತ್ಮಕ ಕಥಾಹಂದರದ ಸಿನಿಮಾ. ಹಾಗಾಗಿ ಯಾವುದೇ ಭಾಷೆಯ ಹಂಗಿಲ್ಲದೆ ಎಲ್ಲ ಪ್ರೇಕ್ಷಕರಿಗೂ ಸಿನಿಮಾ ಕನೆಕ್ಟ್ ಆಗುತ್ತದೆ. ಎಲ್ಲರ ಮನಮುಟ್ಟುವಂಥ ಸಿನಿಮಾ ಮಾಡಿದ್ದೇವೆ ಎಂಬ ನಂಬಿಕೆ ಇದೆ’ ಎಂಬುದು “777 ಚಾರ್ಲಿ’ ಬಗ್ಗೆ ನಿರ್ದೇಶಕ ಕಿರಣ್ ರಾಜ್ ಮಾತು.
ಹೌದು, ಸುಮಾರು ಹತ್ತು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ “ರಿಕ್ಕಿ’, “ಕಿರಿಕ್ ಪಾರ್ಟಿ’ ಮೊದಲಾದ ಸಿನಿಮಾಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿರುವ ಕಿರಣ್ ರಾಜ್, “777 ಚಾರ್ಲಿ’ ಸಿನಿಮಾದ ಮೂಲಕ ಪೂರ್ಣ ಪ್ರಮಾಣದಲ್ಲಿ ನಿರ್ದೇಶಕನಾಗಿ ಸ್ಯಾಂಡಲ್ ವುಡ್‌ಗೆ ಪರಿಚಯವಾಗುತ್ತಿದ್ದಾರೆ.
“ಮೊದಲ ನಿರ್ದೇಶನದ ಸಿನಿಮಾಕ್ಕೆ ಸುಮಾರು ಐದಾರು ವರ್ಷ ಸಮಯ ತೆಗೆದುಕೊಳ್ಳುವುದು ನಿಜಕ್ಕೂ ತುಂಬ ದೊಡ್ಡ ವಿಷಯ. ಆದ್ರೆ ಸಿನಿಮಾದ ಕಂಟೆಂಟ್ ಆ ಥರ ಇರುವುದರಿಂದ ಖಂಡಿತವಾಗಿಯೂ ಸಿನಿಮಾ ಮಾಡಲು ಅಷ್ಟು ಸಮಯ ಬೇಕಾಗಿತ್ತು’ ಎನ್ನುತ್ತಾರೆ ಕಿರಣ್ ರಾಜ್.