Advertisement
ಇದು ತಾಲೂಕಿನ ಕುದೇರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಬಡಗಲಮೋಳೆಯ ಇಂದಿನ ಸ್ಥಿತಿಗತಿ. ಬಿಜೆಪಿ ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಹೂಡಿದ್ದ ಕುಗ್ರಾಮವಿದು.
Related Articles
Advertisement
ಕುಮಾರಸ್ವಾಮಿ ತಂಗಿದ್ದ ರಂಗಶೆಟ್ಟಿ ಅವರ ಮನೆಯಿರುವ ಬೀದಿಗೆ ಈಗ ಕುಮಾರಸ್ವಾಮಿ ಬೀದಿ ಎಂದು ಕರೆಯಲಾಗುತ್ತಿದೆ!
ಇಂದು ಏನಾಗಿದೆ ಬಡಗಲಮೋಳೆ?: ಮುಖ್ಯಮಂತ್ರಿ ಬಂದು ಬರೋಬ್ಬರಿ 12 ವರ್ಷಗಳು ಕಳೆದಿವೆ. ಗ್ರಾಮದಲ್ಲಿ ಅಂದು ಹಾಕಿದ್ದ ರಸ್ತೆಯ ಟಾರು ಕಿತ್ತು ಬಂದಿದೆ. ಮುಖ್ಯಮಂತ್ರಿ ಬಂದಿದ್ದಾಗ ನಿರ್ಮಾಣವಾಗಿದ್ದ ಮನೆಗಳು ಶಿಥಿಲವಾಗಿದೆ. ತರಾತುರಿಯಿಂದ ಕಟ್ಟಿದಾಗಲೇ ಅಲ್ಲಿ ಕಳಪೆ ಕಾಮಗಾರಿಯಾಗಿತ್ತು. ಕೆಲವು ಮನೆಗಳು ನೆಲಕ್ಕುರುಳಿವೆ. ಶೌಚಾಲಯದ ಬಳಕೆಯೇ ಇಲ್ಲದೆ ಎಲ್ಲಾ ಕುಸಿದು ಬಿದ್ದಿದೆ. ಕೆಲವು ಬೀದಿಗಳಲ್ಲಿ ಇನ್ನೂ ಮಣ್ಣಿನ ರಸ್ತೆಗಳಿವೆ. ಮಳೆ ಬಂದರೆ ಚರಂಡಿ ಇಲ್ಲದೆ ನೀರೆಲ್ಲಾ ತಗ್ಗು ಪ್ರದೇಶಕ್ಕೆ ನುಗ್ಗುತ್ತದೆ. ಗ್ರಾಮಕ್ಕೆ ವಿಶೇಷ ಅನುದಾನವಾಗಲಿ ಇತರೆ ಮೂಲ ಸೌಲಭ್ಯಗಳಾಗಲಿ ಸಿಕ್ಕಿಲ್ಲ.
ನಮ್ಮ ಬದುಕು ಹಸನಾಗಿಲ್ಲ, ಹಗ್ಗ ಹೊಸೆಯುವ ಕಾಯಕದಲ್ಲಿ ನಮಗೆ ಪ್ರತಿ ನಿತ್ಯ 150 ರೂ. ರಿಂದ 200 ರೂ. ಲಭಿಸುತ್ತದೆ. ಇದೇ ಜೀವನಾಧಾರವಾಗಿದೆ. ಮುಖ್ಯಮಂತ್ರಿ ಬಂದಿದ್ದಾಗ ಮಧುವಣಗಿತ್ತಿಯಂತೆ ಸಿಂಗರಿಸಿಕೊಂಡಿದ್ದ ಊರು ಈಗ ಸಮಸ್ಯೆಗಳನ್ನು ಹೊದ್ದು ಮಲಗಿದೆ ಎನ್ನುತ್ತಾರೆ ಗ್ರಾಮದ ಶಿವಮ್ಮ.
ವಾಸ್ತವ್ಯ ಮಾಡಿದ್ದ ದಿನದ ಮೆಲುಕು: 2007ರ ಮೇ 27ರಂದು ಬೆಳಗಿನ ಜಾವ 3 ಗಂಟೆಗೆ ರಂಗಶೆಟ್ಟಿಯ ಮನೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಆಗಮಿಸಿ ಬೆಳಗಿನ ಜಾವ 4 ಗಂಟೆಯಲ್ಲಿ ಮಲಗಿದ್ದರು. ಕೇವಲ ಅರ್ಧ ಗಂಟೆ ಕಾಲ ಮಲಗಿ, ಎದ್ದು ನಿತ್ಯಕರ್ಮ ಮುಗಿಸಿ, ಸ್ನಾನ ಮಾಡಿ ಚಾಮರಾಜನಗರಕ್ಕೆ ತೆರಳಿದ್ದರು.
ಹಬ್ಬದ ವಾತಾವರಣ: ಮನೆಯ ಮಾಲೀಕ ರಂಗಶೆಟ್ಟಿ ಈಗ ಬದುಕಿಲ್ಲ. ಅಂದಿನ ಘಟನೆಯನ್ನು ರಂಗಶೆಟ್ಟಿ ಯವರ ಪತ್ನಿ ರತ್ನಮ್ಮ ನೆನಪು ಮಾಡಿಕೊಳ್ಳುತ್ತಾರೆ. ಅಂದು ನಮ್ಮ ಮನೆಯಲ್ಲಿ ಮುಖ್ಯಮಂತ್ರಿ ನಮ್ಮ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಅಂದು ರಾತ್ರಿ ನಮ್ಮ ಮನೆಯಲ್ಲೇ ಮಲಗಿದ್ದರು. ಅಂದು ನಮ್ಮ ಮನೆ ಗ್ರಾಮದಲ್ಲಿ ಹೊಸಮನೆಯಾಗಿತ್ತು. ನಮ್ಮ ಮನೆಯಲ್ಲಿ ಅವರಿಗೆ ಆತಿಥ್ಯ ನೀಡಲಾಗಿತ್ತು. ನಮ್ಮ ಮನೆಯಲ್ಲಿ ಅಂದು ಹಬ್ಬದ ವಾತಾವರಣ ಇತ್ತು.
ಹಸು ಕೊಡಿಸಲಿಲ್ಲ:ಮುಖ್ಯಮಂತ್ರಿಯವರು ಇಷ್ಟು ರಾಗಿ ಮುದ್ದೆ ತಿಂದ್ರು, ಅವರು ಮಲಗಲು ಮಂಚವನ್ನು ಅಧಿಕಾರಿಗಳೇ ತಂದಿದ್ರು. ಅವರು ಹೋದ ಮೇಲೆ ವಾಪಸ್ ತೆಗೆದುಕೊಂಡು ಹೋದ್ರು. ಆಮೇಲೆ ನಮ್ಮ ಯಜಮಾನರು ಒಂದು ಮಂಚ ಮಾಡ್ಸಿ ಆ ಜಾಗದಲ್ಲಿ ಹಾಕಿದರು. ನಮಗೆ ಎರಡು ಹಸು ಕೊಡ್ಸಿ, ಹಾಲು ಮಾರಿ ಜೀವನ ಸಾಗಿಸ್ತೀವಿ ಅಂತ ಯಜಮಾನ್ರು ಕೇಳಿಕಂಡ್ರು. ಕೊಡ್‌ಸ್ತೀನಿ ಅಂದ್ರು. ಆಮ್ಯಾಲೆ ಹಸೂನೂ ಬರಲಿಲ್ಲ, ಏನೂ ಬರಲಿಲ್ಲ ಎಂದು ರತ್ನಮ್ಮ ನಿಡುಸುಯ್ಯುತ್ತಾರೆ.
● ಕೆ.ಎಸ್.ಬನಶಂಕರ ಆರಾಧ್ಯ