Advertisement

TungaBhadra Dam ರಕ್ಷಣೆಗೆ ಶತಪ್ರಯತ್ನ: ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌

12:35 AM Aug 12, 2024 | Team Udayavani |

ಹೊಸಪೇಟೆ: ತುಂಗಭದ್ರಾ ಜಲಾಶಯದ ರಕ್ಷಣೆಗೆ ಶತಪ್ರಯತ್ನ ನಡೆಸಲಾಗುತ್ತಿದೆ. ನಾಲ್ಕೈದು ದಿನದೊಳಗೆ ಜಲಾಶಯದಲ್ಲಿ 53 ಟಿಎಂಸಿ ನೀರು ಉಳಿಸಲು ಕ್ರಮ ವಹಿಸಲಾಗುವುದು. ರೈತರಿಗೆ ನೀರು ದೊರೆಯುವಂತೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಪರಿಣತರ ತಂಡ ಜಲಾಶಯದ ಗೇಟ್‌ ದುರಸ್ತಿಗೆ ಕ್ರಮ ಕೈಗೊಂಡಿದೆ ಎಂದು ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಹೇಳಿದರು.

Advertisement

ತುಂಗಭದ್ರಾ ಜಲಾಶಯದ ವೈಕುಂಠ ಅತಿಥಿ ಗೃಹದಲ್ಲಿ ರವಿವಾರ ಸಭೆ ನಡೆಸಿದ ಬಳಿಕ ಅವರು ಮಾತನಾಡಿ, ಶನಿವಾರ ರಾತ್ರಿ 10.50ಕ್ಕೆ 19ನೇ ಗೇಟ್‌ ಮುರಿದು ಬಿದ್ದಿದೆ. ತತ್‌ಕ್ಷಣ ತುಂಗಭದ್ರಾ ಮಂಡಳಿ ಅ ಧಿಕಾರಿಗಳು ಈ ಭಾಗದ ಜಿಲ್ಲಾಡಳಿತಗಳಿಗೆ ಮಾಹಿತಿ ರವಾನಿಸಿದ್ದಾರೆ. ಈಗ ನಾವು ರೈತರನ್ನು ಬದುಕಿಸಬೇಕಿದೆ. ಜಲಾಶಯದಿಂದ ನೀರಾವರಿ ಮಾಡಲು ಎರಡೂ ಬೆಳೆಗಳಿಗೂ 115 ಟಿಎಂಸಿ ನೀರು ದೊರೆಯಬೇಕಿದೆ. ಈಗ ನಾವು 53 ಟಿಎಂಸಿ ನೀರು ಉಳಿಸಬೇಕಿದೆ. 19ನೇ ಗೇಟ್‌ ಜತೆಗೆ ಇನ್ನೂ 10 ಗೇಟ್‌ ದುರಸ್ತಿ ಕೆಲಸವೂ ನಡೆಯಲಿದೆ ಎಂದರು.

ಜಲಾಶಯದ 19ನೇ ಗೇಟ್‌ ಸೇರಿ ಜಲಾಶಯದ ಎಲ್ಲ ಗೇಟ್‌ಗಳ ದುರಸ್ತಿಗಾಗಿ ನಾರಾಯಣ ಎಂಜಿನಿಯರ್ಸ್‌, ಜೆಎಸ್‌ಡಬ್ಲ್ಯು ಸೇರಿದಂತೆ ಪರಿಣತರನ್ನು ಸಂಪರ್ಕಿಸಲಾಗಿದೆ. ಈಗಾಗಲೇ ಜಲಾಶಯದ ಹಳೇ ಮಾದರಿ ಕೂಡ ಪರಿಣತರಿಗೆ ನೀಡಲಾಗಿದೆ. ಹಳೇ ಮಾದರಿ ರೂಪಿಸಿದವರು ಕೂಡ ಆಗಮಿಸಲಿದ್ದಾರೆ. ನೀರಾವರಿ ಇಲಾಖೆಯ ಪರಿಣತರ ತಂಡ ಕೂಡ ಆಗಮಿಸಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೂ ತರಲಾಗಿದೆ ಎಂದರು.

ಜಲಾಶಯದ 2 ಕಿಮೀ ಸುತ್ತಮುತ್ತ ಭದ್ರತೆ
ಎಲ್ಲ 32 ಗೇಟ್‌ಗಳಿಂದ ಒಟ್ಟು 98 ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ. 19ನೇ ಗೇಟ್‌ನಿಂದಲೇ 38 ಸಾವಿರ ಕ್ಯುಸೆಕ್‌ ನೀರು ನದಿಗೆ ಬಿಡಲಾಗಿದೆ. ಟೆಕ್ನಿಕಲ್‌ ಟೀಂ ಕೆಲಸ ಮಾಡುತ್ತಿದೆ. ಮುಖ್ಯ ಎಂಜಿನಿಯರ್ಸ್‌ಗಳೂ ಇದ್ದಾರೆ. ಬೇರೆ ದುರಸ್ತಿ ಮಾದರಿಗಳನ್ನು ಪರಿಶೀಲಿಸಲಾಗುತ್ತಿದೆ. ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳ ನುರಿತ ತಜ್ಞರೂ ಇದ್ದಾರೆ. ದುರಸ್ತಿ ಕೆಲಸ ಪ್ರಾರಂಭವಾಗಿದೆ. ರೈತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು. ಜಲಾಶಯದ 2 ಕಿಮೀ ಸುತ್ತಮುತ್ತ ಭದ್ರತೆ ಕೈಗೊಳ್ಳಲಾಗುವುದು. ಟೆಕ್ನಿಕಲ್‌ ತಂಡ ಹೊರತುಪಡಿಸಿ ರಾಜಕಾರಣಿಗಳನ್ನು ಕೂಡ ಒಳ ಬಿಡಲಾಗುವುದಿಲ್ಲ. ಜಲಾಶಯದ ರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next