Advertisement

“ವರ್ಷದೊಳಗೆ 100 ದಲಿತ ಕುಟುಂಬ ಬೌದ್ಧ ಧರ್ಮಕ್ಕೆ’ 

09:30 AM Oct 15, 2017 | |

ಉಡುಪಿ: ಮುಂದಿನ ಅ. 14ರೊಳಗೆ ಜಿಲ್ಲೆಯ 100 ದಲಿತ ಕುಟುಂಬಗಳಿಗೆ ಬೌದ್ಧ ಧರ್ಮ ದೀಕ್ಷೆ ನೀಡಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ| ಕೃಷ್ಣಪ್ಪ ಸ್ಥಾಪಿತ) ಜಿಲ್ಲಾ ಸಂಚಾಲಕ ನಾರಾಯಣ ಮಣೂರು ತಿಳಿಸಿದ್ದಾರೆ.

Advertisement

ಧಮ್ಮ ದೀಕ್ಷಾ ದಿನದ ಅಂಗವಾಗಿ ಆದಿಉಡುಪಿ ಅಂಬೇಡ್ಕರ್‌ ಭವನದಲ್ಲಿ ಜಿಲ್ಲಾ ಸಮಿತಿ ಶನಿವಾರ ಆಯೋಜಿಸಿದ “ಬೌದ್ಧ ಧಮ್ಮದೆಡೆಗೆ ನಮ್ಮ ನಡಿಗೆ’ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಈ ಕುರಿತು ಹಳ್ಳಿ ಹಳ್ಳಿಗಳಿಗೆ ತೆರಳಿ ಈ ಬಗ್ಗೆ ಜನಜಾಗೃತಿ ಮೂಡಿಸಲಾಗುವುದು ಎಂದರು. ಯುವಜನತೆಗೆ ಅಂಬೇಡ್ಕರ್‌ ಸ್ವೀಕಾರ ಮಾಡಿದ ಧರ್ಮದ ಬಗ್ಗೆ ತಿಳಿವಳಿಕೆ ಇಲ್ಲ. ಈ ಬಗ್ಗೆ ಅರಿವು ಮಾಡಿಸುವು ನಿಟ್ಟಿನಲ್ಲಿ ಇಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ. ಇಂದಿನಿಂದ ಜಿಲ್ಲೆಯ ಎಲ್ಲ ಹಳ್ಳಿಗಳಿಗೆ ಭೇಟಿ ನೀಡಿ ಜನರನ್ನು ಜಾಗೃತಗೊಳಿಸಿ ಧರ್ಮದ ಮಾಹಿತಿ ನೀಡುತ್ತೇವೆ. ಧರ್ಮದ ಅನುಕೂಲಗಳ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.

ಕೇವಲ ಬೌದ್ಧ ಧರ್ಮಕ್ಕೆ ಹೆಸರಿಗೆ ಮಾತ್ರವೇ ಮತಾಂತರಗೊಂಡರೆ ಸಾಲದು. ಬೌದ್ಧ ಧರ್ಮದ ಆಚಾರ, ವಿಚಾರ ಅಳವಡಿಸಿಕೊಂಡು, ಸತ್ಯ ಹೇಳುವ ಪರಿಪಾಠ ರೂಢಿಸಿಕೊಳ್ಳಬೇಕು. ಅಂಬೇಡ್ಕರ್‌ ಅವರ ತತ್ತಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕೆಂದು ಸಲಹೆ ನೀಡಿದರು.

ಮೀಸಲಾತಿಗೆ ತೊಂದರೆ ಇಲ್ಲ: ಬೌದ್ಧ ಧರ್ಮಕ್ಕೆ ಮತಾಂತರಗೊಂಡರೆ ಮೀಸಲಾತಿಗೆ ಯಾವುದೇ ಅಡೆತಡೆ ಇಲ್ಲ. ಬೌದ್ಧ ಧರ್ಮ ಈ ನೆಲದ ಧರ್ಮ, ಅಸ್ಪೃಶ್ಯರ ಧರ್ಮ ಹಾಗೂ ದೇಶವನ್ನು ಆಳಿದ ನಾಗ ವಂಶದವರ ಧರ್ಮ. ಈ ನಿಟ್ಟಿನಲ್ಲಿ ಮತಾಂತರಗೊಂಡರೆ ಯಾವುದೇ ತೊಂದರೆ ಆಗದು. ಸಂವಿಧಾನದ ಸವಲತ್ತುಗಳು ಸಿಗಲಿವೆ ಎಂದರು. ಮುಖಂಡರಾದ ಶ್ಯಾಮ್‌ ಬಿರ್ತಿ, ಉದಯ ಕುಮಾರ್‌ ತಲ್ಲೂರು, ಶ್ಯಾಮ್‌ ತೆಕ್ಕಟ್ಟೆ, ವಿಜಯಲಕ್ಷ್ಮೀ, ಶೇಖರ್‌ ಹೆಜಮಾಡಿ ಉಪಸ್ಥಿತರಿದ್ದರು. ಉಮಾನಾಥ ಪಡುಬಿದ್ರಿ ಸ್ವಾಗತಿಸಿ, ಶಂಕರ್‌ದಾಸ್‌ ಚೆಂಡ್ಕಳ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next