Advertisement

Heavy Rain ಇಂಧನ ಇಲಾಖೆಗೆ 100 ಕೋಟಿ ರೂ. ನಷ್ಟ: ಜಾರ್ಜ್‌

12:51 AM Jul 31, 2024 | Team Udayavani |

ಬೆಂಗಳೂರು: ಇತ್ತೀಚಿನ ಮಳೆಯ ಆರ್ಭಟಕ್ಕೆ ಇಂಧನ ಇಲಾಖೆಗೆ ಹೆಚ್ಚು-ಕಡಿಮೆ 100 ಕೋಟಿ ರೂ. ಹಾನಿಯಾಗಿದ್ದು ಮುಂದಿನ 15 ದಿನಗಳಲ್ಲಿ ಅಸ್ತವ್ಯಸ್ಥಗೊಂಡ ವಿದ್ಯುತ್‌ ಮಾರ್ಗಗಳನ್ನು ಸರಿಪಡಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ತಿಳಿಸಿದರು.

Advertisement

ಬೆಸ್ಕಾಂ ಕೇಂದ್ರ ಕಚೇರಿಯಲ್ಲಿ ಮಂಗಳವಾರ ರಾಜ್ಯದಲ್ಲಿ ಉಂಟಾಗಿರುವ ಅತಿವೃಷ್ಟಿಯಿಂದಾಗಿ ಇಂಧನ ಇಲಾಖೆಗೆ ಸಂಬಂಧಿಸಿದಂತೆ ಉದ್ಭವಿಸಿರುವ ಪರಿಸ್ಥಿತಿಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ಅನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಮಳೆ ಅವಾಂತರದಿಂದ ರಾಜ್ಯಾದ್ಯಂತ 96.61 ಕೋಟಿ ರೂ.ಗಳಷ್ಟು ವಿವಿಧ ಪ್ರಕಾರದ ಹಾನಿಯಾಗಿದೆ. ಇದರಲ್ಲಿ 71 ಕೋಟಿ ರೂ. ಮೊತ್ತದ ವಿದ್ಯುತ್‌ ಕಂಬಗಳು, ಟ್ರಾನ್ಸ್‌ಫಾರ್ಮರ್‌ ಸೇರಿದಂತೆ ಇತರ ವಿದ್ಯುತ್‌ ಉಪಕರಣಗಳು ಹಾಳಾಗಿದ್ದರೆ, ಅವುಗಳ ದುರಸ್ತಿಗೆ ಗ್ಯಾಂಗ್‌ಮನ್‌, ಲೈನ್‌ಮನ್‌ ಒಳಗೊಂಡಂತೆ ನೇಮಿಸಿಕೊಂಡ ಕಾರ್ಮಿಕರ ವೆಚ್ಚ 26 ಕೋಟಿ ರೂ. ಆಗಿದೆ ಎಂದು ಮಾಹಿತಿ ನೀಡಿದರು.

ನಿರಂತರ ಕಾರ್ಯಾಚರಣೆ
ಮಳೆ ಮತ್ತು ಗಾಳಿಯಿಂದ 53,816 ಕಂಬಗಳು ಮತ್ತು 3,924 ಟ್ರಾನ್ಸ್ ಫಾರ್ಮರ್‌ ಗಳು ನೆಲಕಚ್ಚಿದ್ದು, 1,120 ಕಿ.ಮೀ. ವಿದ್ಯುತ್‌ ತಂತಿಗಳು ಹಾನಿಗೊಳಗಾಗಿವೆ. ಈ ಪೈಕಿ 51,119 ಕಂಬಗಳು ಮತ್ತು 3,918 ಟ್ರಾನ್ಸ್ ಫಾರ್ಮರ್‌ ಗಳು, 1,063 ಕಿ.ಮೀ. ವಿದ್ಯುತ್‌ ತಂತಿಗಳನ್ನು ದುರಸ್ತಿಗೊಳಿಸುವ ಕಾರ್ಯಪೂರ್ಣಗೊಂಡಿದೆ. ಬಾಕಿ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಮರ್ಪಕ ವಿದ್ಯುತ್‌ ಪೂರೈಕೆಗೆ ಎಲ್ಲ ಎಸ್ಕಾಂ ಸಿಬಂದಿ ಸತತವಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

1,403 ಕೋಟಿ ರೂ.
ವಿದ್ಯುತ್‌ ಮಾರಾಟ
ಕಳೆದ ಫೆಬ್ರವರಿಯಿಂದ ಜುಲೈ ವರೆಗೆ 1,403 ಕೋಟಿ ರೂ. ಮೊತ್ತದ ವಿದ್ಯುತ್‌ ಮಾರಾಟ ಮಾಡಿದ್ದು ಇದೇ ಅವಧಿಯಲ್ಲಿ 2,293 ಕೋಟಿ ರೂ. ಮೊತ್ತದ ವಿದ್ಯುತ್‌ ಖರೀದಿ ಮಾಡಲಾಗಿದೆ ಎಂದು ಕೆ.ಜೆ. ಜಾರ್ಜ್‌ ತಿಳಿಸಿದರು.

Advertisement

ಆರ್‌ಟಿಪಿಎಸ್‌, ಬಿಟಿಪಿಎಸ್‌, ವೈಟಿಪಿಎಸ್‌ ಸೇರಿ ರಾಜ್ಯದ ಈ ಮೂರೂ ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ದಾಖಲೆಯ ವಿದ್ಯುತ್‌ ಉತ್ಪಾದನೆಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಆದಾಯದಲ್ಲಿ ಶೇ. 17ರಷ್ಟು ಏರಿಕೆಯಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next