Advertisement

ಅಂಬೇಡ್ಕರ್‌ ಅಭಿವೃದ್ದಿ ನಿಗಮಕ್ಕೆ 100 ಕೋಟಿ

02:44 PM Aug 27, 2022 | Team Udayavani |

ಬೀದರ: ಪರಿಶಿಷ್ಟರ ಅಭಿವೃದ್ಧಿಗಾಗಿ ಡಾ| ಬಿ.ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮಕ್ಕೆ ಸರ್ಕಾರ 100 ಕೋಟಿ ರೂ. ಅನುದಾನವನ್ನು ನೀಡಿದ್ದು, ಅದನ್ನು ಎಲ್ಲ ಜಿಲ್ಲೆಗಳಲ್ಲಿ ಹಂಚಿಕೆ ಮಾಡಲಾಗುವುದು ಮತ್ತು ಗಡಿ ಜಿಲ್ಲೆಗೆ ಬೀದರಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ನಿಗಮದ ಅಧ್ಯಕ್ಷರಾದ ಶಾಸಕ ಎಚ್‌. ನಾಗೇಶ್‌ ಹೇಳಿದರು.

Advertisement

ನಗರದ ರಂಗ ಮಂದಿರದಲ್ಲಿ ಶುಕ್ರವಾರ ಡಾ| ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಕಚೇರಿಯ ಶಿಲಾನ್ಯಾಸ, ಅರಿವು ಕಾರ್ಯಾಗಾರ ಮತ್ತು ನಿಗಮದ ವಿವಿಧ ಯೋಜನೆಗಳಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಸೌಲತ್ತು ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹೆಣ್ಣು ಮಕ್ಕಳು ಸ್ವ-ಉದ್ಯೋಗ ಮಾಡುವವರಿಗೆ ಮೈಕ್ರೋ ಸ್ಕೀಮ್‌ ಯೋಜನೆಯಲ್ಲಿ 2.5 ಲಕ್ಷ ರೂ. ಹಣವನ್ನು ಅವರ ಜೀವನೋಪಾಯಕ್ಕಾಗಿ ಸ್ವಯಂ ಉದ್ಯೋಗ ಕೈಗೊಳ್ಳುವ ಹಪ್ಪಳ, ಸಂಡಿಗೆ ಹಾಗೂ ಇತರೆ ಉದ್ಯೋಗ ಮಾಡುವುದಕ್ಕಾಗಿ ಹಣವನ್ನು ನೀಡಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.

ನನ್ನ ಅಧಿಕಾರದ ಅವಧಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಿಗಮದ ಕಚೇರಿಗಳನ್ನು ಸ್ಥಾಪಿಸಲು ಕ್ರಮ ವಹಿಸಿದ್ದೇನೆ. ಈ ಹಿಂದೆ ಸರ್ಕಾರದ ಸೌಲಭ್ಯವನ್ನು ಪಡೆಯುವ ಫಲಾನುಭವಿಗಳಿಗೆ ಚೆಕ್‌ಗಳ ಮುಖಾಂತರ ವಿತರಿಸಲಾಗುತ್ತಿತ್ತು. ಈಗ ಆಡಳಿತದಲ್ಲಿ ಪಾರದರ್ಶಕ ತರುವ ನಿಟ್ಟಿನಲ್ಲಿ ಆರ್‌ಟಿಜಿಎಸ್‌ ಮೂಲಕ ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಜಮಾವಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಶಾಸಕ ರಹೀಮ್‌ ಖಾನ್‌ ಮಾತನಾಡಿ, ಹಿಂದೆ ರಾಜನ ಮಗ ರಾಜ, ವೈದ್ಯನ ಮಗ ವೈದ್ಯ, ಇಂಜಿನಿಯರ್‌ ಮಗ ಇಂಜಿನೀಯರ್‌, ಶ್ರೀಮಂತರ ಮಕ್ಕಳು ಶ್ರೀಮಂತರಾಗಿ ಉನ್ನತ ಹುದ್ದೆಗಳನ್ನು ಪಡೆಯುತ್ತಿದ್ದರು. ಅಂಬೇಡ್ಕರ್‌ ರಚಿಸಿದ ಕಾನೂನುನಿಂದಾಗಿ ಇಂದು ಎಲ್ಲ ಜನಾಂಗದ ಬಡವರ ಮಕ್ಕಳು ಉನ್ನತ ಹುದ್ದೆಗೆ ಸೇರಿದ್ದಾರೆ ಎಂದು ಹೇಳಿದರು.

ಎಂಎಲ್‌ಸಿ ಅರವಿಂದಕುಮಾರ ಅರಳಿ ಮಾತನಾಡಿ, ಕ್ಷೇತ್ರದ ಶಾಸಕರಿಗೆ 2-3 ಫಲಾನುಭವಿಗಳ ಹೆಸರು ಆಯ್ಕೆಗೆ ಕೊಡುತ್ತಾರೆ. ಎಸ್‌.ಸಿ., ಎಸ್‌.ಟಿ.ಯಲ್ಲಿಯೇ ಹಲವಾರು ಉಪ ಜಾತಿಗಳಿವೆ. ಅವುಗಳಿಗೆ ಒಂದರಂತೆ ಹಂಚಿಕೆ ಮಾಡಿದರು ಇತರರಿಗೆ ಸಿಗುವುದಿಲ್ಲ. ಈ ಬಗ್ಗೆ ಅಧ್ಯಕ್ಷರು ಗಮನಹರಿಸಿ ಇನ್ನು ಹೆಚ್ಚಿನ ಫಲಾನುಭವಿಗಳಿಗೆ ಸೌಲಭ್ಯಗಳನ್ನು ನೀಡುವಂತಾಗಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Advertisement

ಈ ಸಂದರ್ಭದಲ್ಲಿ ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಸೌಲತ್ತುಗಳನ್ನು ವಿತರಣೆ ಮಾಡಲಾಯಿತು. ನಿಗಮದ ನಾಮ ನಿರ್ದೇಶಿತ ಸದಸ್ಯ ಬಸವರಾಜ ರಾಮಚಂದ್ರಪ್ಪ ಆರ್ಯ, ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಸುರೇಶಕುಮಾರ, ಎಸ್‌.ಸಿ., ಎಸ್‌.ಪಿ./ಟಿ. ಎಸ್‌.ಪಿ. ಸಲಹೆಗಾರ ಇ. ವೆಂಕಟಯ್ಯ, ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಡಾ| ಕೆ. ರಾಕೇಶಕುಮಾರ, ಉಪ ಪ್ರಧಾನ ವ್ಯವಸ್ಥಾಪಕ ಹರ್ಷಾ ಗಾಂವಕರ್‌, ಡಾ| ಲಿಂಗರಾಜ ಅರಸ್‌, ಸೋಮಶೇಖರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next