ಬೆಂಗಳೂರು: ಸಾರಿಗೆ ಇಲಾಖೆಯ ದಂಡದಲ್ಲಿ “ಡಿಸ್ಕೌಂಟ್ ಆಫರ್’ ರಾಜ್ಯಾದ್ಯಂತ “ಹಿಟ್’ ಆಗಿದ್ದು, ಕೇವಲ 9 ದಿನಗಳಲ್ಲೇ 100 ಕೋಟಿ ಕ್ಲಬ್‌ಗೆ ಸೇರ್ಪಡೆಯಾಗಿದೆ!
ಸಂಚಾರ ನಿಯಮ ಉಲ್ಲಂಘಿಸಿ ದಂಡ ಬಾಕಿ ಉಳಿಸಿಕೊಂಡಿರುವ ಸವಾರರು ಶೇ.50 ಆಫರ್ ಲಾಭ ಪಡೆಯಲು ಕೊನೆಯ ದಿನವಾದ ಶನಿವಾರ ಮುಗಿಬಿದ್ದ, ಪರಿಣಾಮ ಬೆಂಗಳೂರೊಂದರಲ್ಲೇ ಇದುವರೆಗೆ ಒಟ್ಟು 102 ಕೋಟಿ ರೂ. ಸಂಗ್ರಹವಾಗಿದೆ. ಇಷ್ಟಕ್ಕೆ ಸಮಾಧಾನಗೊಳ್ಳದ ಸವಾರರು ಈ ಆಫರ್ ಮತ್ತಷ್ಟು ದಿನ ವಿಸ್ತರಿಸುವಂತೆ ಸರಕಾರವನ್ನು ಒತ್ತಾಯಿಸುತ್ತಿದ್ದಾರೆ.
ಬೆಳ್ಳಂಬೆಳಗ್ಗೆಯೇ ನಾ-ಮುಂದು, ತಾ-ಮುಂದು ಎಂಬಂತೆ ಸವಾರರು ದಂಡ ಪಾವತಿಸಿದ್ದು, ಸರಕಾರದ ಬೊಕ್ಕಸಕ್ಕೆ ಹಣದ ಹೊಳೆಯೇ ಹರಿದು ಬಂದಿದೆ. ಫೆ.3ರಿಂದ 11ರ ವರೆಗೆ ಒಟ್ಟು 35.60 ಲಕ್ಷಕ್ಕೂ ಹೆಚ್ಚು ಪ್ರಕರಣಗಳಿಗೆ ಸಂಬಂಧಿಸಿ 102.02 ಕೋಟಿ ರೂ.ಗೂ ಅಧಿಕ ಮೊತ್ತ ಸಂಗ್ರಹವಾಗಿದೆ ಎಂದು ಸಂಚಾರ ವಿಭಾಗದ ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸಂಚಾರ ನಿಯಮಗಳ ರಿಯಾಯಿತಿ ದಂಡ ಪಾವತಿಗೆ ಶನಿವಾರ ಕೊನೆಯ ದಿನವಾದ ಹಿನ್ನೆಲೆಯಲ್ಲಿ ಸಂಚಾರ ಪೊಲೀಸ್ ಠಾಣೆ, ಟಿಎಂಸಿ ಸೆಂಟರ್‌ಗಳ ಮುಂದೆ ಸವಾರರು ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಸಾಮಾನ್ಯವಾಗಿತ್ತು. ಬೆಳಗ್ಗಿನಿಂದಲೇ ದಂಡ ಪಾವತಿಸಲು ಠಾಣೆಗಳ ಮುಂದೆ ಜಮಾಯಿಸಿದ ಸವಾರರನ್ನು ನಿಯಂತ್ರಿಸಲು ಸಂಚಾರ ವಿಭಾಗದ ಪೊಲೀಸರು ಹರಸಾಹಸಪಟ್ಟರು. ಟಿಎಂಸಿಯಲ್ಲಿ ದಂಡ ಪಾವತಿಗೆ ಪ್ರತ್ಯೇಕ ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಬಹುತೇಕರು ದೂರು ಪರಿಶೀಲಿಸಿ ದಂಡ ಪಾವತಿಸಿದರು. ಆನ್‌ಲೈನ್ ಮೂಲಕ ದಂಡ ಪಾವತಿಸಿದವರ ಸಂಖ್ಯೆ ಹೆಚ್ಚಾಗಿತ್ತು ಎಂದೂ ಪೊಲೀಸರು ತಿಳಿಸಿದ್ದಾರೆ.
ರಿಯಾಯಿತಿ ಸಿಕ್ಕಿದ್ದು ಹೇಗೆ?
ಹೈಕೋರ್ಟ್ ನ್ಯಾಯಾಧೀಶರು ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ನ್ಯಾ| ಬಿ. ವೀರಪ್ಪ ಅಧ್ಯಕ್ಷತೆಯಲ್ಲಿ ಜ.27ರಂದು ನಡೆದ ಸಭೆಯಲ್ಲಿ ಬಾಕಿ ಟ್ರಾಫಿಕ್ ದಂಡ ಪಾವತಿಗೆ ರಿಯಾಯಿತಿ ನೀಡುವ ಬಗ್ಗೆ ಚರ್ಚೆ ನಡೆಸಲಾಗಿತ್ತು. ಇದಕ್ಕೆ ರಾಜ್ಯ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಅನುಮತಿ ನೀಡಿದ್ದರು. ಬಳಿಕ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಬಗ್ಗೆ ಕಾನೂನು ಇಲಾಖೆ ಅಧಿಕಾರಿಗಳ ಒಪ್ಪಿಗೆ ಪಡೆದ ಸಾರಿಗೆ ಇಲಾಖೆ, ಶೇ.50 ರಿಯಾಯಿತಿ ನೀಡಿತ್ತು.