ಕೋವಿಡ್ 19 ವೈರಸ್ ಭೀತಿಯಿಂದಾಗಿ ಇಡೀ ಚಿತ್ರರಂಗವೇ ತತ್ತರಿಸಿದೆ. ಇದಕ್ಕೆ ಕಿರುತೆರೆಯೂ ಹೊರತಲ್ಲ. ಹೌದು, ಕಿರುತೆರೆ ಕ್ಷೇತ್ರವಂತೂ ಸಂಪೂರ್ಣ ನೆಲಕಚ್ಚುವ ಸ್ಥಿತಿ ಬಂದೊದಗಿದೆ. ಹಾಗೆ ನೋಡಿದರೆ, ಈ ಕೋವಿಡ್ 19 ಎಫೆಕ್ಟ್ನಿಂದಾಗಿ ಕಿರುತೆರೆ ಕ್ಷೇತ್ರ ಬರೋಬ್ಬರಿ 100ಕೋಟಿಗೂ ಹೆಚ್ಚು ನಷ r ಅನುಭವಿಸಲಿದೆ. ದಿನವೊಂದಕ್ಕೆ ಸುಮಾರು 85 ಧಾರಾವಾಹಿಗಳು ಪ್ರಸಾರಗೊಳ್ಳುತ್ತಿವೆ. ಈಗ ಅವೆಲ್ಲವೂ ಸ್ಥಗಿತಗೊಂಡಿದ್ದು, ನೌಕರರು ಅತಂತ್ರದಲ್ಲಿದ್ದಾರೆ. ಅಂದಹಾಗೆ, ಕಿರುತೆರೆ ಏನೆಲ್ಲಾ ಸಮಸ್ಯೆ ಎದುರಿಸುತ್ತಿದೆ ಎಂಬ ಕುರಿತ ಒಂದು ರೌಂಡಪ್.
ಕಿರುತೆರೆ ಈಗ ಅಕ್ಷರಶಃ ಸಮಸ್ಯೆಯ ಸುಳಿಯಲ್ಲಿ ಸಿಲುಕಿದೆ. ಈ ಕುರಿತು ಮಾಹಿತಿ ಕೊಡುವ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್‌ನ ಅಧ್ಯಕ್ಷರಾದ ಎಸ್.ವಿ.ಶಿವಕುಮಾರ್ ಹೇಳುವುದಿಷ್ಟು: “ಪ್ರತಿನಿತ್ಯ ಎಲ್ಲಾ ವಾಹಿನಿಗಳಲ್ಲೂ ಸೇರಿ ಸುಮಾರು 80 ರಿಂದ 85 ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಕೋವಿಡ್ 19 ಸಮಸ್ಯೆಯಿಂದಾಗಿ ನಾವು ಮಾ.31 ರವರೆಗೆ ಕಿರುತೆರೆಯ ಎಲ್ಲಾ ಚಟುವಟಿಕೆಯನ್ನು ಸ್ಥಗಿತಗೊಳಿಸಿದ್ದೆವು. ಈಗ ಅದು ಏಪ್ರಿಲ್ 14 ರವರೆಗೂ ಮುಂದುವರಿಯಲಿದೆ.
ಏಪ್ರಿಲ್ 10 ರವರೆಗೂ ಧಾರಾವಾಹಿಗಳು ಬ್ಯಾಂಕಿಂಗ್ ಇಟ್ಟಿವೆ. ಆ ಬಳಿಕ ಬೆಸ್ಟ್ ಎಪಿಸೋಡ್‌ಗಳನ್ನೇ ಸ್ವಲ್ಪ ಎಡಿಟ್ ಮಾಡಿ ಪ್ರಸಾರ ಮಾಡಲಿವೆ. ಈಗಾಗಲೇ ಕೆಲವು ವಾಹಿನಿಗಳಲ್ಲಿ ರಿಪೀಟ್ ಶೋ ಕೂಡ ಆಗುತ್ತಿದೆ. ಇದರಿಂದ ಸಮಸ್ಯೆ ಆಗುತ್ತಿರೋದು ದಿನಗೂಲಿ ಕಾರ್ಮಿಕರಿಗೆ. ಲೈಟ್ ಬಾಯ್ಸ, ಕ್ಯಾಮೆರಾ ಸಹಾಯಕರು, ಮೇಕಪ್ ಕಲಾವಿದರು ಹೀಗೆ ಬಹಳಷ್ಟು ನೌಕರರು ಇದ್ದಾರೆ. ಇವರಿಗೆಲ್ಲಾ ಒಂದು ತಿಂಗಳ ಮಟ್ಟಿಗೆ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್‌ನಿಂದ ಆಗತ್ಯ ವಸ್ತುಗಳಾದ ಅಕ್ಕಿ, ಬೇಳೆ, ಎಣ್ಣೆ ಇತರೆ ಸಾಮಾಗ್ರಿ ವಿತರಿಸುವ ನಿರ್ಧಾರವಾಗಿದೆ. ಇನ್ನು, ಕೆಲ ನಿರ್ಮಾಪಕರೊಂದಿಗೂ ಚರ್ಚಿಸಲಾಗಿದ್ದು, ಅವರಿಂದಲೂ ಸಹಾಯ ಕೇಳಲಾಗಿದೆ. ಸದ್ಯಕ್ಕೆ ಒಂದು ತಿಂಗಳಿಗೆ ಏನೆಲ್ಲಾ ಬೇಕೋ, ಎಷ್ಟು ಬೇಕೋ ಅದನ್ನು ಪೂರೈಸುವ ವ್ಯವಸ್ಥೆ ಮಾಡಲಾಗುವುದು’ ಎಂಬುದು ಅವರ ಹೇಳಿಕೆ.
ಈ ಎಲ್ಲಾ ಬೆಳವಣಿಗೆಯಿಂದ ಕಿರುತೆರೆ ಉದ್ಯಮಕ್ಕೆ ಸುಮಾರು 100 ಕೋಟಿ ನಷ್ಟ ಆಗುತ್ತಿದೆ. ಟೆಲಿವಿಷನ್ ಇಂಡಸ್ಟ್ರಿಯಿಂದ ವರ್ಷಕ್ಕೆ ಏನಿಲ್ಲವೆಂದರೂ 1300 ಕೋಟಿ ರುಪಾಯಿ ವಹಿವಾಟು ಆಗಲಿದೆ. ಧಾರಾವಾಹಿ, ರಿಯಾಲಿಟಿ ಶೋ ಸೇರಿದಂತೆ ಇತರೆ ಕಾರ್ಯಕ್ರಮಗಳ ವಹಿವಾಟಿನ ಅಂದಾಜು ಇದಾಗಿದ್ದು, ನಮ್ಮ ಇಂಡಸ್ಟ್ರಿಗೆ ಸರ್ಕಾರದಿಂದ ಯಾವ ಸವಲತ್ತು ಇಲ್ಲ. ಸಿನಿಮಾ ರಂಗಕ್ಕೆ ಪ್ರತ್ಯೇಕ ಇಲಾಖೆ, ಅಕಾಡೆಮಿಗಳಿವೆ. ಅವಾರ್ಡ್ ಮೂಲಕ ಗುರುತಿಸುವಂತಹ ಕೆಲಸ ಆಗುತ್ತಿದೆ. ಕಿರುತೆರೆ ಉದ್ಯಮಕ್ಕೆ ಅದ್ಯಾವುದೂ ಇಲ್ಲ’ ಎನ್ನುತ್ತಾರೆ ಶಿವಕುಮಾರ್.
ಕೋವಿಡ್ 19 ಸಮಸ್ಯೆಯಿಂದಾಗಿ ಧಾರಾವಾಹಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು, ನಿರ್ಮಾಪಕರು ಹಾಗು ಸಹ ಕಲಾವಿದರು ಸಮಸ್ಯೆ ಎದುರಿಸುವಂತಾಗಿದೆ. ಧಾರಾವಾಹಿಗಳು ಸಿನಿಮಾದಂತಲ್ಲ. ಅದು ದಿನದ ಪ್ರದರ್ಶನ. ಹಾಗಾಗಿ ಆ ರಂಗದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಕೂಡ ದಿನ ಲೆಕ್ಕದಲ್ಲೇ ಕೆಲಸ ಮಾಡಬೇಕು. ದಿನ ಸಂಪಾದನೆಯನ್ನೇ ನಂಬಿ ಬದುಕು ಸವೆಸಬೇಕು. ಇಂತಹ ಸಂದರ್ಭದಲ್ಲೇ ಕೋವಿಡ್ 19 ಹೊಡೆತದಿಂದ ಅವರ ಬದುಕು ಮತ್ತಷ್ಟು ಹದಗೆಟ್ಟಿದೆ. ಧಾರಾವಾಹಿ ನಿರ್ಮಾಣಕ್ಕೆ ಕಡಿಮೆ ಹಣ ಬೇಕು ಅಂದುಕೊಂಡರೆ ಆ ಊಹೆ ತಪ್ಪು. ಪ್ರತಿ ದಿನದ ಚಿತ್ರೀಕರಣಕ್ಕೆ ಸುಮಾರು 80 ಸಾವಿರದಿಂದ 1.30 ಲಕ್ಷ ರುಪಾಯಿವರೆಗೂ ಬೇಕು. ಆದರೆ, ಒಂದು ದಿನ ಚಿತ್ರೀಕರಣವೇನಾದರೂ ನಿಂತರೆ ಅದರ ಪೆಟ್ಟು ನಿರ್ಮಾಪಕರಿಗೆ ಬೀಳುತ್ತೆ. ಇದರೊಂದಿಗೆ ಅಲ್ಲಿ ಕೆಲಸ ಮಾಡುವ ದಿನಗೂಲಿ ನೌಕರರಿಗೂ ತಟ್ಟುತ್ತದೆ.
ಇನ್ನು ಒಂದು ತಿಂಗಳಿಗೆ ಏನಿಲ್ಲವೆಂದರೂ, ಹದಿನೈದು ದಿನದಿಂದ 22 ದಿನಗಳವರೆಗೂ ಧಾರಾವಾಹಿ ಚಿತ್ರೀಕರಣ ನಡೆಯಲಿದೆ. ಅಲ್ಲಿ ದುಡಿಯುವ ನಟ, ನಟಿಯರಿಂದ ಹಿಡಿದು ಪ್ರತಿಯೊಬ್ಬರಿಗೂ ದಿನದ ಲೆಕ್ಕದಲ್ಲೇ ಸಂಭಾವನೆ ಕೊಡಬೇಕು. ಅದೆಲ್ಲವನ್ನೂ ಲೆಕ್ಕ ಹಾಕಿ ತಿಂಗಳಿಗೊಮ್ಮೆ ಪೇಮೆಂಟ್ ಮಾಡಲಾಗುತ್ತದೆ. ಕಡಿಮೆ ಎಂದರೂ ಒಂದು ಧಾರಾವಾಹಿ ಚಿತ್ರೀಕರಣ ನಡೆಯುವ ಸೆಟ್‌ನಲ್ಲಿ 35 ರಿಂದ 45 ಜನ ಕೆಲಸ ಮಾಡುತ್ತಾರೆ. ಅಷ್ಟೇ ಅಲ್ಲ, ಒಮ್ಮೊಮ್ಮೆ ಅದರ ಸಂಖ್ಯೆ 50 ಮೀರುತ್ತದೆ. ಸೀನ್‌ಗೆ ಸಂಬಂಧಿಸಿದ ಕಲಾವಿದರು, ಸಹ ಕಲಾವಿದರು, ಮ್ಯಾನೇಜರ್, ಪ್ರೊಡಕ್ಷನ್‌ಗೆ ಸಂಬಂಧಿಸಿದವರು, ಮೇಕಪ್ ಕಲಾವಿದರು, ಲೈಟ್‌ಬಾಯ್ಸ, ಮೂವರು ಛಾಯಾಗ್ರಾಹಕರು, ಹೇರ್ ಡ್ರಸರ್ಸ್, ಡೈಲಾಗ್ ಹೇಳಿಕೊಡುವವರು, ನಿರ್ದೇಶಕರ ವಿಭಾಗದಲ್ಲಿ ಕೆಲಸಮಾಡುವವರು, ಊಟಬಡಿಸುವವರು, ಸಂಕಲನ ಮಾಡುವವರು, ಸೌಂಡ್ ರೆಕಾರ್ಡ್ ಮಾಡೋರು ಸೇರಿದಂತೆ ಇತರೆ ವಿಭಾಗದಲ್ಲಿ ಕೆಲಸ ಮಾಡುವ ಕಾರ್ಮಿಕರು ಇರುತ್ತಾರೆ. ಇವರೆಲ್ಲರಿಗೂ ದಿನದ ಸಂಭಾವನೆ ಕೊಡಲೇಬೇಕು. ಸಾವಿರಾರು ಜನರು ಕಿರುತೆರೆಯನ್ನೇ ನಂಬಿ ಕೆಲಸ ಮಾಡುತ್ತಿದ್ದಾರೆ. ಇವರ ಸಂಭಾವನೆ ಲೆಕ್ಕ ಹಾಕಿದರೆ ದಿನಕ್ಕೆ ಕೋಟಿ ರುಪಾಯಿವರೆಗೂ ತಲುಪುತ್ತದೆ. ಈಗ ಕೋವಿಡ್ 19 ಹೊಡೆತದಿಂದ ಇವರೆಲ್ಲರ ಜೀವನ ನಿರ್ವಹಣೆ ಈಗ ಸಂಕಷ್ಟಕ್ಕೆ ಸಿಲುಕಿದೆ. ಈ ಲಾಕ್‌ಡೌನ್ ಮುಗಿಯುವವರೆಗೂ ಆರ್ಥಿಕ ಸಂಕಷ್ಟವನ್ನು ಕಿರುತೆರೆ ಕ್ಷೇತ್ರ ಎದುರಿಸಲೇಬೇಕಾದ ಅನಿವಾರ್ಯತೆ ಇದೆ.