ಸೇಡಂ: ಇನ್ನು ಎರಡು ತಿಂಗಳಲ್ಲಿ ಕೇಂದ್ರ ಸಚಿವ ಅಮಿತ್ ಶಾ ಸೇಡಂಗೆ ಆಗಮಿಸುತ್ತಿದ್ದು, ಅಂದು ಡಿಸಿಸಿ ಬ್ಯಾಂಕ್ ಮೂಲಕ ವಿಧಾನಸಭೆ ಕ್ಷೇತ್ರದ 20 ಸಾವಿರ ಮಹಿಳೆಯರಿಗೆ 100 ಕೋಟಿ ರೂ. ಬಡ್ಡಿ ರಹಿತ ಸಾಲ ವಿತರಿಸಲಾಗುವುದು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಹೇಳಿದರು.
ಪಟ್ಟಣದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ತಾಲೂಕು ಮಹಿಳಾ ಮೋರ್ಚಾ ಆಯೋಜಿಸಿದ್ದ ಪ್ರಮುಖರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್ ವತಿಯಿಂದ ತಾಲೂಕಿನ ರೈತರಿಗೆ ಬಡ್ಡಿ ರಹಿತವಾಗಿ 100 ಕೊಟಿ ರೂ. ಸಾಲ ನೀಡಿದ್ದೇವೆ. ಇದೀಗ ಮಹಿಳೆಯರು ಬೇಡಿಕೆ ಇಟ್ಟಿದ್ದು, ಮುಂದಿನ ಎರಡು ತಿಂಗಳ ನಂತರ ಪ್ರತಿ ಗ್ರಾಮದಲ್ಲಿ ಸ್ವ-ಸಹಾಯ ಸಂಘಗಳನ್ನು ಮಾಡಿ, ಮಹಿಳೆಯರಿಗೆ ಸಾಲ ನೀಡುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ಒಟ್ಟಾರೆಯಾಗಿ ಮಹಿಳೆಯರು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬೇಕು. ಹೈನುಗಾರಿಕೆ, ತೋಟಗಾರಿಕೆ ಮಾಡಲು ಮುಂದಾದರೆ ಅವರಿಗೂ ಸಾಲ ನೀಡಲಾಗುವುದು. ಮಹಿಳೆಯರು ಇದರ ಲಾಭ ಪಡೆಯಬೇಕು. ಶ್ರಮ ಜೀವಿಗಳಾಗುವುದರ ಜೊತೆಗೆ ಆದಾಯವನ್ನು ದ್ವಿಗುಣ ಮಾಡಿಕೊಳ್ಳಬೇಕು ಎಂದರು.
ಆಜಾದಿಕಾ ಅಮೃತ ಮಹೋತ್ಸವದ ಅಂಗವಾಗಿ ಮುಂದಿನ ಎಂಟು ದಿನದಲ್ಲಿ ಒಂದು ವಿಶೇಷ ಕಾರ್ಯಕ್ರಮ ಮಾಡಲಾಗುತ್ತದೆ. ತಾಲೂಕಿನ 75 ಸ್ವ-ಸಹಾಯ ಸಂಘಗಳ 750 ಮಹಿಳೆಯರಿಗೆ 75 ಲಕ್ಷ ರೂ. ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ ಎಂದು ಹೇಳಿದರು. ಈ ವೇಳೆ ವಿವಿಧ ಪಕ್ಷಗಳನ್ನು ತೊರೆದು ಬಿಬ್ಬಳ್ಳಿ, ಆಡಕಿ, ಬಿಜನಳ್ಳಿ, ಸೇಡಂ ಸೇರಿದಂತೆ ವಿವಿಧ ಗ್ರಾಮಗಳ 270ಕ್ಕೂ ಅಧಿಕ ಮಹಿಳೆಯರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು.
ಕಲಬುರಗಿ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಅರುಣ ಬಿನ್ನಾಡಿ, ಬಿಜೆಪಿ ನಾಯಕಿ ಸಂತೋಷಿರಾಣಿ ಪಾಟೀಲ ತೇಲ್ಕೂರ, ಮಂಡಲ ಉಸ್ತುವಾರಿ ಧರ್ಮಣ್ಣ ಇಟಗಾ, ತಾಲೂಕಾಧ್ಯಕ್ಷೆ ಮಂಜುಳಾ ಯಕ್ಮಾಯಿ ಮಾತನಾಡಿದರು. ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಡಗಿ, ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ಪುರಸಭೆ ಅಧ್ಯಕ್ಷೆ ಶೋಭಾ ಹೂಗಾರ, ಮಾಜಿ ಅಧ್ಯಕ್ಷೆ ಚನ್ನಮ್ಮ ಪಾಟೀಲ, ಮುಕುಂದ ದೇಶಪಾಂಡೆ, ಅತೀಶ ಪವಾರ, ಭಾಗ್ಯಲಕ್ಷ್ಮೀ ನಾಯಿಕೋಡಿ, ಜಯಶ್ರೀ ಬೋಳದ, ರಾಜೇಶ್ವರಿ ಬಿಲಗುಂದಿ, ಶೈಲಜಾ ಹಿತ್ತಲ್, ರೇಣುಕಾ ಪಾಟೀಲ, ಚಾಂದ ಬೀ, ಮಹಾನಂದಾ ಸಾಹು, ಶಿಲ್ಪಾ ಮಾಲಿಪಾಟೀಲ ಹಾಗೂ ಇನ್ನಿತರರು ಇದ್ದರು.