ಟೀಂ ಇಂಡಿಯಾ ನಾಯಕ, ರನ್ ಮಶಿನ್, ಶತಕಗಳ ಸರದಾರ ವಿರಾಟ್ ಕೊಹ್ಲಿಯ ಮೊದಲ ಶತಕದ ಬಗ್ಗೆ ನೆನಪಿದೆಯೇ?. ಸದ್ಯ ಮೇಲಿಂದ ಮೇಲೆ ಶತಕ ಬಾರಿಸುವ ವಿರಾಟ್ ಮೊದಲ ಶತಕ ಬಾರಿಸಿ ಇಂದಿಗೆ ( ಡಿಸೆಂಬರ್ 24) ಹತ್ತು ವರ್ಷದ ಸಂಭ್ರಮ.
ಕೋಲ್ಕತ್ತಾದ ಈಡೆನ್ ಗಾರ್ಡನ್ ನಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ದದ ಏಕದಿನ ಪಂದ್ಯದಲ್ಲಿ ಕೊಹ್ಲಿ ಮೊದಲ ಅಂತಾರಾಷ್ಟ್ರೀಯ ಶತಕ ಬಾರಿಸಿದ್ದರು. ಅಂದು ವಿರಾಟ್ 107 ರನ್ ಬಾರಿಸಿದ್ದರು.
ಕೋಲ್ಕತ್ತಾದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಲಂಕಾ ತಂಡ ಉಪುಲ್ ತರಂಗ ಶತಕದ ನೆರವಿನಿಂದ 315 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿತ್ತು. ಇದನ್ನು ಬೆನ್ನತ್ತಿದ್ದ ಭಾರತ ತಂಡಕ್ಕೆ ನೆರವಾಗಿದ್ದು ಆರಂಭಿಕ ಆಟಗಾರ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ.
ಗಂಭೀರ್ ಮತ್ತು ವಿರಾಟ್ ಎರಡನೇ ವಿಕೆಟ್ ಗೆ 224 ರನ್ ಜೊತಯಾಟ ನಡೆಸಿ ಭಾರತಕ್ಕೆ ಗೆಲುವು ತಂದಿತ್ತರು. ವಿರಾಟ್ 107 ರನ್ ಗಳಿಸಿ ಔಟಾದರೆ ಗಂಭೀರ್ ಅಜೇಯ 150 ರನ್ ಗಳಿಸಿದ್ದರು.
ಅಂತಿಮವಾಗಿ ನಿರೀಕ್ಷೆಯಂತೆ ಗೌತಮ್ ಗಂಭಿರ್ ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದಿತ್ತು. ಆದರೆ ಗೌತಮ್ ಮೊದಲ ಶತಕ ಬಾರಿಸಿದ ವಿರಾಟ್ ಗೆ ಆ ಪ್ರಶಸ್ತಿ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದರು.