Advertisement

10 ವಿಕೆಟ್‌ ವಿಜಯ; ಭಾರತ ಅಜೇಯ

04:00 PM Jan 20, 2018 | Harsha Rao |

ಮೌಂಟ್‌ ಮಾಂಗನಿ: ಮೂರು ಬಾರಿಯ ಚಾಂಪಿಯನ್‌ ಭಾರತ ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌ ಲೀಗ್‌ ಅಭಿಯಾನವನ್ನು ಅಜೇಯವಾಗಿ ಮುಗಿಸಿದೆ. ಶುಕ್ರವಾರ ನಡೆದ “ಬಿ’ ವಿಭಾಗದ ತನ್ನ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಭಾರತ 10 ವಿಕೆಟ್‌ಗಳಿಂದ ಜಿಂಬಾಬ್ವೆಯನ್ನು ಪರಾಭವಗೊಳಿಸಿತು. 

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಜಿಂಬಾಬ್ವೆ 48.1 ಓವರ್‌ಗಳಲ್ಲಿ 154ಕ್ಕೆ ಕುಸಿದರೆ, ಭಾರತ 21.4 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 155 ರನ್‌ ಬಾರಿಸಿ ಗೆಲುವಿನ ಹ್ಯಾಟ್ರಿಕ್‌ ಸಾಧಿಸಿತು. ಇದಕ್ಕೂ ಮುನ್ನ ಪೃಥ್ವಿ ಶಾ ಬಳಗ ಆಸ್ಟ್ರೇಲಿಯವನ್ನು 100 ರನ್ನುಗಳಿಂದ ಹಾಗೂ ಪಪುವಾ ನ್ಯೂ ಗಿನಿಯನ್ನು 10 ವಿಕೆಟ್‌ಗಳಿಂದ ಸೋಲಿಸಿತ್ತು. ಇದರೊಂದಿಗೆ ಅಂಡರ್‌-19 ವಿಶ್ವಕಪ್‌ ಕೂಟದಲ್ಲಿ ಸತತ 2 ಸಲ 10 ವಿಕೆಟ್‌ ಅಂತರದ ಜಯ ದಾಖಲಿಸಿದ 2ನೇ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. 2008ರ ಕೂಟದಲ್ಲಿ ಇಂಗ್ಲೆಂಡ್‌ ಕಿರಿಯರು ಈ ಸಾಧನೆ ಮಾಡಿದ್ದರು.

ಓಪನಿಂಗ್‌ ಬದಲಾವಣೆ
ಚೇಸಿಂಗ್‌ ವೇಳೆ ಭಾರತ ತನ್ನ ಇಬ್ಬರೂ ಆರಂಭಿಕರನ್ನು ಬದಲಿಸಿ ಬಂಪರ್‌ ಯಶಸ್ಸು ಕಂಡಿತು. ನಾಯಕ ಪೃಥ್ವಿ ಶಾ ಮತ್ತು ಮನೋಜ್‌ ಕಾಲಾÅ ಬದಲು ಹಾರ್ವಿಕ್‌ ದೇಸಾಯಿ-ಶುಭಂ ಗಿಲ್‌ ಇನ್ನಿಂಗ್ಸ್‌ ಆರಂಭಿಸಲು ಇಳಿದರು. ಈ ಅವಕಾಶ ವನ್ನು ಭರ್ಜರಿಯಾಗಿ ಬಳಸಿಕೊಂಡು ಅಜೇಯ ವಾಗಿ ತಂಡವನ್ನು ದಡ ಮುಟ್ಟಿಸಿದರು. ಭಾರತದ ಜಯಭೇರಿಯ ವೇಳೆ ಶುಭಂ ಗಿಲ್‌ 90 ಮತ್ತು ಹಾರ್ವಿಕ್‌ ದೇಸಾಯಿ 56 ರನ್‌ ಬಾರಿಸಿ ಅಜೇಯರಾಗಿದ್ದರು.

ಗಿಲ್‌ 59 ಎಸೆತ ಎದುರಿಸಿ, 14 ಬೌಂಡರಿ ಹಾಗೂ ಒಂದು ಸಿಕ್ಸರ್‌ ನೆರವಿನಿಂದ ಸೊಗಸಾದ ಬ್ಯಾಟಿಂಗ್‌ ಪ್ರದರ್ಶನವಿತ್ತರು. ಈ ಸಾಹಸಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು. ಗಿಲ್‌ ಆಸ್ಟ್ರೇಲಿಯ ವಿರುದ್ಧ 63 ರನ್‌ ಬಾರಿಸಿ ಮಿಂಚಿದ್ದರು. ದೇಸಾಯಿ 73 ಎಸೆತಗಳಿಂದ 56 ರನ್‌ ಹೊಡೆದರು. ಇದರಲ್ಲಿ 8 ಬೌಂಡರಿ ಹಾಗೂ ಒಂದು ಸಿಕ್ಸರ್‌ ಒಳಗೊಂಡಿತ್ತು.

ರಾಯ್‌ 4 ವಿಕೆಟ್‌ ಬೇಟೆ
ಭಾರತದ ಬೌಲಿಂಗ್‌ ಸರದಿಯಲ್ಲಿ ಮಿಂಚಿದವರು ಸ್ಪಿನ್ನರ್‌ ಅನುಕೂಲ್‌ ರಾಯ್‌. 7ನೇ ಬೌಲರ್‌ ರೂಪದಲ್ಲಿ ದಾಳಿಗಿಳಿದ ರಾಯ್‌ 20 ರನ್ನಿತ್ತು 4 ವಿಕೆಟ್‌ ಕಿತ್ತರು. ಅಭಿಷೇಕ್‌ ಶರ್ಮ ಮತ್ತು ಅರ್ಶದೀಪ್‌ ಸಿಂಗ್‌ 2 ವಿಕೆಟ್‌ ಉರುಳಿಸಿದರು. 

Advertisement

ಜಿಂಬಾಬ್ವೆ ಪರ ಮೂವರು ಮೂವತ್ತರ ಗಡಿ ಮುಟ್ಟಿದರು. ಇವರೆಂದರೆ ಮಿಲ್ಟನ್‌ ಶುಂಬ (36), ನಾಯಕ ಲಿಯಮ್‌ ರೋಶೆ (31) ಮತ್ತು ಆರಂಭಕಾರ ವೆಸ್ಲಿಮ್‌ ಮದೆವೇರ್‌ (30). ಈ ಸೋಲಿನೊಂದಿಗೆ ಜಿಂಬಾಬ್ವೆ ಕೂಟದಿಂದ ಹೊರಬಿದ್ದಿದೆ.
ಸಂಕ್ಷಿಪ್ತ ಸ್ಕೋರ್‌: ಜಿಂಬಾಬ್ವೆ-48.1 ಓವರ್‌ಗಳಲ್ಲಿ 154 (ಶುಂಬ 36, ರೋಶೆ 31, ಮದೆವೇರ್‌ 30, ಅನುಕೂಲ್‌ 20ಕ್ಕೆ 4, ಅರ್ಶದೀಪ್‌ 10ಕ್ಕೆ 2, ಅಭಿ ಷೇಕ್‌ 22ಕ್ಕೆ 2). ಭಾರತ-21.4 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 155 (ಗಿಲ್‌ ಔಟಾಗದೆ 90, ದೇಸಾಯಿ ಔಟಾಗದೆ 56). ಪಂದ್ಯಶ್ರೇಷ್ಠ: ಶುಭಂ ಗಿಲ್‌.

Advertisement

Udayavani is now on Telegram. Click here to join our channel and stay updated with the latest news.

Next