Advertisement

Shortage of Teachers;10 ಸಾವಿರ ಅತಿಥಿ ಶಿಕ್ಷಕರ ಹುದ್ದೆ ಖಾಲಿ

12:55 AM Aug 27, 2023 | Team Udayavani |

ಬೆಂಗಳೂರು: ಖಾಯಂ ಶಿಕ್ಷಕರ ಕೊರತೆ ತುಂಬಲು ಸರಕಾರ 2ನೇ ಬಾರಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಲು ಮುಂದಾಗಿದ್ದರೂ ಶಿಕ್ಷಕರ ಕೊರತೆ ಮುಂದುವರಿಯಲಿದೆ. ಲಭ್ಯ ಮಾಹಿತಿ ಪ್ರಕಾರ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸುಮಾರು 8,355 ಸಹ ಶಿಕ್ಷಕರ ಕೊರತೆ ಸೃಷ್ಟಿಯಾಗಿದ್ದು, ಖಾಲಿ ಇರುವ ಮುಖ್ಯೋ ಪಾಧ್ಯಾಯರ ಹುದ್ದೆಗಳು ಸೇರಿ ಸುಮಾರು ಹತ್ತು ಸಾವಿರ ಶಿಕ್ಷಕರ ಕೊರತೆ ಕಾಡಲಿದೆ.

Advertisement

ಈ ವರ್ಷ ವರ್ಗಾವಣೆ ಪ್ರಕ್ರಿಯೆ ಮುಕ್ತಾಯವಾದ ಬಳಿಕ ಮತ್ತೆ ಶಿಕ್ಷಕರ ಭಾರೀ ಕೊರತೆ ಸೃಷ್ಟಿಯಾಗಿತ್ತು. ಈಗ ಎರಡನೇ ಆದೇಶದಲ್ಲಿ ಮತ್ತೆ 8 ಸಾವಿರ ಪ್ರಾಥಮಿಕ ಮತ್ತು 2 ಸಾವಿರ ಪ್ರೌಢಶಾಲಾ ಶಿಕ್ಷಕರ ನೇಮಕಾತಿಗೆ ಅವಕಾಶ ನೀಡಲಾಗಿದೆ. ಈ ಎರಡು ಆದೇಶಗಳಿಂದಾಗಿ 45 ಸಾವಿರ ಶಿಕ್ಷಕರ ನೇಮಕವಾದರೂ ಇನ್ನೂ 10 ಸಾವಿರ ಶಿಕ್ಷಕರ ಕೊರತೆ ಕಾಡುತ್ತಿದೆ.

ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ 689, ಚಿಕ್ಕೋಡಿಯಲ್ಲಿ 682, ಬೆಳಗಾವಿ 612, ವಿಜಯಪುರ 539 ಕೊಪ್ಪಳ 537, ಯಾದಗಿರಿಯಲ್ಲಿ 477 ಅತಿಥಿ ಶಿಕ್ಷಕರ ಕೊರತೆ ಮುಂದುವರಿಯಲಿದೆ.

ಕೆಲವೆಡೆ ಅಗತ್ಯಕ್ಕಿಂತ ಹೆಚ್ಚು
ನೂತನ ವಿಜಯನಗರ ಜಿಲ್ಲೆಯಲ್ಲಿ ಹೆಚ್ಚುವರಿ ಶಿಕ್ಷಕರ ನೇಮಕವಾಗಿದೆ. ಇಲ್ಲಿ 1,158 ಸಹ ಶಿಕ್ಷಕರ ಹುದ್ದೆ ಖಾಲಿ ಇದ್ದರೆ ಅತಿಥಿ ಶಿಕ್ಷಕರ ಮೊದಲ ಹಂಚಿಕೆಯಲ್ಲೇ 1,535 ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ. ತನ್ಮೂಲಕ 377 ಹೆಚ್ಚುವರಿ ಅತಿಥಿ ಶಿಕ್ಷಕರು ಈ ಜಿಲ್ಲೆಗೆ ಲಭಿಸಿದ್ದಾರೆ. ಉಳಿದಂತೆ ಉಡುಪಿಯ ಬ್ರಹ್ಮಾವರ (30), ಉತ್ತರ ಕನ್ನಡ (ಶಿರಸಿ) ಯಲ್ಲಾಪುರ (2), ಚಿಕ್ಕಮಗಳೂರಿನ ಮೂಡಿಗೆರೆ (70), ಕೊಪ್ಪ (46), ಎನ್‌.ಆರ್‌. ಪುರ (30),  ಸಾಗರ (22), ತೀರ್ಥಹಳ್ಳಿ (21), ತುಮಕೂರಿನ ಕುಣಿಗಲ್‌ (16) ಮತ್ತಿತರ ತಾಲೂಕುಗಳಲ್ಲಿ ಅತಿಥಿ ಶಿಕ್ಷಕರ ಸಂಖ್ಯೆ ಹೆಚ್ಚಿದೆ.

ಅತಿಥಿ ಶಿಕ್ಷಕರನ್ನು ನಾವು ವಿವೇಚನಯುತವಾಗಿ ಹಂಚಿದ್ದೇವೆ. ಸದ್ಯ ಶೇ. 4ರಷ್ಟು ಮಾತ್ರ ಸಹ ಶಿಕ್ಷಕರ ಕೊರತೆಯಿದೆ. ಇದು ನಮಗೆ ಸಮಸ್ಯೆ ಆಗಲಾರದು. 13,551 ಶಿಕ್ಷಕರ ವಿವಾದ ಇತ್ಯರ್ಥವಾದರೆ ಶಿಕ್ಷಕರ ಸಂಖ್ಯೆ ಇನ್ನಷ್ಟು ಹೆಚ್ಚುತ್ತದೆ. ವಿಜಯನಗರ ಮತ್ತು ದಾವಣಗೆರೆ ಜಿಲ್ಲೆಗೆ ವರ್ಗಾವಣೆಯಿಂದ ಹೆಚ್ಚು ಪ್ರಯೋಜನವಾಗಿದೆ.
– ಬಿ.ಬಿ. ಕಾವೇರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತೆ

Advertisement

- ರಾಕೇಶ್‌ ಎನ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next