ಬಾಗಲಕೋಟೆ: ಮಹಾರಾಷ್ಟ್ರದಿಂದ ಬಂದಿದ್ದ 2 ವರ್ಷದ ಮಗು ಸಹಿತ ಮೂವರಿಗೆ ಶುಕ್ರವಾರ ಕೋವಿಡ್ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಈ ವರೆಗೆ 10 ಸಾವಿರಕ್ಕೂ ಮೇಲ್ಪಟ್ಟು ಜನರಿಗೆ ಕೋವಿಡ್-19 ಪರೀಕ್ಷೆ ನಡೆಸಲಾಗಿದೆ.
ಬಾದಾಮಿ ತಾಲೂಕಿನ ರಾಗಾಪುರ 55 ವರ್ಷದ ಮಹಿಳೆ ಪಿ-7950 (ಬಿಜಿಕೆ-113), 2 ವರ್ಷದ ಗಂಡು ಮಗು ಪಿ-7951 (ಬಿಜಿಕೆ-114) ಹಾಗೂ ಬಾಗಲಕೋಟೆಯ ಲವಳೇಶ್ವರ ತಾಂಡಾದ 25 ವರ್ಷದ ಮಹಿಳೆ ಪಿ-7952 (ಬಿಜಿಕೆ-115)ಗೆ ಸೋಂಕು ದೃಢಪಟ್ಟಿದೆ. ಬಿಜಿಕೆ-113 ಮತ್ತು ಬಿಜಿಕೆ-114 ಸೋಂಕಿತರುಮಹಾರಾಷ್ಟ್ರದ ಪುಣೆಯಿಂದ ಬಂದಿದ್ದು, ಅಲ್ಲಿಯ ನಂಟಿನಿಂದ ಸೋಂಕು ದೃಢಪಟ್ಟಿದೆ. ಇನ್ನು ಲವಳೇಶ್ವರ ತಾಂಡಾದ ಬಿಜಿಕೆ-115 ಸೋಂಕಿತ ಮಹಿಳೆ ಗೋವಾದಿಂದ ಬಂದಿದ್ದು, ಬಿಜಿಕೆ-112 ವ್ಯಕ್ತಿಯ ಪತ್ನಿಯಾಗಿದ್ದಾರೆ. ಪತಿಗೆ ಗುರುವಾರ ಕೋವಿಡ್ ದೃಢಪಟ್ಟಿತ್ತು.
10 ಸಾವಿರ ಜನರ ಪರೀಕ್ಷೆ: ಜಿಲ್ಲೆಯಿಂದ ಕಳುಹಿಸಲಾದ ಬಾಕಿ 75 ಸ್ಯಾಂಪಲ್‌ಗಳ ಪೈಕಿ 60 ಸ್ಯಾಂಪಲ್‌ಗಳ ವರದಿ ನೆಗೆಟಿವ್ ಬಂದಿದ್ದು, 3 ಜನರಿಗೆ ಪಾಸಿಟಿವ್ ಬಂದಿದೆ. ಇನ್ನು 2 ಸ್ಯಾಂಪಲ್ ವರದಿ ಬರಬೇಕಿದೆ. ಶುಕ್ರವಾರ ಮತ್ತೆ ಹೊಸದಾಗಿ 147 ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ|ಕೆ. ರಾಜೇಂದ್ರ ತಿಳಿಸಿದ್ದಾರೆ.
ಬೇರೆ ಬೇರೆ ರಾಜ್ಯದಿಂದ ಬಂದಿರುವ 570 ಜನರ ಮೇಲೆ ನಿಗಾ ವಹಿಸಲಾಗುತ್ತಿದೆ. ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು 10051 ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 9729 ನೆಗೆಟಿವ್, 115 ಪಾಸಿಜಿವ್ ಬಂದಿದೆ. ಜಿಲ್ಲೆಯಲ್ಲಿ ಕೊರೊನಾದಿಂದ ಓರ್ವ ವ್ಯಕ್ತಿ ಮಾತ್ರ ಮೃತಪಟ್ಟಿದ್ದಾರೆ. ಕೋವಿಡ್-19ದಿಂದ ಒಟ್ಟು 94 ಜನ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇನ್ನು 20 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್‌ಸ್ಟಿಟ್ಯೂಶನ್ ಕ್ವಾರಂಟೈನ್‌ನಲ್ಲಿದ್ದ 3433 ಜನರನ್ನು ಬಿಡುಗಡೆ ಮಾಡಲಾಗಿದೆ. ಗುರುವಾರ ಜಿಲ್ಲೆಗೆ ಮತ್ತೆ ಒಬ್ಬರು ಮಹಾರಾಷ್ಟ್ರ, ಇಬ್ಬರು ರಾಜ್ಯಸ್ಥಾನದಿಂದ ಬಂದಿದ್ದು, ಮಹಾರಾಷ್ಟ್ರದಿಂದ ಬಂದವರನ್ನು ಸಾಂಸ್ಥಿಕ ಕ್ವಾರಂಟೈನ್, ರಾಜ್ಯಸ್ಥಾನದಿಂದ ಬಂದವರನ್ನ ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇಳಕಲ್ಲದ ಯುವತಿ ಕೋವಿಡ್ ಮುಕ್ತ: ಕಳೆದ ಜೂ.8ರಂದು ಕೋವಿಡ್ ಸೋಂಕು ದೃಢಪಟ್ಟು ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಳಕಲ್ಲದ 18 ವರ್ಷದ ಯುವತಿ ಪಿ-5759 (ಬಿಜಿಕೆ-92) ಕೊರೊನಾ ಮುಕ್ತವಾಗಿ ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಈ ಯುವತಿ ತನ್ನ ತಾಯಿ ಜತೆಗೆ ಮಹಾರಾಷ್ಟ್ರದಿಂದ ಮರಳಿದ್ದರು. ಯುವತಿಯ ತಾಯಿ ಪಿ-5830 ಅವರು ಇನ್ನೂ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ದಿಂದ ಗುಣಮುಖರಾದ ಯುವತಿಗೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಪ್ರಕಾಶ ಬಿರಾದಾರ, ವೈದ್ಯಕೀಯ ಪ್ರಮಾಣ ಪತ್ರ ನೀಡಿ ಬಿಡುಗಡೆಗೊಳಿಸಿದರು.