Advertisement
ಸೋಮವಾರ ತಮ್ಮ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀದಿಬದಿ ವ್ಯಾಪಾರವೆಂದರೆ ಕುಳಿತುಕೊಂಡು, ತಳ್ಳುಗಾಡಿ ಅಥವಾ ತಲೆಯಲ್ಲಿ ಹೊತ್ತು ವ್ಯಾಪಾರ. ಇಂತಹ ವ್ಯಾಪಾರಕ್ಕೆ ಪಾಲಿಕೆ ವ್ಯಾಪ್ತಿಯ 10 ಕಡೆಗಳಲ್ಲಿ ವ್ಯಾಪಾರ ವಲಯ ಗುರುತಿಸಲಾಗಿದೆ. ತಿಂಗಳೊಳಗೆ ಅವುಗಳನ್ನು ಹಸ್ತಾಂತರ ಮಾಡಲಾಗುವುದು. ನಗರ ಯೋಜನಾ ಸಮಿತಿಯಲ್ಲಿ ನಿರ್ಧರಿಸಿ ಪರಿಶೀಲನೆ ಮಾಡಿ ಕ್ರಮ ವಹಿಸಲಾಗುವುದು. ನಗರದ ಎರಡು ಪ್ರಮುಖ ರಸ್ತೆಗಳನ್ನು ಗುರುತಿಸಿ ಟೆಂಡರ್ ಮೂಲಕ ‘ಫುಡ್ ಸ್ಟ್ರೀಟ್’ ವ್ಯವಸ್ಥೆ ಕಲ್ಪಿಸಲು ಕೂಡ ಪಾಲಿಕೆ ಮುಂದಾಗಿದೆ ಎಂದು ತಿಳಿಸಿದರು.
Related Articles
Advertisement
ಗುರುತಿನ ಚೀಟಿ ನೀಡಲಾಗಿಲ್ಲ ಎಂದ ಮೇಲೆ ಪಿಎಂ ಸ್ವನಿಧಿಯಲ್ಲಿ ಸಾಲ ಯಾವ ಆಧಾರದಲ್ಲಿ ಸಾಲ ನೀಡಲಾಗಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ, ಸಾಲ ಪಡೆದ 667 ಮಂದಿಯಲ್ಲಿ 63 ಮಂದಿ ತಳ್ಳುಗಾಡಿ ವ್ಯಾಪಾರಿಗಳು. ಕೆಲವರು ಮನೆಗಳಲ್ಲೇ ಆಹಾರ ತಯಾರಿಸಿ ಮಾರಾಟ ಮಾಡುವವರೂ ಇದ್ದಾರೆ ಎಂದರು. ಉಪ ಮೇಯರ್ ಸುನೀತಾ, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಸ್ಥಾಯೀ ಸಮಿತಿ ಅಧ್ಯಕ್ಷರಾದ ಭರತ್ ಕುಮಾರ್, ಲೋಹಿತ್ ಅಮೀನ್, ಅಧಿಕಾರಿಗಳು ಉಪಸ್ಥಿತರಿದ್ದರು.
ಮಣ್ಣಗುಡ್ಡೆ, ಬಿಜೈ ಪರಿಸರದಲ್ಲಿ ಕಾರ್ಯಾಚರಣೆ
ಸೋಮವಾರವೂ “ಆಪರೇಷನ್ ಟೈಗರ್ ಕಾರ್ಯಾಚರಣೆ’ ನಗರದಲ್ಲಿ ಮುಂದುವರೆದಿದೆ. ಮಣ್ಣಗುಡ್ಡೆ, ಬಿಜೈ, ಕಾಪಿಕಾಡ್ ರಸ್ತೆಯಲ್ಲಿ ಅನಧಿಕೃತ ಅಂಗಡಿಗಳನ್ನು ಪೊಲೀಸ್ ಬಂದೋಬಸ್ತ್ನೊಂದಿಗೆ ಕಾರ್ಯಾಚರಣೆ ನಡೆಸಿ ತೆರವು ಮಾಡಲಾಯಿತು. ಪಾಲಿಕೆಯ ವಲಯ ಆಯುಕ್ತೆ ರೇಖಾ ಜೆ. ಶೆಟ್ಟಿ ನೇತೃತ್ವ ವಹಿಸಿದ್ದರು. ಕಾರ್ಯಾಚರಣೆ ನಿರಂತರವಾಗಿ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಚ್ಛತೆಯ ಕೊರತೆ, ಶರಾಬು ಕೂಡಾ ಮಾರಾಟ!
ನಗರದ ಹೃದಭಾಗವಾದ ಕೆಪಿಟಿ ರಸ್ತೆ, ಲೇಡಿಗೋಶನ್, ಸ್ಟೇಟ್‌ಬ್ಯಾಂಕ್, ಕಂಕನಾಡಿ, ಪಂಪ್‌ವೆಲ್, ಸುರತ್ಕಲ್ ಸಹಿತ ವಿವಿಧ ಕಡೆ ಸಾವಿರಾರು ಸಂಖ್ಯೆಯಲ್ಲಿ ಗೂಡಂಗಡಿಗಳು ಕಾರ್ಯಾಚರಿಸುತ್ತಿದ್ದವು. ಇವುಗಳನ್ನು ತೆರವುಗೊಳಿಸಲಾಗಿದ್ದು, ಕಾರ್ಯಾಚರಣೆ ಸಂದರ್ಭದಲ್ಲಿ ಬಹುತೇಕ ಆಹಾರ ಪೂರೈಕೆಯ ಗೂಡಂಗಡಿಗಳು ಸೇರಿದಂತೆ ಬೀದಿ ಬದಿ ವ್ಯಾಪಾರದ ಸ್ಥಳಗಳಲ್ಲಿ ಸ್ವತ್ಛತೆಯಕೊರತೆ ಕಂಡುಬಂದಿದೆ ಎಂದು ಮೇಯರ್ ಸುಧೀರ್ ಶೆಟ್ಟಿ ವಿವರಿಸಿದರು. ಕೆಲ ಗೂಡಂಗಡಿಗಳಲ್ಲಿ ಶರಾಬು ಮಾರಾಟ, ಆಹಾರಪದಾರ್ಥಗಳಿಗೆ ಅಜಿನೊಮೋಟೋ ಮೊದಲಾದ ಪದಾರ್ಥಗಳನ್ನು ಉಪಯೋಗಿಸುತ್ತಿರುವುದು ಕಂಡುಬಂದಿದೆ. ನಗರದಲ್ಲಿ ಡೆಂಗ್ಯೂ, ಮಲೇರಿಯಾ ಹೆಚ್ಚುತ್ತಿರುವುದು, ಪಾದಚಾರಿಗಳು, ವಾಹನ ಸವಾರರಿಗೆ ತೊಂದರೆಯಾಗುತ್ತಿರುವುದರಿಂದ ಟೈಗರ್ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದು ನಿರಂತರವಾಗಿ ಮುಂದುವರಿಯಲಿದೆ ಎಂದು ಅವರು ಹೇಳಿದರು.
ಷರತ್ತುಗಳಿಗೆ ಒಪ್ಪಿ ಮಾತುಕತೆಗೆ ಬನ್ನಿ
ಫೋನ್ ಇನ್, ಮನಪಾ ಸಾಮಾನ್ಯ ಸಭೆಗಳಲ್ಲಿ ಅನಧಿಕೃತ ಗೂಡಂಗಡಿ, ಬೀದಿಬದಿ ವ್ಯಾಪಾರಿಗಳಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ತೀವ್ರ ಆಕ್ಷೇಪವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಜು. 29ರಿಂದ ಟೈಗರ್ ಕಾರ್ಯಾಚರಣೆ ಆರಂಭಿಸಲಾಗಿದೆ. ಈ ಬಗ್ಗೆ ಸಾಕಷ್ಟು ಆಕ್ಷೇಪ, ಟೀಕೆ, ಪ್ರತಿರೋಧ ವ್ಯಕ್ತವಾಗಿದೆ. ಕಾರ್ಯಾಚರಣೆ ಆರಂಭದ ಕೆಲವು ದಿನಗಳ ಮೊದಲು ಬೀದಿಬದಿ ವ್ಯಾಪಾರಿಗಳ ಸಂಘಟನೆಯ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಆಪ್ತ ಕಾರ್ಯದರ್ಶಿ ಮೂಲಕ ಮನವಿ ನೀಡಿದ್ದಾರೆ. ಬಳಿಕ ನನ್ನನ್ನು ಯಾರೂ ಭೇಟಿ ಮಾಡಿಲ್ಲ. ಷರತ್ತು ಒಪ್ಪಿ ವ್ಯಾಪಾರ ನಡೆಸುವವರಿಗೆ ಗುರುತಿನ ಚೀಟಿ ನೀಡಲು ಮನಪಾ ಬದ್ಧವಾಗಿದೆ. ಹಾಗಾಗಿ ವ್ಯಾಪಾರಸ್ಥರ ಸಮಿತಿಯ ಪದಾಧಿಕಾರಿಗಳು ಮುಕ್ತವಾಗಿ ಚರ್ಚೆ ಮಾಡಿ ಬಡ ವ್ಯಾಪಾರಿಗಳಿಗೆ ವ್ಯವಸ್ಥೆ ಕಲ್ಪಿಸಲು ಅವಕಾಶ ನೀಡಬೇಕು ಎಂದರು.
- ತಳ್ಳುಗಾಡಿ ವ್ಯಾಪಾರದ ಗುರುತಿನ ಚೀಟಿ, ಪ್ರಮಾಣಪತ್ರ ಕಡ್ಡಾಯ
- ಜೀವನೋಪಾಯಕ್ಕೆ ಬೇರೆ ಸಂಪನ್ಮೂಲ ಹೊಂದಿರಬಾರದು
- ನಿಗದಿತ ಪ್ರದೇಶದಲ್ಲಿ ಮಾತ್ರವೇ ವ್ಯಾಪಾರ. ಶಾಶ್ವತ ಅಂಗಡಿ ನಿರ್ಮಿಸುವಂತಿಲ್ಲ, ಬಾಡಿಗೆ, ಲೀಸ್‌ಗೆ ನೀಡುವಂತಿಲ್ಲ
- ವ್ಯಾಪಾರಸ್ಥ ಅಥವಾ ಕುಟುಂಬಸ್ಥನ ಹೆಸರಲ್ಲಿ ಮಾತ್ರವೇ ಗುರುತಿನ ಚೀಟಿ ಇರಬೇಕು
- ಸಂಚಾರಕ್ಕೆ, ಪಾದಚಾರಿಗಳಿಗೆ ತೊಂದರೆಯಾಗದಂತೆ ವ್ಯಾಪಾರ ಮಾಡತಕ್ಕದ್ದು. ಜನದಟ್ಟಣೆ ಜಾಗದಲ್ಲಿ ಅವಕಾಶವಿಲ್ಲ
- ವ್ಯಾಪಾರಿಗೆ ವ್ಯಾಪಾರದ ಸ್ಥಳದ ಮೇಲೆ ಯಾವುದೇ ಮಾಲಿಕತ್ವ, ಹಕ್ಕು ಇರುವುದಿಲ್ಲ.
- ಪಾಲಿಕೆ ನಿಗದಿ ಪಡಿಸುವ ಶುಲ್ಕ ಪಾವತಿಗೆ ಬದ್ಧ/ ವಿಳಂಬವಾದಲ್ಲಿ ದಂಡ ಪಾವತಿಸಬೇಕು
- ವ್ಯಾಪಾರಿ ಮೃತಪಟ್ಟಲ್ಲಿ, ಶಾಶ್ವತ ಅಂಗವಿಕಲತೆಗೆ ಒಳಗಾದಲ್ಲಿ ಕುಟುಂಬದ ಅವಲಂಬಿತ ಒಬ್ಬರಿಗೆ ವ್ಯಾಪಾರ ಅವಕಾಶ.
- ಪಟ್ಟಣ ವ್ಯಾಪಾರ ಸಮಿತಿಯ ಸೂಚನೆ, ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದು
- ನಿರ್ಬಂಧಿತ ವ್ಯಾಪಾರ ವಲಯ, ನಿಷೇಧಿತ ವಲಯ, ವಾಹನ ದಟ್ಟನೆ ಇರುವಲ್ಲಿ ವ್ಯಾಪಾರ ಮಾಡುವಂತಿಲ್ಲ.
- ಕೋರ್ಟ್ ವಾರ್ಡ್, ಸೆಂಟ್ರಲ್ ಮಾರ್ಕೆಟ್, ಬಂದರು, ಪೋರ್ಟ್, ಕಂಟೋನ್ಮೆಂಟ್, ಮಿಲಾಗ್ರಿಸ್, ಕಂಕನಾಡಿ ವಾರ್ಡ್‌ಗಳ ವಾಣಿಜ್ಯ ಪ್ರದೇಶಗಳಲ್ಲಿ ಅವಕಾಶವಿಲ್ಲ.
- ಸರಕಾರಿ ಕಚೇರಿಗಳು, ಆಸ್ಪತ್ರೆ, ರೈಲು ನಿಲ್ದಾಣ ಆಗಮನ/ನಿರ್ಗಮನ, ರೈಲ್ವೇ ಕ್ರಾಸಿಂಗ್ ಪ್ರದೇಶ, ಬಸ್ ನಿಲ್ದಾಣ ಪ್ರದೇಶ, ಶಿಕ್ಷಣ ಸಂಸ್ಥೆಗಳ ವಠಾರದಲ್ಲಿ ವ್ಯಾಪಾರ ನಿಷೇಧ
- ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ತೊಂದರೆಯಾಗದಂತೆ ವ್ಯಾಪಾರ ಮಾಡಬೇಕು.