ಸಿಂಗಾಪುರ : ಅಮೆರಿಕದ ಕ್ಷಿಪಣಿ ವಿನಾಶಕ ಸಮರ ನೌಕೆ ಇಂದು ಸೋಮವಾರ ಪೂರ್ವ ಸಿಂಗಾಪುರದ ದೂರ ಸಮುದ್ರದಲ್ಲಿ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು ಸಂಭವಿಸಿದ ಭಾರೀ ಅವಘಡದಲ್ಲಿ ಹತ್ತು ನಾವಿಕರು ನಾಪತ್ತೆಯಾಗಿ ಇತರ ಐವರು ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯ ಈಗ ಜಾರಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.
ಕೇವಲ ಎರಡೇ ತಿಂಗಳ ಅವಧಿಯಲ್ಲಿ ಅಮೆರಿಕ ಸಮರ ನೌಕೆಗೆ ಒದಗಿರುವ ಎರಡನೇ ಅವಘಡ ಇದಾಗಿದೆ.
ಇಂದು ಸೋಮವಾರ ನಸುಕಿನ ವೇಳೆ ಅಮೆರಿಕದ ನಿರ್ದೇಶಿತ ಕ್ಷಿಪಣಿ ವಿನಾಶಕ ಯುಎಸ್‌ಎಸ್ ಜಾನ್ ಎಸ್ ಮೆಕೇನ್, ಪೂರ್ವ ಸಿಂಗಾಪುರದ ದೂರ ಸಮುದ್ರದಲ್ಲಿ, ಮಲಕ್ಕಾ ಕೊಲ್ಲಿಯ ಸಮೀಪ, ಆಲ್‌ನಿಕ್ ಎಂಸಿ ಎಂಬ ವ್ಯಾಪಾರಿ ನೌಕೆಗೆ ಢಿಕ್ಕಿ ಹೊಡೆಯಿತು ಎಂದು ಅಮೆರಿಕದ ನೌಕಾ ಹೇಳಿಕೆ ತಿಳಿಸಿದೆ.
ಆರಂಭಿಕ ವರದಿಗಳ ಪ್ರಕಾರ ಜಾನ್ ಎಸ್ ಮೆಕೇನ್ ಕ್ಷಿಪಣಿ ವಿನಾಶಕ ನೌಕೆಗೆ ಈ ಢಿಕ್ಕಿಯಿಂದ ಬಲವಾದ ಹೊಡೆತ ಉಂಟಾಗಿದ್ದು ಅದು ಗಂಭೀರ ಹಾನಿಗೀಡಾಗಿದೆ. ನೌಕೆಯು ತನ್ನದೇ ಇಂಧನದಲ್ಲಿ ಯಾನ ನಿರತವಾಗಿದ್ದು ಬಂದರಿನೆಡೆಗೆ ಸಾಗುತ್ತಿತ್ತು ಎಂದಂದು ಮೂಲಗಳು ಹೇಳಿವೆ.
ಲೈಬೀರಿಯ ಧ್ವಜಧಾರಿ ವ್ಯಾಪಾರೀ ನೌಕೆಯು 30,000 ಟನ್ ತೂಕವಿದ್ದು ತೈಲ ಮತ್ತು ರಾಸಾಯನಿಗಳನ್ನು ಒಯ್ಯುತ್ತಿತ್ತು ಎಂದು ಕೈಗಾರಿಕಾ ಅಂತರ್‌ಜಾಲ ತಾಣ ಮೆರೈನ್ ಟ್ರಾಫಿಕ್ ತಿಳಿಸಿದೆ.