Advertisement

ಈ ವರ್ಷವೂ ಸಿಗಲ್ಲ ಶೇ.10 ಮೀಸಲಾತಿ ಸೀಟು: ವೈದ್ಯಕೀಯ ವಿದ್ಯಾರ್ಥಿಗಳಿಗೆ ನಿರಾಸೆ

12:33 AM Jul 20, 2022 | Team Udayavani |

ಬೆಂಗಳೂರು: ಆರ್ಥಿಕವಾಗಿ ಹಿಂದುಳಿದವರಿಗೆ (ಇಡಬ್ಲ್ಯುಎಸ್‌) ರಾಜ್ಯ ಸರಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ. 10ರಷ್ಟು ಮೀಸಲಾತಿ ಕಲ್ಪಿಸುವ ಸಂಬಂಧ ರಾಜ್ಯ ಸರಕಾರ ಇನ್ನೂ ನಿರ್ಣಯ ಕೈಗೊಳ್ಳದ ಪರಿಣಾಮ, ಈ ಬಾರಿ ಕೂಡ ವೈದ್ಯಕೀಯ ಸೀಟಿನಲ್ಲಿ ಮೀಸಲಾತಿ ಸಿಗಬಹುದು ಎನ್ನುವ ನಿರೀಕ್ಷೆ ಹೊಂದಿದ್ದ ವಿದ್ಯಾರ್ಥಿಗಳಿಗೆ ನಿರಾಸೆಯಾಗಿದೆ.

Advertisement

ಕಳೆದ ವರ್ಷ ಇದೇ ಪ್ರಕರಣದಿಂದ ವೈದ್ಯಕೀಯ ಪದವಿ ಪ್ರವೇಶಾತಿ ವಿಳಂಬವಾಗಿತ್ತು. ಈ ಬಾರಿಯೂ ನಿರಾಸೆಯಾಗಿದೆ. 2019ರಲ್ಲಿ ಕೇಂದ್ರ ಸರಕಾರವು ಸಂವಿಧಾನ (103ನೇ ತಿದ್ದುಪಡಿ) ಕಾಯ್ದೆಯಂತೆ ಆರ್ಥಿಕವಾಗಿ ಹಿಂದು ಳಿದವರು ಮೀಸಲಾತಿ ಪಡೆಯುವಂತೆ ನಿಯಮ ರೂಪಿಸಿದೆ. ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇ. 10 ಮೀಸಲಾತಿ ಕಲ್ಪಿಸಿದೆ. ಆದರೆ, ರಾಜ್ಯ ಸರಕಾರ ಇನ್ನೂ ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಂಡಿಲ್ಲ.

ಸದ್ಯ ಕೇಂದ್ರ ಸರಕಾರಿ ಸೇವೆ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಗೆ ಅರ್ಹತೆ ಪಡೆಯುವ ಆರ್ಥಿಕವಾಗಿ ಹಿಂದುಳಿದವರಿಗೆ ಅಗತ್ಯದ ಆದಾಯ ಮತ್ತು ಇತರ ಪ್ರಮಾಣಪತ್ರ ಕೊಡುವುದಕ್ಕೆ ಮಾತ್ರ ಸಂಬಂಧಪಟ್ಟ ಅಧಿಕಾರಿಗಳಿಗೆ ರಾಜ್ಯ ಸರಕಾರದಿಂದ ಅನುಮತಿ ನೀಡಲಾಗಿದೆ. ಶೇ. 10ರ ಮೀಸಲಾತಿಯನ್ನು ಜಾರಿ ಮಾಡಿಲ್ಲ. ಹೀಗಾಗಿ, ಆರ್ಥಿಕವಾಗಿ ಹಿಂದುಳಿದವರು ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಇನ್ನಷ್ಟೇ ನಿರ್ಧಾರವಾಗಬೇಕಿದೆ.

ರಾಜ್ಯದಲ್ಲಿ ಅನುಷ್ಠಾನವೇಕಿಲ್ಲ?
ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡುವುದು ಕೇಂದ್ರ ಸರಕಾರದ ಯೋಜನೆಯಾಗಿದ್ದು, ರಾಜ್ಯದಲ್ಲಿ ಅನುಷ್ಠಾನ ಮಾಡುವ ಸಂಬಂಧ ಕಾನೂನಾತ್ಮಕವಾಗಿ ಕಾಯ್ದೆಯನ್ನು ಮಂಡನೆ ಮಾಡಬೇಕಿದೆ. ಹಾಗಾಗಿ ಈ ಬಾರಿ ವೈದ್ಯಕೀಯ ಸೀಟು ಹಂಚಿಕೆಯಲ್ಲಿ ಶೇ. 10ರಷ್ಟು ಮೀಸಲಾತಿ ನಿಯಮ ಅನ್ವಯವಾಗು ವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ನಿರ್ದೇಶಕಿ ಡಾ| ಬಿ.ಎಲ್‌. ಸುಜಾತಾ ರಾಥೋಡ್‌ ತಿಳಿಸಿದ್ದಾರೆ. ಸದ್ಯ ಬೆಂಗಳೂರು ಮತ್ತು ಕಲಬುರಗಿ ಇಎಸ್‌ಐನಲ್ಲಿ ಮಾತ್ರ ಯೋಜನೆಯನ್ನು ಅನುಷ್ಠಾನ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಕೇಂದ್ರಕ್ಕಿಲ್ಲದ ಕಾನೂನು ಅಡ್ಡಿ ರಾಜ್ಯಕ್ಕೇಕೆ?
ಕೇಂದ್ರ ಸರಕಾರವು ಶೇ.10ರಷ್ಟು ಮೀಸಲಾತಿಯನ್ನು ಜಾರಿಗೊಳಿಸಿದೆ. ಆದರೆ, ರಾಜ್ಯ ಸರಕಾರವು ಯೋಜನೆ ಅನುಷ್ಠಾನದ ವಿಚಾರದಲ್ಲಿ ಪ್ರಕರಣವು ಕಾನೂನಾತ್ಮಕವಾಗಿ ಇತ್ಯರ್ಥವಾಗಿಲ್ಲ ಎನ್ನುತ್ತಿದೆ. ಹಾಗಾದರೆ, ಕೇಂದ್ರ ಸರಕಾರಕ್ಕಿಲ್ಲದ ಕಾನೂನು ಅಡ್ಡಿ ರಾಜ್ಯ ಸರಕಾರಕ್ಕೆ ಏಕೆ ಎನ್ನುವ ಪ್ರಶ್ನೆ ಉದ್ಭವಿಸಿದೆ.

Advertisement

ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಕೋಟಾ ಸೀಟುಗಳನ್ನು ಕೇಂದ್ರ ಸರಕಾರ ನಿರ್ಧರಿಸಲಿದೆ. ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣವು ಇನ್ನೂ ಇತ್ಯರ್ಥವಾಗದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸ್ಪಷ್ಟವಾದ ನಿರ್ಧಾರ ಕೈಗೊಂಡಿಲ್ಲ.
– ಡಾ| ಸಿ.ಎನ್‌. ಅಶ್ವತ್ಥ ನಾರಾಯಣ, ಉನ್ನತ ಶಿಕ್ಷಣ ಸಚಿವ

– ಎನ್‌.ಎಲ್‌. ಶಿವಮಾದು

Advertisement

Udayavani is now on Telegram. Click here to join our channel and stay updated with the latest news.

Next