Advertisement

ಸಾಮಾನ್ಯ ವರ್ಗದ ಬಡವರಿಗೂ ಶೇಕಡಾ 10 ಮೀಸಲಾತಿ

12:30 AM Jan 08, 2019 | |

ಹೊಸದಿಲ್ಲಿ: ಬಡಜನರ, ಆರ್ಥಿಕ ದುರ್ಬಲರ ಸರ್ವಾಂಗೀಣ ಅಭಿವೃದ್ಧಿಯತ್ತ ಹೆಜ್ಜೆಯಿಟ್ಟಿರುವ ಕೇಂದ್ರ ಸರಕಾರ, ಸರಕಾರಿ ಮೀಸಲಾತಿ ಹೊಂದಿರದ ಸಾಮಾನ್ಯ ವರ್ಗದ (ಜನರಲ್‌ ಕೆಟಗರಿ) ಬಡವರಿಗೂ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಶೇ. 10ರಷ್ಟು ಮೀಸಲಾತಿ ಕಲ್ಪಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಸಭೆಯಲ್ಲಿ ಸೋಮವಾರ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಗಿದೆ. 

Advertisement

ಸದ್ಯಕ್ಕಿರುವ ಶೇ. 50ರ ಮೀಸಲಾತಿಯ ಅನುಕೂಲಗಳಿಂದ ವಂಚಿತವಾಗಿರುವ ಸಮುದಾಯಗಳಿಗೆ ಈ ಮೀಸಲಾತಿ ಅನ್ವಯವಾಗಲಿದೆ. ಸ್ವಾತಂತ್ರ್ಯ ನಂತರ ಕೇಂದ್ರ ಸರಕಾರ ಕೈಗೊಂಡಿರುವ ಅತ್ಯಂತ ಮಹತ್ವದ ನಿರ್ಧಾರ ಇದು ಎಂದು ಹೇಳಲಾಗಿದೆ.  ಹೊಸ ಮೀಸಲಾತಿಗೆ ಪೂರಕವಾದ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಈಗ ನಡೆಯುತ್ತಿರುವ ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿಯೇ ಮಂಡಿಸಲು ತೀರ್ಮಾನಿಸಲಾಗಿದೆ. ಮಸೂದೆಯ ಮೇಲಿನ ಚರ್ಚೆಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಹಾಲಿ ಅಧಿವೇಶನವನ್ನು ಒಂದು ದಿನ ವಿಸ್ತರಿಸಲು ನಿರ್ಧರಿಸಲಾಗಿದೆ.

ಕೇಂದ್ರ ಸರಕಾರದ ಈ ನಿರ್ಧಾರವನ್ನು ಬಿಜೆಪಿ ಹಾಗೂ ಮಿತ್ರಪಕ್ಷಗಳು, ಪ್ರಧಾನಿ ಮೋದಿ ಅವರ “ಮಾಸ್ಟರ್‌ಸ್ಟ್ರೋಕ್‌’ ಎಂದು ಬಣ್ಣಿಸಿವೆ. ಕೇರಳ ಸಿಎಂ ಪಿಣರಾಯಿ ವಿಜಯನ್‌, ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಸಹಿತ ವಿಪಕ್ಷಗಳ ಕೆಲವು ನಾಯಕರೂ ಇದನ್ನು ಸ್ವಾಗತಿಸಿದ್ದಾರೆ. ಮತ್ತೂಂದೆಡೆ ಇದು ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮೋದಿ ಅವರು ಮಾಡುತ್ತಿರುವ ಚುನಾವಣ ಗಿಮಿಕ್‌ ಎಂದು ಕಾಂಗ್ರೆಸ್‌ ಆರೋಪಿಸಿದೆ. 

ಸಾಂವಿಧಾನಿಕ ತಿದ್ದುಪಡಿ?
ಸದ್ಯ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಎಲ್ಲ ರೀತಿಯ ಮೀಸಲಾತಿ ಪ್ರಮಾಣ ಒಟ್ಟು ಶೇ.50ರಷ್ಟಿದೆ. ಸುಪ್ರೀಂ ಕೋರ್ಟ್‌ನ ಹಿಂದಿನ ಆದೇಶದಂತೆ ಈ ಮಿತಿ ಶೇ.50 ಮೀರುವಂತಿಲ್ಲ. ಇದು ಕೇಂದ್ರ ಸರಕಾರದ ಹೊಸ ಮೀಸಲಾತಿ ನೀತಿಗೆ ಅಡ್ಡಿಯಾಗಲಿದೆ. ಹಾಗಾಗಿ ಈ ಮಿತಿಯನ್ನು ಶೇ. 60ಕ್ಕೆ ಏರಿಸಲು ಅನುಕೂಲವಾಗುವಂತೆ ಸಂವಿಧಾನಕ್ಕೆ ತಿದ್ದುಪಡಿ ತರಲು ಚಿಂತನೆ ನಡೆಸಲಾಗಿದೆ. ಸಂಸತ್ತಿನಲ್ಲಿ ಚರ್ಚೆಯ ಬಳಿಕವಷ್ಟೇ ಇದೆಲ್ಲವೂ ಸ್ಪಷ್ಟವಾಗಲಿದೆ. 

ಈ ಹೊಸ ಪ್ರಸ್ತಾವನೆಯ ಬಗ್ಗೆ ಸ್ಪಷ್ಟನೆ ನೀಡಿರುವ ಸರಕಾರ, ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗಾಗಿ ಕಲ್ಪಿಸುವ ಶೇ. 10ರಷ್ಟು ಮೀಸಲಾತಿ ಆಯಾ ಶಿಕ್ಷಣಕ್ಕೆ ಹಾಗೂ ಉದ್ಯೋಗಗಳಿಗೆ ಅರ್ಹತೆ ನೀಡಿದಂತಲ್ಲ ಎಂದು ಸ್ಪಷ್ಟಪಡಿಸಿದೆ. ಜತೆಗೆ ಆರ್ಥಿಕವಾಗಿ ಹಿಂದುಳಿದ ಹಿಂದೂಗಳು, ಮುಸ್ಲಿಮರು, ಕ್ರೈಸ್ತರಿಗೂ ಈ ಮೀಸಲಾತಿ ಅನ್ವಯವಾಗುತ್ತದೆ. ಹೊಸ ಮೀಸಲಾತಿಯಿಂದ ಈಗ ಚಾಲ್ತಿಯಲ್ಲಿರುವ ಎಸ್‌ಸಿ, ಎಸ್‌ಟಿ, ಒಬಿಸಿ ಹಾಗೂ ಇನ್ನಿತರ ಕೋಟಾಗಳಿಗೆ ಯಾವುದೇ ತೊಂದರೆಯಾಗದು ಎಂದು ಹೇಳಿದೆ.

Advertisement

ಸಾಮಾನ್ಯ ವರ್ಗದ ಬಡವರಿಗೆ ಶೇ. 10ರಷ್ಟು ಮೀಸಲಾತಿ ನೀಡುವ ವಿಚಾರ ಲೋಕಸಭೆಯಲ್ಲಿ ಚರ್ಚೆಗೆ ಬರಲಿರುವ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ತಮ್ಮ ಪಕ್ಷಗಳ ಸಂಸದರಿಗೆ ಮಂಗಳವಾರದ ಸಂಸತ್‌ ಕಲಾಪಗಳಿಗೆ ಕಡ್ಡಾಯವಾಗಿ ಹಾಜರಾಗಬೇಕೆಂದು ವಿಪ್‌ ಜಾರಿಗೊಳಿಸಿವೆ. 

ಮೀಸಲಾತಿ ಪ್ರಮಾಣ ಶೇ.50ರಷ್ಟು ಮೀರುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿರುವಾಗ ಕೇಂದ್ರ ಯಾವ ಆಧಾರದಲ್ಲಿ  ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.10ರ ಮೀಸಲಾತಿ ಕಲ್ಪಿಸಲು ಮುಂದಾಗಿದೆ ಎಂಬುದು ಅರ್ಥವಾಗುತ್ತಿಲ್ಲ. ಇದೊಂದು ಚುನಾವಣ ಗಿಮಿಕ್‌. ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಚುನಾವಣೆಯಲ್ಲಿ  ನೀಡಿದ್ದ ಆಶ್ವಾಸನೆಯಂತೆ ಉದ್ಯೋಗ ಕಲ್ಪಿಸಿಲ್ಲ.
ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ 

ಕೇಂದ್ರದ ನಿರ್ಧಾರವು ಬಡ ವಿದ್ಯಾರ್ಥಿಗಳು ಹಾಗೂ ಯುವ ಜನತೆಗೆ ಐತಿಹಾಸಿಕ ಕೊಡುಗೆಯಾಗಿದೆ. ಇದರಿಂದ ಮೇಲ್ವರ್ಗದ ಬಡವರು ಹಾಗೂ ಜಾತಿ, ಧರ್ಮ ಆಧಾರಿತ ಮೀಸಲಾತಿ ವಂಚಿತರಾದವರು ಆಶಾವಾದಿಗಳಾಗಿ ಬದುಕಲು ಅವಕಾಶ ಸಿಕ್ಕಿದಂತಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಎನ್‌ಡಿಎ ಸರಕಾರದ “ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌’ ಎಂಬ ಪರಿಕಲ್ಪನೆಗೆ ಅರ್ಥ ಕಲ್ಪಿಸಿದಂತಾಗಲಿದೆ. ಕೇಂದ್ರ ಸರಕಾರ ನುಡಿದಂತೆ ನಡೆಯುತ್ತಿದೆ ಎಂಬ ಆಶಾಭಾವನೆ ಗಟ್ಟಿಯಾಗುತ್ತದೆ.
ಬಿ.ಎಸ್‌. ಯಡಿಯೂರಪ್ಪ , ಬಿಜೆಪಿ ರಾಜ್ಯಾಧ್ಯಕ್ಷ

ಮೀಸಲಾತಿಗೆ ಮಾನದಂಡ
ವಾರ್ಷಿಕ ಆದಾಯ 8 ಲಕ್ಷ ರೂ. ಮೀರಿರಬಾರದು
ಕೃಷಿ ಭೂಮಿ ಐದು ಎಕರೆಗಿಂತ ಹೆಚ್ಚಿರಬಾರದು
ವಾಸದ ಮನೆ 1,000 ಚದರ ಅಡಿಯೊಳಗಿರಬೇಕು
ಸೈಟು ಹೊಂದಿದ್ದರೆ ಅದು 1,800 ಚದರಡಿ ಒಳಗಿರಬೇಕು

 
 

Advertisement

Udayavani is now on Telegram. Click here to join our channel and stay updated with the latest news.

Next