Advertisement

ಎಂಜಿನಿಯರಿಂಗ್‌ ಶುಲ್ಕ ಶೇ.10 ಹೆಚ್ಚಳ

11:07 PM Jun 15, 2023 | Team Udayavani |

ಬೆಂಗಳೂರು: ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಎಂಜಿನಿಯರಿಂಗ್‌ ಶುಲ್ಕ ಶೇ. 10ರಷ್ಟು ಹೆಚ್ಚಳವಾಗಲಿದೆ. ಈ ಹಿಂದೆ ಇದ್ದ ಬಿಜೆಪಿ ಸರಕಾರವೇ ನಿಯಮದ ಅನುಸಾರ ಶುಲ್ಕ ಹೆಚ್ಚಳ ಮಾಡಿದೆ. ಈ ಬಗ್ಗೆ ಖಾಸಗಿ ಶಾಲೆಗಳ ಮ್ಯಾನೇಜ್‌ಮೆಂಟ್‌ಗಳ ಜತೆ ಒಪ್ಪಂದವೂ ಆಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ.ಸುಧಾಕರ್‌ ತಿಳಿಸಿದ್ದಾರೆ.

Advertisement

ಹಿಂದಿನ ಸರಕಾರದ ಶುಲ್ಕ ಹೆಚ್ಚಳದ ತೀರ್ಮಾನದಲ್ಲಿ ಲೋಪದೋಷಗಳಿವೆಯೇ ಎಂಬುದನ್ನು ಪರಿಶೀಲಿಸಿದ್ದು, ನಿಯಮಗಳನ್ನು ಪಾಲಿಸಿರುವುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಗೊಂದಲ ಸೃಷ್ಟಿಸದೇ ಪರಿಷ್ಕೃತ ಶುಲ್ಕದಂತೆ ದಾಖಲಾತಿ ನಡೆಯಲಿದ್ದು, ಈ ಬಗ್ಗೆ ಪ್ರತ್ಯೇಕವಾಗಿ ಆದೇಶ ಹೊರಡಿಸುವುದಾಗಿ ಸಚಿವರು ಹೇಳಿದ್ದಾರೆ.
2022ರ ಸಾಲಿನಲ್ಲಿ ಸರಕಾರಿ ಕಾಲೇಜಿನಲ್ಲಿ 38,200 ರೂ., ಖಾಸಗಿ ಟೈಪ್‌-1 ಕಾಲೇಜಿನಲ್ಲಿ 91,796 ರೂ., ಟೈಪ್‌- 2ರಲ್ಲಿ 98,984 ರೂ. ಡೀಮ್ಡ್, ಖಾಸಗಿ ಕಾಲೇಜಿನಲ್ಲಿ 91,796 ರೂ.ಗಳು ನಿಗದಿಯಾಗಿತ್ತು. ಹಾಗೆಯೇ 20 ಸಾವಿರ ರೂ ಹೆಚ್ಚುವರಿ ಶುಲ್ಕ ಪಡೆಯುವ ಅವಕಾಶವಿತ್ತು. ಈಗ ಇದರ ಮೇಲೆ ಶೇ. 10ರಷ್ಟು ಹೆಚ್ಚುವರಿ ಶುಲ್ಕ ವಿಧಿಸಲು ಸರಕಾರ ಮುಂದಾಗಿದೆ.

ಸಹಾಯಕ ಪ್ರಾಧ್ಯಾಪಕರ ನೇಮಕ ಪರಿಶೀಲನೆ
ಕೆಇಎ ನಡೆಸಿದ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ವಿಚಾರವಾಗಿ ತನಿಖೆಯಲ್ಲಿದ್ದರೂ ಅಂತಿಮ ಪಟ್ಟಿ ಬಿಡುಗಡೆ ಮಾಡಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಿಚಾರದ ಬಗ್ಗೆ ತಿಳಿದುಕೊಂಡಿದ್ದೇನೆ. ನೇಮಕಾತಿ ಆದೇಶ ನೀಡಿಲ್ಲ. ಅಕ್ರಮದ ಬಗ್ಗೆ ಪೊಲೀಸರಿಂದ ತನಿಖೆ ನಡೆಯುತ್ತಿದೆ. ಇದರ ಮಾಹಿತಿ ಪಡೆದು ಬಳಿಕ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾಶಂಕರ್‌ ಉಪಸ್ಥಿತರಿದ್ದರು.

ಅಗ್ರ ರ್‍ಯಾಂಕ್‌ ಪಡೆದವರಿಗೆ ಸ್ಕಾಲರ್‌ಶಿಪ್‌
ಸಿಇಟಿಯಲ್ಲಿ ಅಗ್ರ ಮೂರು ರ್‍ಯಾಂಕ್‌ ಪಡೆದವರಿಗೆ ಸ್ಕಾಲರ್‌ಶಿಪ್‌ ನೀಡುವ ಪರಿಪಾಠವಿದೆ. ಆದರೆ ಬಹುತೇಕ ಅಗ್ರ ಶ್ರೇಯಾಂಕಿತರು ನೀಟ್‌, ಜೆಇಇ ಅಡ್ವಾನ್ಸ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅಲ್ಲೇ ಸೀಟ್‌ ಪಡೆದು ತಮ್ಮ ವಿದ್ಯಾಭ್ಯಾಸ ಮುಂದುವರಿಸುತ್ತಾರೆ. ಆದರೂ ನಾವು ನಮ್ಮ ಸ್ಕಾಲರ್‌ ಶಿಪ್‌ ಅವಕಾಶವನ್ನು ಮುಕ್ತವಾಗಿಟ್ಟಿದ್ದು, ಈ ವರ್ಷ ಅಗ್ರ ರ್‍ಯಾಂಕ್‌ ಪಡೆದವರು ಸಿಇಟಿಯ ಆಧಾರದಲ್ಲಿ ತಮ್ಮ ಶಿಕ್ಷಣ ಮುಂದುವರಿಸಲು ಬಯಸಿದರೆ ಅವರಿಗೆ ಸ್ಕಾಲರ್‌ ಶಿಪ್‌ ನೀಡುತ್ತೇವೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್‌. ರಮ್ಯಾ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next