Advertisement

ಮಾಲೀಕನ ಅಪಹರಿಸಿದ 10 ಮಂದಿ ಸೆರೆ

01:29 PM Oct 16, 2018 | |

ಬೆಂಗಳೂರು: ನ್ಯಾಯಾಲಯದಲ್ಲಿ ತಮ್ಮ ಪರ ವಾದಿಸುವ ವಕೀಲರಿಗೆ ಹಣ ಕೊಡಲು ಮತ್ತು ಮೋಜಿನ ಜೀವನ ನಡೆಸುವ ಉದ್ದೇಶದಿಂದ ಬಾಡಿಗೆ ಮನೆ ಮಾಲೀಕನನ್ನು ಅಪಹರಿಸಿ ಚಿನ್ನಾಭರಣ ಹಾಗೂ ನಗದು ದರೋಡೆ ಮಾಡಿ ಪರಾರಿಯಾಗಿದ್ದ 10 ಮಂದಿ ಉತ್ತರ ವಿಭಾಗದ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ಗಣಪತಿಪುರದ ಪ್ರಶಾಂತ್‌ ಅಲಿಯಾಸ್‌ ಮುಳ್ಳು (26), ಕೆ.ಎಸ್‌.ಲೇಔಟ್‌ ನಿವಾಸಿ ವಿನಯ್‌ ಕುಮಾರ್‌ ಅಲಿಯಾಸ್‌ ವಿನಯ್‌ (28), ಯಶವಂತಪುರದ ರಘುವೀರ್‌ ಅಲಿಯಾಸ್‌ ರಘು (22), ಇಂದಿರಾನಗರದ ಪ್ರದೀಪ್‌ ಅಲಿಯಾಸ್‌ ಚಿರಂಜೀವಿ (30), ಜಯನಗರದ ವಿಶ್ವನಾಥ್‌ ಅಲಿಯಾಸ್‌ ಸೈಕೋ ವಿಶ್ವ (27), ಕೊತ್ತನೂರಿನ ಮಹೇಶ್‌ ಅಲಿಯಾಸ್‌ ಪುಟ್ಟ (24), ಅಗ್ರಹಾರ ದಾಸರಹಳ್ಳಿಯ ರಾಘವೇಂದ್ರರಾವ್‌ ಶಿಂಧೆ (28), ಜಯನಗರದ ವಿಜಯ್‌ ಕುಮಾರ್‌ ಅಲಿಯಾಸ್‌ ವಿಜಿ (32), ಹಳೇಗುಡ್ಡದಹಳ್ಳಿ ನಿವಾಸಿ ವಿಜಯ್‌ ಕುಮಾರ್‌ ಅಲಿಯಾಸ್‌ ಗುಡ್ಡದಹಳ್ಳಿ ವಿಜಿ (36), ಕಾಮಾಕ್ಷಿಪಾಳ್ಯದ ಕಿಶೋರ್‌ ಕುಮಾರ್‌ ಅಲಿಯಾಸ್‌ ಕಿಶನ್‌ (24) ಬಂಧಿತರು. ಇವರಿಂದ 10 ಲಕ್ಷ ರೂ. ಮೌಲ್ಯದ 300 ಗ್ರಾಂ. ಚಿನ್ನಾಭರಣ, ಒಂದು ಇನೋವಾ ಕಾರು, ಒಂದು ಮಾರುತಿ ಕಾರು, ಒಂದು ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ. 

ಆರೋಪಿಗಳ ಬಂಧನದಿಂದ ಕೋಣನಕುಂಟೆ, ಬನಶಂಕರಿ, ಮಂಡ್ಯ, ಪುಟ್ಟೇನಹಳ್ಳಿ ಠಾಣೆಗಳಲ್ಲಿ ದಾಖಲಾಗಿದ್ದ ದರೋಡೆ, ಹಲ್ಲೆ ಪ್ರಕರಣಗಳು ಪತ್ತೆಯಾಗಿವೆ. ಈ ಮೊದಲು ಬಂಧನಕ್ಕೊಳಗಾಗಿದ್ದ ರೋಪಿಗಳು ಕೆಲ ತಿಂಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದರು. ಬಳಿಕ ರಘುವೀರ್‌ನ ಸೂಚನೆಯಂತೆ ಸೆ.27ರಂದು ಮತ್ತಿಕೆರೆ ಬಳಿಯ ಮುತ್ಯಾಲನಗರದ ಮನೆಯಿಂದ ವೆಂಕಟೇಶ್‌ ಎಂಬುವವರನ್ನು ಅಪಹರಿಸಿ 300 ಗ್ರಾಂ. ಚಿನ್ನ, 24 ಸಾವಿರ ರೂ. ನಗದು ದರೋಡೆ ಮಾಡಿ ಮಾರ್ಗ ಮಧ್ಯೆ ಬಿಟ್ಟು ಹೋಗಿದ್ದರು ಎಂದು ಪೊಲೀಸರು ಹೇಳಿದರು. 

ರಘುವೀರನ ಸಂಚು: ಅಪಹರಣಕ್ಕೊಳಗಾದ ವೆಂಕಟೇಶ್‌ ಹಲವು ಮನೆಗಳನ್ನು ಬಾಡಿಗೆಗೆ ನೀಡಿದ್ದಾರೆ. ಇತ್ತೀಚೆಗಷ್ಟೇ ನಾಲ್ಕು ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳನ್ನು ಅವರು ಮಾರಾಟ ಮಾಡಿದ್ದರು. ಓಲಾ ಕ್ಯಾಬ್‌ ಚಾಲಕನಾಗಿದ್ದ ಪ್ರಮುಖ ಆರೋಪಿ ರಘುವೀರ್‌, ಎರಡು ವರ್ಷಗಳಿಂದ ವೆಂಕಟೇಶ್‌ರ ಬಾಡಿಗೆ ಮನೆಯಲ್ಲಿ ವಾಸವಿದ್ದು, ಪ್ರತಿ ತಿಂಗಳು ಬಾಡಿಗೆ ಹಣ ಕೊಡಲು ಅವರ ಮನೆಗೆ ಹೋಗುತ್ತಿದ್ದ. ಈ ವೇಳೆ ವೆಂಕಟೇಶ್‌ರ ಶ್ರೀಮಂತಿಕೆ, ಮೈಮೇಲೆ ಹಾಕಿಕೊಂಡಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ಬಾರ್‌ ಮಾರಾಟ ಮಾಡಿದ್ದ ಹಣದ ಬಗ್ಗೆ ತಿಳಿದುಕೊಂಡಿದ್ದ.
 
ಈ ಮಧ್ಯೆ, ರಘುವೀರ್‌ ಆರು ತಿಂಗಳ ಹಿಂದಷ್ಟೇ ಮನೆ ಖಾಲಿ ಮಾಡಿ ಮತ್ತಿಕೆರೆಯಲ್ಲಿ ತನ್ನ ಸಹೋದರಿ ಮನೆಯಲ್ಲಿ ವಾಸವಾಗಿದ್ದ. ನಾಯಿ ಸಾಕುವ ಆಸಕ್ತಿ ಹೊಂದಿದ್ದ ರಘುವೀರ್‌, ಆಗಾಗ್ಗೆ ಕನಕಪುರ ರಸ್ತೆಯಲ್ಲಿರುವ ಸೋಮನಹಳ್ಳಿಯಲ್ಲಿರುವ ನಾಯಿ ಮತ್ತು ಬಾತುಕೋಳಿ ಫಾರಂಗೆ ಹೋಗುತ್ತಿದ್ದ. ಆಗ ಫಾರಂಗೆ ಬರುತ್ತಿದ್ದ ಪ್ರಶಾಂತ್‌ ಹಾಗೂ ಇತರೆ ಆರೋಪಿಗಳ ಪರಿಚಯವಾಗಿತ್ತು. ಬಳಿಕ ಎಲ್ಲರೂ ಒಟ್ಟಿಗೆ ಸೇರಿ ನಗರದ ಹಲವೆಡೆ ದರೋಡೆ ಮಾಡಿ ಜೈಲು ಸೇರಿದ್ದರು. ಎರಡೂವರೆ ತಿಂಗಳ ಹಿಂದಷ್ಟೇ ಬಿಡುಗಡೆಯಾಗಿ ಬಂದ ಆರೋಪಿಗಳು, ವೆಂಕಟೇಶ್‌ ಅಪಹರಣಕ್ಕೆ ಸಂಚು ರೂಪಿಸಿದ್ದರು ಎಂದು ಪೊಲೀಸರು ಹೇಳಿದರು.

52 ಲಕ್ಷ ರೂ.ಗೆ ಬೇಡಿಕೆ: ಸೆ.27ರಂದು ಇನ್ನೋವಾ ಕಾರಿನಲ್ಲಿ ವೆಂಕಟೇಶ್‌ ಮನೆ ಬಳಿ ಬಂದ ಆರೋಪಿಗಳು, ವಾಯು ವಿಹಾರ ಮಾಡುತ್ತಿದ್ದ ವೆಂಕಟೇಶ್‌ರನ್ನು ವಿಳಾಸ ಕೇಳುವ ನೆಪದಲ್ಲಿ ಮಾತನಾಡಿಸಿ ಬಾಯಿಗೆ ಬಟ್ಟೆ ತುರುಕಿ ಕಾರಿನೊಳಗೆ ಎಳೆದುಕೊಂಡು ಅಪಹರಿಸಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಜೋರಾಗಿ ಕೂಗಿಕೊಂಡಿದ್ದಾರೆ. ಈ ವೇಳೆ ಇನೋವಾಕಾರಿನ ಹಿಂದೆ ಪಲ್ಸರ್‌ ಬೈಕ್‌ನಲ್ಲಿ ಪ್ರಶಾಂತ್‌ ಹಾಗೂ ಮತ್ತೂಬ್ಬ ಆರೋಪಿ ಹಿಂಬಾಲಿಸುತ್ತಿದ್ದರು. ಈ ವೇಳೆ ಆಯಾ ತಪ್ಪಿ ಬಿದ್ದ ಪ್ರಶಾಂತ್‌ ಸ್ಥಳೀಯರ ಕೈಗೆ ಸಿಕ್ಕಿ ಬಿದ್ದಿದ್ದ. ಮತ್ತೂಬ್ಬ ಆರೋಪಿ ತಪ್ಪಿಸಿಕೊಂಡಿದ್ದ. ಇದನ್ನು ಕಾರಿನಿಂದಲೇ ಗಮನಿಸಿದ ಇತರೆ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿ ಬೀಳುತ್ತೇವೆ ಎಂಬ ಭಯದಲ್ಲಿ ನೆಲಮಂಗಲ, ಹೆಸರುಘಟ್ಟ ಹಾಗೂ ಇತರೆಡೆ ಸುತ್ತಾಡಿಸಿ ಅವರ ಬಳಿಯಿದ್ದ 300 ಗ್ರಾಂ ಚಿನ್ನಾಭರಣ, 24 ಸಾವಿರ ರೂ. ಹಣ ಕಳವು ಮಾಡಿದ್ದರು. ಅಲ್ಲದೆ ಈ ವೇಳೆ ಆರೋಪಿಗಳು 52 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಕಡೆಗೆ ವೆಂಕಟೇಶ್‌ ಅವರನ್ನು ಹೆಸರುಘಟ್ಟ ರಸ್ತೆಯ ತೋಟಗೆರೆ ಬಳಿ ಕಾರಿನಿಂದ ತಳ್ಳಿ ಹೋಗಿದ್ದರು ಎಂದು ಪೊಲೀಸರು ತಿಳಿಸಿದರು.

Advertisement

ಚಾಲಕನ ಬೆತ್ತಲೆಗೊಳಿಸಿ ಕಾರು ದರೋಡೆ ಆರೋಪಿಗಳು ಎರಡು ತಿಂಗಳ ಹಿಂದೆ ಬಿಟಿಎಂ ಲೇಔಟ್‌ನ ಟ್ರಾವೆಲ್ಸ್‌ ಒಂದರಲ್ಲಿ ಊಟಿಗೆ ಹೋಗಲು ಇನ್ನೋವಾ ಕಾರು ಕಾಯ್ದಿರಿಸಿದ್ದರು. ಮಾರ್ಗ ಮಧ್ಯೆ ಮಂಡ್ಯ ಸಮೀಪ ಚಾಲಕನ್ನು ಬೆದರಿಸಿ, ಆತನನ್ನು ಬೆತ್ತಲೆಗೊಳಿಸಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಬಳಿಕ ನಿರ್ಜನ ಪ್ರದೇಶದಲ್ಲಿ ಆತನನ್ನು ಕಾರಿನಿಂದ ತಳ್ಳಿ ಇನ್ನೋವಾ ದರೋಡೆ ಮಾಡಿದ್ದರು. ಘಟನೆ ಬಳಿಕ ಕೆಲ ದಿನಗಳ ಕಾಲ ತಲೆಮರೆಸಿಕೊಂಡಿದ್ದ ಆರೋಪಿಗಳು, ಸೆ.27ರಂದು ವೆಂಕಟೇಶ್‌ರನ್ನು ಇದೇ ಕಾರಿನಲ್ಲಿ ಅಪಹರಿಸಿದ್ದರು ಎಂದು ಪೊಲೀಸರು ಹೇಳಿದರು.

52 ಲಕ್ಷ ರೂ.ಗೆ ವೆಂಕಟೇಶ್‌ ಬಳಿ ಬೇಡಿಕೆ ಆರೋಪಿಗಳ ಪ್ರಾಥಮಿಕ ಹೇಳಿಕೆ ಪ್ರಕಾರ ತಮ್ಮ ವಿರುದ್ಧ ದಾಖಲಾದ ಪ್ರಕರಣಗಳ ಪರ ವಕಾಲತ್ತು ವಹಿಸುವ ವಕೀಲರಿಗೆ ಹಾಗೂ ಪ್ರಕರಣಗಳ ಖುಲಾಸೆ ಮಾಡಿಸಿಕೊಳ್ಳಲು ಅಪಹರಣ ಎಸಗಲಾಗಿತ್ತು. ಜತೆಗೆ ತಮ್ಮ ಮೋಜಿನ ಜೀವನಕ್ಕಾಗಿ ದರೋಡೆ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾಗಿ ಹೇಳಿದ್ದಾರೆ. ವೆಂಕಟೇಶ್‌ ಬಳಿ 52 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದೆವು. ಆದರೆ, ಸಾಧ್ಯವಾಗಲಿಲ್ಲ ಎಂದು ಹೇಳಿರುವುದಾಗಿ ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next