ಬೀದರ: ಜಿಲ್ಲೆಯಲ್ಲಿರುವ ದುರ್ಬಲ ಗುಂಪಿನ ಫಲಾನುಭವಿಗಳು ಮತ್ತು ಕೊರೊನಾ ಮುಂಚೂಣಿ ಕಾರ್ಯಕರ್ತರಿಗೆ ಕೋವಿಡ್ ಲಸಿಕಾಕರಣ ನಡೆಸುವ ಪ್ರಕ್ರಿಯೆ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಅವರು, ಸಂಬಂಧಿಸಿದ ಅಧಿ ಕಾರಿಗಳಿಗೆ 10 ದಿನಗಳ ಗಡುವು ವಿಧಿಸಿದರು.
ನಗರದ ಡಿಸಿ ಕಚೇರಿಯ ವಿಡಿಯೋ ಸಭಾಂಗಣದಲ್ಲಿ ನಡೆದ ಎರಡನೇ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 18ರಿಂದ 44 ವರ್ಷದ ದುರ್ಬಲ ಗುಂಪಿನ ಫಲಾನುಭವಿಗಳಿಗೆ ಮತ್ತು ಕೊರೊನಾ ಮುಂಚೂಣಿ ಕಾರ್ಯಕರ್ತರಿಗೆ ಆದ್ಯತೆ ಮೇರೆಗೆ ಕೋವಿಡ್ ಲಸಿಕೆ ನೀಡಬೇಕಿದೆ ಎಂದು ಹೇಳಿದರು. ಚಿತಾಗಾರ, ಸ್ಮಶಾನ, ರುದ್ರಭೂಮಿಯಲ್ಲಿ ಕೆಲಸ ಮಾಡುವರು, ಖೈದಿಗಳು, ಸರ್ಕಾರಿ ಸಾರಿಗೆ ಸಿಬ್ಬಂದಿ, ಅಂಚೆ ಇಲಾಖೆಯ ಸಿಬ್ಬಂದಿ, ಬೀದಿ ಬದಿ ವ್ಯಾಪಾರ ಮಾಡುವವರು, ಆಟೋ ಮತ್ತು ಕ್ಯಾಬ್ ಚಾಲಕರು, ಕೋವಿಡ್-19 ಕರ್ತವ್ಯಕ್ಕೆ ನಿಯೋಜನೆಗೊಂಡ ಶಿಕ್ಷಕರು, ನ್ಯಾಯಾಂಗ ಅಧಿ ಕಾರಿಗಳು ಸೇರಿದಂತೆ 22 ಗುಂಪಿನ ಇನ್ನಿತರ ದುರ್ಬಲ ಗುಂಪಿನ ಫಲಾನುಭವಿಗಳು ಮತ್ತು ಕೊರೊನಾ ಮುಂಚೂಣಿ ಕಾರ್ಯಕರ್ತರಿಗೆ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ.
ಆದ್ದರಿಂದ ಇವರಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯವು ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ನಡೆಯಬೇಕು ಎಂದು ತಿಳಿಸಿದರು. ಪ್ರತಿ ಗುಂಪಿಗೂ ಒಬ್ಬ ನೋಡಲ್ ಅ ಧಿಕಾರಿಗಳನ್ನು ನಿಯೋಜಿಸಲಾಗುತ್ತದೆ. ದುರ್ಬಲ ಗುಂಪಿನ ಫಲಾನುಭವಿಗಳು ಮತ್ತು ಕೊರೊನಾ ಮುಂಚೂಣಿ ಕಾರ್ಯಕರ್ತರು ಬೀದರ ಜಿಲ್ಲೆಯಲ್ಲಿ ಎಷ್ಟು ಜನರಿದ್ದಾರೆ ಎಂಬ ಖಚಿತ ಮಾಹಿತಿಯ ಪಟ್ಟಿಯನ್ನು ಆಯಾ ನೋಡಲ್ ಅ ಧಿಕಾರಿಗಳು ಕೂಡಲೇ ಸಲ್ಲಿಸಬೇಕು. ಜಿಲ್ಲಾಡಳಿತದಿಂದ ಅನುಮೋದನೆ ನೀಡಿದ ಬಳಿಕ, ಅವರು ಇರುವ ಕಡೆಗೆ ಭೇಟಿ ನೀಡಿ ಲಸಿಕಾಕರಣ ನಡೆಸುವ ಕಾರ್ಯವಾಗಬೇಕು ಎಂದು ನಿರ್ದೇಶನ ನೀಡಿದರು.
ದುರ್ಬಲ ಗುಂಪಿನ ಫಲಾನುಭವಿಗಳು ಮತ್ತು ಕೊರೊನಾ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಿದ ಬಳಿಕ ಜಿಲ್ಲಾ ವ್ಯಾಪ್ತಿಯಲ್ಲಿನ ಆದ್ಯತೆಯ ಗುಂಪಿನವರಾದ ಕಟ್ಟಡ ಕಾರ್ಮಿಕರು, ಟೆಲಿಕಾಮ್ ಮತ್ತು ಇಂಟರ್‌ನೆಟ್ ಸೇವಾದಾರರು, ಬ್ಯಾಂಕ್ ಸಿಬ್ಬಂದಿ, ಪೆಟ್ರೋಲ್ ಬಂಕ್‌ನ ಕೆಲಸಗಾರರು ಸೇರಿದಂತೆ 18 ಗುಂಪಿನ ಜನರಿಗೆ ಲಸಿಕೆ ನೀಡಬೇಕಿದೆ ಎಂದು ತಿಳಿಸಿದರು. ಆಯಾ ತಾಲೂಕಿನ ತಹಶೀಲ್ದಾರ್ ಮತ್ತು ಜಿಲ್ಲಾಮಟ್ಟದ ನೋಡಲ್ ಅ ಧಿಕಾರಿಗಳು ಈ ಲಸಿಕಾರಣ ಕಾರ್ಯವನ್ನು ಸರಿಯಾಗಿ ಕಾರ್ಯರೂಪಕ್ಕೆ ತರಬೇಕು. ನೋಡಲ್ ಅಧಿಕಾರಿಗಳು ಆಯಾ ಗುಂಪಿನ ಫಲಾನುಭವಿಗಳಿಗೆ ನಿಗದಿಗೊಳಿಸಿದ ದಿನಾಂಕ, ಸಮಯ ಮತ್ತು ಸ್ಥಳದ ಮಾಹಿತಿಯನ್ನು ಮುಂಚಿತವಾಗಿ ನೀಡಿ ಅವರನ್ನು ಲಸಿಕಾಕರಣಕ್ಕೆ ಸಜ್ಜುಗೊಳಿಸಬೇಕು.
ಲಸಿಕೆ ನೀಡುವ ವೇಳೆಯಲ್ಲಿ, ಲಸಿಕೆ ಪಡೆದುಕೊಂಡವರಿಗೆ ಏನಾದರು ಅಡ್ಡ ಪರಿಣಾಮ ಆಗುತ್ತದೆಯಾ? ಎಂಬುದನ್ನು ಕಡ್ಡಾಯ ಪರಿಶೀಲಿಸಿಯೇ ಅವರನ್ನು ಕಳುಹಿಸುವುದನ್ನು ಮರೆಯಬಾರದು ಎಂದು ಎಚ್ಚರಿಕೆ ನೀಡಿದರು. ಜಿಪಂ ಸಿಇಒ ಜಹೀರಾ ನಸೀಮ್ ಮಾತನಾಡಿ, ರಾಜ್ಯ ಗುರುತಿಸಿರುವ ದುರ್ಬಲ ಗುಂಪಿನ ಫಲಾನುಭವಿಗಳಿಗೆ ಮತ್ತು ರಾಜ್ಯ ಕೋವಿಡ್ ಮುಂಚೂಣಿ ಕಾರ್ಯಕರ್ತರಿಗೆ ಕೋವಿಡ್ ಲಸಿಕಾಕರಣ ಕಾರ್ಯಾವು ರಾಜ್ಯಾದ್ಯಂತ ಮೇ 22ರಿಂದ ಆರಂಭವಾಗಿದೆ. ಇದನ್ನು ಜಿಲ್ಲೆಯಲ್ಲಿ ಸರಿಯಾಗಿ ಅನುಷ್ಠಾನಗೊಳಿಸಬೇಕು.
ನಿಗದಿತ ಸಮಯದಲ್ಲಿ ಮುಗಿಸಬೇಕಾದ ಕೆಲಸವಿದು. ಹೀಗಾಗಿ ನೋಡಲ್ ಅ ಧಿಕಾರಿಗಳು ಮುತುವರ್ಜಿ ವಹಿಸಿ ಕೆಲಸ ನಿರ್ವಹಿಸಬೇಕು ಎಂದು ಸಲಹೆ ಮಾಡಿದರು. ಸಭೆಯಲ್ಲಿ ಎಸ್‌ಪಿ ನಾಗೇಶ ಡಿ.ಎಲ್., ಎಡಿಸಿ ರುದ್ರೇಶ ಗಾಳಿ, ಸಹಾಯಕ ಆಯುಕ್ತರಾದ ಗರೀಮಾ ಪನ್ವಾರ, ಭುವನೇಶ ಪಾಟೀಲ, ಡಿಎಚ್‌ಒ ಡಾ| ವಿ.ಜಿ.ರೆಡ್ಡಿ ಹಾಗೂ ಇನ್ನಿತರ ಅಧಿ ಕಾರಿಗಳು ಇದ್ದರು.