ಚಿಕ್ಕಮಗಳೂರು: ಪರಿಸರ, ಜಲಾಶಯ, ದೇವಾಲಯ, ಪ್ರವಾಸಿತಾಣಗಳು ಸೇರಿದಂತೆ ಪಾರಂಪರಿಕ ಸ್ಥಳಗಳ ಸಂರಕ್ಷಿಸಿ ಪೋಷಿಸಲು ಸ್ಥಾಪನೆಯಾಗಿರುವ ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಕ್ರಿಯಾ ಯೋಜನೆಗೆ 10 ಕೋಟಿ ರೂ. ಸರ್ಕಾರ ಬಿಡುಗಡೆ ಮಾಡಿದೆ ಎಂದು ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.
ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದು, ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್. ಈಶ್ವರಪ್ಪ, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ತೀರ್ಥಹಳ್ಳಿ ಕ್ಷೇತ್ರದ ಶಾಸಕ ಅರಗ ಜ್ಞಾನೇಂದ್ರ ಹಾಗೂ ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು ಹಾಗೂ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದ್ದಾರೆ.
ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಉತ್ತರಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳು, ಉದ್ಯಾನವನ, ಪ್ರವಾಸಿತಾಣ, ಜಲಾಶಯ, ವಿವಿಗಳು, ಮ್ಯೂಸಿಯಂ, ಸ್ಮಾರಕಗಳು ಸೇರಿದಂತೆ ಇತಿಹಾಸ ಪ್ರಸಿದ್ಧ ಪಾರಂಪರಿಕ ಸ್ಥಳಗಳನ್ನು ಅಭಿವೃದ್ಧಿಪಡಿಸಲು ಕ್ರಿಯಾಯೋಜನೆ ರೂಪಿಸಲಾಯಿತು. ಪ್ರಾರಂಭಿಕ ಹಂತವಾಗಿ ಈ ಕ್ರಿಯಾ ಯೋಜನೆಗೆ 10 ಕೋಟಿ ಅನುದಾನವನ್ನು ಬಿಡುಗಡೆ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಮ್ಮತಿ ಸೂಚಿಸಿದರು ಎಂದು ತಿಳಿಸಿದ್ದಾರೆ.
ಕರ್ನಾಟಕದ ಏಕೈಕ ಗಮಕ ಗ್ರಾಮವೆಂದೇ ಗುರುತಿಸಿಕೊಂಡಿರುವ ಶಿವಮೊಗ್ಗ ತಾಲೂಕಿನ ಹೊಸಹಳ್ಳಿಯಲ್ಲಿ ಅಧ್ಯಯನ ಕೇಂದ್ರ ಸ್ಥಾಪಿನೆ. ತೀರ್ಥಹಳ್ಳಿ ತಾಲೂಕಿನ ನೊಣಬೂರು ಗ್ರಾಪಂ ವ್ಯಾಪ್ತಿಯ ಶರಾವತಿ ನದಿ ಉಗಮಸ್ಥಾನ ಅಂಬುತೀರ್ಥದ ರಾಮೇಶ್ವರ ದೇವಾಲಯ ಸಮೀಪದಲ್ಲಿ ಸಭಾಭವನ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಅಕ್ಕಮಹಾದೇವಿ ಜನ್ಮಸ್ಥಳ ಉಡುತಡಿಯನ್ನು ದೆಹಲಿಯ ಅಕ್ಷರಧಾಮ ಮಾದರಿಯಂತೆ ಆ್ಯಂಪಿಥೇಟರ್, ಬೆಳಕು ಮತ್ತು ಶಬ್ದ ಮಾಧ್ಯಮ ಇತರೆ ಸೌಲಭ್ಯ, ಬೇಗೂರಿನಲ್ಲಿ ಬನ್ನಿಮಂಟಪ ನಿರ್ಮಾಣ, ಚಿಕ್ಕಮಗಳೂರು ಜಿಲ್ಲೆಯ ಹೇಮಾವತಿ ನದಿ ಉಗಮ ಸ್ಥಳದ ಸಂರಕ್ಷಣಾ ಮತ್ತು ಅಭಿವೃದ್ಧಿ, ತುಂಗ, ಭದ್ರಾ ಮತ್ತು ನೇತ್ರಾವತಿ ನದಿ ಮೂಲಗಳ ಸಂರಕ್ಷಣೆ ಮತ್ತು ಅಭಿವೃದ್ಧಿ, ಮೂಡಿಗೆರೆ ತಾಲೂಕಿನ ದೇವರಮನೆ ಕಾಲಭೈರವೇಶ್ವರ ದೇವಸ್ಥಾನ ಹಾಗೂ ಪುಷ್ಕರಣಿಯ ಜೀಣೋದ್ಧಾರ, ಬಲ್ಲಾಳ ರಾಯನದುರ್ಗ ಕೋಟೆ ಸಂರಕ್ಷಣೆ, ಹಿರೇಮಗಳೂರು ಐತಿಹಾಸಿಕ ಕೋದಂಡರಾಮ ಸ್ವಾಮಿ ದೇವಸ್ಥಾನ ಮತ್ತು ಪುಷ್ಕರಣಿಯ ಸಮಗ್ರ ಅಭಿವೃದ್ಧಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ.