Advertisement

Mangaluru ಚಡ್ಡಿ ಗ್ಯಾಂಗ್‌ ನ ಪ್ರಮುಖ ಆರೋಪಿ ಮೇಲೆ 10 ಪ್ರಕರಣ

12:41 AM Jul 11, 2024 | Team Udayavani |

ಮಂಗಳೂರು: ಕೋಟೆಕಣಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟಿರುವ “ಚಡ್ಡಿಗ್ಯಾಂಗ್‌’ನ ಸದಸ್ಯರು ಮಧ್ಯಪ್ರದೇಶ, ರಾಜಸ್ಥಾನ, ಬೆಂಗಳೂರು ಸಹಿತ ದೇಶದ ಹಲವೆಡೆ ಕಳವು, ಸುಲಿಗೆಯಂತಹ ಪ್ರಕರಣಗಳಲ್ಲಿ ಭಾಗಿಯಾಗಿರುವ ಮಾಹಿತಿ ಇದೆ. ಪ್ರಕರಣದ ಪ್ರಮುಖ ಆರೋಪಿ ರಾಜು ಸಿಂಗ್ವಾನಿ ಮೇಲೆ ಒಟ್ಟು 10 ಪ್ರಕರಣಗಳು ದಾಖಲಾಗಿವೆ ಎಂದು ಮಂಗಳೂರು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ತಿಳಿಸಿದ್ದಾರೆ.

Advertisement

ಈತ ಮಧ್ಯಪ್ರದೇಶ, ಕರ್ನಾಟಕ ಸಹಿತ ದೇಶದ ಹಲವೆಡೆ ಕಳ್ಳತನ, ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಇನ್ನೋರ್ವ ಆರೋಪಿ ಬಾಲಿ 2016ರಲ್ಲಿ ಬೆಂಗಳೂರಿನಲ್ಲಿ ನಡೆದ ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದ.

ಮಯೂರ್‌ಕೃಷ್ಣನೂ ರಾಜಸ್ಥಾನದಲ್ಲಿ ಒಂದು ಕೃತ್ಯದಲ್ಲಿ ಭಾಗಿಯಾಗಿರುವ ಮಾಹಿತಿ ಇದೆ. ನಾಲ್ವರೂ ವೃತ್ತಿಪರ ಕಳ್ಳರಾಗಿದ್ದು, ಇತರ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಇದೊಂದು ದೊಡ್ಡ ತಂಡವಾಗಿರುವ ಸಾಧ್ಯತೆ ಇದೆ. ಆರೋಪಿಗಳ ವಿರುದ್ಧ ದೇಶದ ಯಾವ್ಯಾವ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ ಎಂಬುದನ್ನು ಫಿಂಗರ್‌ ಪ್ರಿಂಟ್‌ ಅನಾಲಿಸಿಸ್‌ ತಂತ್ರಜ್ಞಾನದ ಮೂಲಕವೂ ತಿಳಿದುಕೊಳ್ಳಲಾಗುವುದು ಎಂದರು.

ದರೋಡೆಗೆ ಮೊದಲು ನಿಗಾ ಇಟ್ಟಿದ್ದರು
ಆರೋಪಿಗಳು ಬೆಂಗಳೂರಿನಿಂದ ಮಂಗಳೂರಿಗೆ ಬಂದಿದ್ದರು. ದರೋಡೆ ನಡೆಸಿದ ಅನಂತರ ಮತ್ತೆ ಯಶವಂತಪುರಕ್ಕೆ ತೆರಳಲು ಯತ್ನಿಸಿದ್ದರು. ಆರೋಪಿಗಳು ದರೋಡೆ ನಡೆಸುವ ಹಿಂದಿನ ಮೂರು ದಿನಗಳಿಂದ ಮಂಗಳೂರಿನಲ್ಲಿ ಉಳಿದುಕೊಂಡಿರುವುದು ಗೊತ್ತಾಗಿದೆ. ಅಲ್ಲದೆ ದರೋಡೆ ನಡೆಸುವ ಮೊದಲು ಆ ಮನೆಯ ಬಗ್ಗೆ ನಿಗಾ ವಹಿಸಿದ್ದರು. ಮನೆ ಪಕ್ಕದಲ್ಲಿ ಖಾಲಿ ಜಾಗ ಇದ್ದು, ಅಲ್ಲಿಗೆ ಬಂದು ಹೋಗಿರುವ ಸಾಧ್ಯತೆ ಇದೆ. ಕೃತ್ಯ ನಡೆಸುವ ದಿನ ರಾತ್ರಿ ಮುಖ್ಯರಸ್ತೆಯಿಂದ ಮನೆಯೊಳಗೆ ಬಂದಿರಲಿಲ್ಲ. ಹಿಂಭಾಗದಿಂದ ಬಂದಿದ್ದಾರೆ ಎಂದು ಆಯುಕ್ತರು ತಿಳಿಸಿದ್ದಾರೆ.

ಪೊಲೀಸರಿಗೆ ನಗದು ಪುರಸ್ಕಾರ
ಕೋಟೆಕಣಿಯ ದರೋಡೆ ಪ್ರಕರಣ ಮತ್ತು ಉಳಾಯಿಬೆಟ್ಟಿನ ದರೋಡೆ ಪ್ರಕರಣದ ಆರೋಪಿಗಳನ್ನು ಬಂಧಿಸಿದ ಪೊಲೀಸರ ತಂಡಕ್ಕೆ ತಲಾ 50,000 ರೂ. ಬಹುಮಾನ ನೀಡುವುದಾಗಿ ಪೊಲೀಸ್‌ ಆಯುಕ್ತರು ತಿಳಿಸಿದರು.

Advertisement

ಚೆಕ್‌ಪೋಸ್ಟ್‌ ಕಾರ್ಯಾರಂಭ
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪೊಲೀಸ್‌ ಆಯುಕ್ತರು, ವಿವಿಧ ಕಾರ್ಯಗಳ ಒತ್ತಡ ಹಾಗೂ ಸಿಬಂದಿ ಕೊರತೆಯಿಂದ ಕೆಲವು ಸಮಯದಿಂದ ಪೊಲೀಸ್‌ ಚೆಕ್‌ಪೋಸ್ಟ್‌ಗಳು ಕಾರ್ಯನಿರ್ವಹಿಸುತ್ತಿರಲಿಲ್ಲ. ಉಳಾಯಿಬೆಟ್ಟಿನಲ್ಲಿ ದರೋಡೆ ನಡೆಯಲು ಕೂಡ ಚೆಕ್‌ಪೋಸ್ಟ್‌ ಇಲ್ಲದಿರುವುದು ಅನುಕೂಲವಾಗಿತ್ತು. ನಿರಂತರ ಮಳೆಯಿಂದಾಗಿಯೂ ಅಡ್ಡಿಯಾಗಿತ್ತು. ಆ ಬಳಿಕ ಚೆಕ್‌ಪೋಸ್ಟ್‌ಗಳು ಕಾರ್ಯಾಚರಿಸುತ್ತಿವೆ. ರಾತ್ರಿ ಗಸ್ತನ್ನೂ ಹೆಚ್ಚಿಸಲಾಗಿದೆ ಎಂದು ಪೊಲೀಸ್‌ ಆಯುಕ್ತರು ತಿಳಿಸಿದರು.

ಸಿಸಿ ಕೆಮರಾ ಅಳವಡಿಸಿ, ಮಾಹಿತಿ ನೀಡಿ
ಸಾರ್ವಜನಿಕ ಸುರಕ್ಷೆ ಕಾಯಿದೆಯಡಿ ಈಗಾಗಲೇ ಪ್ರಮುಖ ಸ್ಥಳಗಳ ಕಟ್ಟಡಗಳಲ್ಲಿ ಸಿಸಿ ಕೆಮರಾ ಅಳವಡಿಸಲು ಸೂಚಿಸಲಾಗಿದೆ. ಅದರಂತೆ ಕಮಿಷನರೆಟ್‌ ವ್ಯಾಪ್ತಿಯಲ್ಲಿ ಸುಮಾರು 25,000 ಕೆಮರಾ ಅಳವಡಿಸಲಾಗಿದೆ. ಇವುಗಳು ಸುಸ್ಥಿತಿಯಲ್ಲಿ, ನಿಯಮಾನುಸಾರ ಇವೆಯೇ ಎಂಬುದನ್ನು ಪರಿಶೀಲಿಸಲು ಬೀಟ್‌ ಪೊಲೀಸರಿಗೆ ಸೂಚಿಸಲಾಗಿದೆ. ಸಿಸಿ ಕೆಮರಾಗಳ ಅಳವಡಿಕೆ ಅಪರಾಧ ಕೃತ್ಯ ತಡೆ, ಪತ್ತೆಗೆ ಅನುಕೂಲವಾಗುತ್ತದೆ. ನಗರದಲ್ಲಿ ಹಿರಿಯ ನಾಗರಿಕರು ಮಾತ್ರವೇ ಇರುವಂತಹ ಮನೆಗಳಿವೆ. ಕೆಲವು ಪ್ರದೇಶಗಳಲ್ಲಿ ಒಂಟಿ ಮನೆಗಳಿವೆ. ಇಂತಹ ಮನೆಯವರು ಪೊಲೀಸರಿಗೆ ಮಾಹಿತಿ ನೀಡಬೇಕು. ಮನೆಯಿಂದ ದೂರ ಪ್ರಯಾಣ ಮಾಡುವಾಗ ಪೊಲೀಸರಿಗೆ ಮಾಹಿತಿ ನೀಡಬೇಕು. ಮನೆಗೆ ಕೆಲಸದವರನ್ನು ನಿಯೋಜಿಸುವಾಗ ಅವರ ಬಗ್ಗೆ ಪರಿಶೀಲಿಸಿಕೊಳ್ಳಬೇಕು ಎಂದು ಪೊಲೀಸ್‌ ಆಯುಕ್ತರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next