Advertisement

Mangaluru: ಇಂಧನ ಆಟೋ, ಇ-ಆಟೋನದ್ದೇ ಸುದ್ದಿ

01:48 AM Aug 30, 2024 | Team Udayavani |

ಮಂಗಳೂರು: ನಾಲ್ಕೈದು ವರ್ಷಗಳ ಹಿಂದೆ ಒಂದೆರಡು ಸಂಖ್ಯೆಯಲ್ಲಿ ನಗರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಎಲೆಕ್ಟ್ರಿಕ್‌ ರಿಕ್ಷಾಗಳು ಈಗ ನಗರದೆಲ್ಲೆಡೆ ಕಾಣಲು ಸಿಗುತ್ತವೆ. ಪರವಾನಿಗೆ ಇಲ್ಲದೆ ಚಲಾಯಿಸಬಹುದಾದ ಇ-ರಿಕ್ಷಾಗಳನ್ನು ಆರಂಭದಿಂದಲೂ ಇತರ ಸಾಮಾನ್ಯ ಆಟೋ ರಿಕ್ಷಾ ಚಾಲಕ ಮಾಲಕರು ವಿರೋಧಿಸುತ್ತಿದ್ದಾರೆ.ಇದರ ಮಧ್ಯೆ ಎಲೆಕ್ಟ್ರಿಕ್‌ ರಿಕ್ಷಾಗಳು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಂಚರಿಸಲು ಅನುಮತಿ ನೀಡಿರುವ ಜಿಲ್ಲಾಧಿಕಾರಿಗಳ ಆದೇಶ ಇದೀಗ ಆಟೋ ಚಾಲಕ-ಮಾಲಕರ ಪ್ರತಿಭಟನೆಗೆ ಕಾರಣವಾಗಿದೆ.

Advertisement

ಕಟು ವಿರೋಧಕ್ಕೆ ಕಾರಣವಾಯಿತು. ಜಿಲ್ಲಾಧಿಕಾರಿಗಳು ಆರ್‌ಟಿಎ ಸಭೆಯನ್ನು ಕರೆಯದೆ ಏಕಪಕ್ಷೀಯ ಆದೇಶ ನೀಡಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಆಟೋ ರಿಕ್ಷಾ ಚಾಲಕರ ಮಾಲಕರ ಸಂಘಗಳ ಒಕ್ಕೂಟ ಮತ್ತು ಸಮಾನ ಮನಸ್ಕ ಆಟೋ ರಿಕ್ಷಾ ಚಾಲಕ ಮಾಲಕರ ಸಂಘಟನೆಯಿಂದ ಗುರುವಾರ ಮಂಗಳೂರಿನಲ್ಲಿ ಬೃಹತ್‌ ಪಾದಯಾತ್ರೆ, ಪ್ರತಿಭಟನೆ ನಡೆಸಲಾಯಿತು.

ಈ ಮಧ್ಯೆ ಎಲೆಕ್ಟ್ರಿಕ್‌ ಆಟೋ ರಿಕ್ಷಾಗಳವರ ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಯೂತ್‌ ಎಲೆಕ್ಟ್ರಿಕ್‌ ಆಟೋ ಚಾಲಕರ ಹಾಗೂ ಮಾಲಕರ ಸಂಘದಿಂದ ಸಾರಿಗೆ ಸಚಿವರಿಗೆ ಬೆಂಗಳೂರಿನಲ್ಲಿ ಗುರುವಾರ ಮನವಿ ಸಲ್ಲಿಕೆ ಮಾಡಿದೆ. ಹೀಗೆ ಎರಡು ವಿಧದ ಆಟೋ ಚಾಲಕರ ಮೇಲಾಟಕ್ಕೆ ಮಂಗಳೂರು ಸಾಕ್ಷಿಯಾಗುತ್ತಿದೆ.

ಕೇಂದ್ರ ಸರಕಾರದ ನಿಯಮಾವಳಿಯ ಪ್ರಕಾರ “ಪರಿಸರ ಪೂರಕ’ ಎಲೆಕ್ಟ್ರಿಕ್‌ ರಿಕ್ಷಾಗಳಿಗೆ ಪರವಾನಿಗೆ ಅಗತ್ಯವಿಲ್ಲ ಹಾಗೂ ಜಿಲ್ಲೆಯಾದ್ಯಂತ ಎಲೆಕ್ಟ್ರಿಕ್‌ ರಿಕ್ಷಾಗಳು ಸಂಚರಿಸಲು ಅನುಮತಿ ಇದೆ ಎಂಬ ಜಿಲ್ಲಾಧಿಕಾರಿಗಳ ಆದೇಶ ಇಂಧನ ರಿಕ್ಷಾ ಚಾಲಕರ ಆಕ್ಷೇಪಕ್ಕೆ ಮೂಲ ಕಾರಣ.

ಎಲೆಕ್ಟ್ರಿಕ್‌ ಆಟೋ ಚಾಲಕರು ಏನೆನ್ನುತ್ತಾರೆ?
ಕೇಂದ್ರ ಸರಕಾರದ ಯೋಜನೆಯಂತೆ ನಾವು ಸ್ವಾವಲಂಬಿಗಳಾಗಿ ಎಲೆಕ್ಟ್ರಿಕ್‌ ಆಟೋ ರಿಕ್ಷಾ ಓಡಿಸುತ್ತಿದ್ದೇವೆ. ಎಲೆಕ್ಟ್ರಿಕ್‌ ರಿಕ್ಷಾಗಳು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಂಚರಿಸಲು ಜಿಲ್ಲಾಡಳಿತದಿಂದ ಕಾನೂನು ಪ್ರಕಾರವೇ ಅನುಮತಿ ನೀಡಲಾಗಿದೆ. ಎಲೆಕ್ಟ್ರಿಕ್‌ ರಿಕ್ಷಾಗಳಿಗೆ ಪರವಾನಿಗೆ ಅಗತ್ಯವಿಲ್ಲ, ಸಂಚಾರ ನಿರ್ಬಂಧವೂ ಇಲ್ಲ. ಇದರಿಂದಾಗಿ ವಲಯ ವಿಂಗಡಣೆ ಮಾಡಲು ಆಗುವುದಿಲ್ಲ. ಇದೇ ಕಾರಣಕ್ಕೆ ದೇಶದ ಎಲ್ಲಾ ಕಡೆ ಸಂಚರಿಸಲು ನಮಗೆ ಅವಕಾಶ ನೀಡಲಾಗಿದೆ.

Advertisement

ಮಂಗಳೂರಿನಲ್ಲಿ ನೋಂದಣಿಗೊಂಡ ರಿಕ್ಷಾ ಪಾರ್ಕಿಂಗ್‌ ಸಮಸ್ಯೆ ಇದೆ. ನಗರ ವ್ಯಾಪ್ತಿಯಲ್ಲಿ ನಾವು ವಾಸಿಸುವ ಕಾರಣ ನಮಗೆ ಇಲ್ಲಿನ ಎಲ್ಲಾ ಆಟೋ ನಿಲ್ದಾಣದಲ್ಲೇ ನಿಲುಗಡೆಗೆ ಅವಕಾಶ ನೀಡಬೇಕು’ ಎಂದು ಯೂತ್‌ ಎಲೆಕ್ಟ್ರಿಕ್‌ ಆಟೋ ಚಾಲಕರ ಹಾಗೂ ಮಾಲಕರ ಸಂಘದ ಅಧ್ಯಕ್ಷ ರಾಕೇಶ್‌ ರಾವ್‌ ಅವರು ತಿಳಿಸಿದ್ದಾರೆ.

ಕೇಂದ್ರದ ಮಾರ್ಗಸೂಚಿಯಂತೆ ಆದೇಶ: ಡಿಸಿ
“ಮೋಟಾರು ವಾಹನ ಕಾಯಿದೆ 66 ಪ್ರಕಾರ ವಾಹನಗಳಿಗೆ ಪರವಾನಿಗೆ ನೀಡುವ ವ್ಯವಸ್ಥೆ ಇದೆ. ಈ ನಿಯಮ ಪ್ರಕಾರ ಎಲ್‌ಪಿಜಿ ಮತ್ತು ಸಿಎನ್‌ಜಿ ರಿಕ್ಷಾಗಳಿಗೆ ಜಿಲ್ಲೆಯಲ್ಲಿ ಪರವಾನಿಗೆ ನೀಡಲಾಗಿದೆ. ಆದರೆ, ಕೇಂದ್ರ ಸರಕಾರವೇà ಇ-ರಿಕ್ಷಾಗಳಿಗೆ (ಎಲೆಕ್ಟ್ರಿಕ್‌) ಪರವಾನಿಗೆಯಿಂದ ಸಂಪೂರ್ಣ ವಿನಾಯಿತಿ ನೀಡಿದೆ. ಈ ಹಿಂದೆ ಜಿಲ್ಲಾಡಳಿತದಿಂದ ಮಂಗಳೂರು ನಗರ ಮತ್ತು ಜಿಲ್ಲೆಯ ಸಾಮರ್ಥ್ಯಕ್ಕೆ ಅನುಗುಣವಾಗಿ ವಲಯ-1, ವಲಯ-2 ಎಂಬ ವರ್ಗೀಕರಣ ಮಾಡಲಾಗಿತ್ತು. ಎಲೆಕ್ಟ್ರಿಕ್‌ ಆಟೊಗಳು ರಸ್ತೆಗಿಳಿಯಲು ಆರಂಭವಾದಾಗ ಅದೇ ವಲಯ-1-2 ನಿಯಮ ಇ-ಆಟೋಗಳಿಗೂ ಅನ್ವಯ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಇ-ಆಟೊ ಮಾಲಕರು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಕುರಿತು ಕಾನೂನಾತ್ಮಕವಾಗಿ ಆದೇಶ ಹೊರಡಿಸುವಂತೆ ಕೋರ್ಟ್‌ ನಿರ್ದೇಶನ ನೀಡಿತ್ತು. ಅದರಂತೆ, ಇ-ಆಟೊಗಳಿಗೆ ಪರವಾನಿಗೆ ನಿರ್ಬಂಧ ಇಲ್ಲದಿರುವ ಕುರಿತು ಆದೇಶ ಮಾಡಲಾಗಿದೆ. ಈ ಆದೇಶವನ್ನು ಪೆಟ್ರೋಲ್‌, ಸಿಎನ್‌ಜಿ, ಎಲ್‌ಪಿಜಿ ಆಟೊ ಚಾಲಕರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಆ ಆದೇಶವನ್ನು ನ್ಯಾಯಾಲಯದ ಆದೇಶದಂತೆ, ದೇಶಾದ್ಯಂತ ಪ್ರಸ್ತುತ ಜಾರಿಯಲ್ಲಿರುವ ಕಾನೂನು ಪ್ರಕಾರವೇ ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅವರು ತಿಳಿಸಿದ್ದಾರೆ.

ಇಂಧನ ಆಟೋ ಚಾಲಕರ ವಾದವೇನು?
“ಎಲೆಕ್ಟ್ರಿಕ್‌ ಆಟೋ ರಿಕ್ಷಾಗಳಿಗೆ ನಮ್ಮ ವಿರೋಧವಿಲ್ಲ. ಆದರೆ ಈ ಕೇಂದ್ರ ಸರಕಾರದ ಯೋಜನೆಗೆ ಸೂಕ್ತ ಮಾನದಂಡ ರೂಪಿಸಬೇಕು. ಮಂಗಳೂರಿನಲ್ಲಿ ಈಗಾಗಲೇ ಸುಮಾರು 7000 ಕ್ಕೂ ಅಧಿಕ ಇಂಧನ ಆಟೋ ರಿಕ್ಷಾಗಳು ಸಂಚರಿಸುತ್ತಿವೆ. ಎಲೆಕ್ಟ್ರಿಕ್‌ ರಿಕ್ಷಾಗಳು ಜಿಲ್ಯಾದ್ಯಂತ ಸಂಚರಿಸಬಹುದು ಎಂದು ಜಿಲ್ಲಾಡಳಿತದ ತೀರ್ಮಾನದಿಂದಾಗಿ ಮತ್ತಷ್ಟು ಆಟೋ ರಿಕ್ಷಾಗಳು ನಗರವನ್ನು ಸೇರ್ಪಡೆಗೊಂಡರೆ ನಮ್ಮ ಪರಿಸ್ಥಿತಿ ಹೇಗಾಗಬಹುದು ಎನ್ನುವುದು ದ.ಕ. ಜಿಲ್ಲಾ ಆಟೋರಿಕ್ಷಾ ಚಾಲಕರ ಮಾಲಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಅಶೋಕ್‌ ಶೆಟ್ಟಿ ಬೋಳಾರ.ಈ ಹಿಂದೆ ಸುಮಾರು 375 ಆಟೋ ನಿಲ್ದಾಣಗಳಿದ್ದವು. ರಸ್ತೆ ಅಗಲ, ಕಾಂಕ್ರಿಟ್‌ ಸೇರಿದಂತೆ ಸದ್ಯ ಕೇವಲ 115 ಆಟೋ ನಿಲ್ದಾಣ ಇದೆ. ಈಗಿರುವ ರಿಕ್ಷಾಗಳಿಗೆ ಅವು ಸಾಕಾಗುವುದಿಲ್ಲ. ಬದಲಿಗೆ ಮತ್ತಷ್ಟು ಎಲೆಕ್ಟ್ರಿಕ್‌ ರಿಕ್ಷಾಗಳು ಬಂದರೆ ನಿಲ್ದಾಣಗಳೇ ಇಲ್ಲದೆ ತಿರುಗಾಡುವ ಪರಿಸ್ಥಿತಿ ಬರಬಹುದು. ಎಲೆಕ್ಟ್ರಿಕ್‌ ಆಟೋಗಳಿಗೆ ಜಿಲ್ಲೆಯಾದ್ಯಂತ ಸಂಚರಿಸಲು ಇರುವ ಅನುಮತಿಯನ್ನು ಜಿಲ್ಲಾಡಳಿತ ಕೂಡಲೇ ವಾಪಾಸ್‌ ಪಡೆಯಬೇಕು ಎನ್ನುತ್ತಾರೆ. ಜಿಲ್ಲೆಯಲ್ಲಿ ಒಟ್ಟು 15ಸಾವಿರ ಇಂಧನ ಆಟೋಗಳಿವೆ.

ಸೆ.5ರಂದು
ರಿಕ್ಷಾ ಚಾಲಕರ ಸಭೆ
“ರಿಕ್ಷಾ ಚಾಲಕರ ಬೇಡಿಕೆಗಳ ಕುರಿತಂತೆ ಚರ್ಚಿಸಲು ಎಲ್ಲ ಆಟೊ ಸಂಘಟನೆಗಳೊಂದಿಗೆ ಸೆ.5ರಂದು ಸಭೆ ನಡೆಸಲಾಗುವುದು. ಜಿಲ್ಲೆ ಯಲ್ಲಿ ಎಲ್‌ಪಿಜಿ, ಸಿಎನ್‌ಜಿ ಹಾಗೂ ಪೆಟ್ರೋಲ್‌ ಅಟೋ ರಿಕ್ಷಾಗಳಿಗೆ ಸಂಬಂಧಿಸಿ ದ.ಕ. ಜಿಲ್ಲೆಯಲ್ಲಿ ಊರ್ಜಿತದಲ್ಲಿರುವ ವಲಯ ಪರಿಕಲ್ಪನೆಯನ್ನು ತೆಗೆಯಬೇಕೆಂಬ ಬೇಡಿಕೆಯನ್ನು ಪರಿಗಣಿಸಲು ಜಿಲ್ಲಾಡಳಿತ ಸಿದ್ಧವಿದೆ.
-ಮುಲ್ಲೈಮುಗಿಲನ್‌,
ದ.ಕ. ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.