ಉಡುಪಿ: ಜಮ್ಮು ಕಾಶ್ಮೀರದ ಒಟ್ಟು ಜನಸಂಖ್ಯೆ ದೇಶದ ಶೇ.1 ಭಾಗ. ಆದರೆ ದೇಶದ ಶೇ.10 ಬಜೆಟ್ ಅಲ್ಲಿಗೆ ಹೋಗುತ್ತಿತ್ತು ಎಂದು ವಿಧಾನ ಪರಿಷತ್ ಸದಸ್ಯೆ ಡಾ| ತೇಜಸ್ವಿನಿ ಹೇಳಿದರು.
ಜಿಲ್ಲಾ ಬಿಜೆಪಿ ರಾಷ್ಟ್ರೀಯ ಏಕತಾ ಅಭಿಯಾನ “ಒಂದು ದೇಶ ಒಂದು ಸಂವಿಧಾನ’ದ ಅಂಗವಾಗಿ 370ನೆಯ ವಿಧಿ ರದ್ದತಿ ಕುರಿತು ಶನಿವಾರ ಮಣಿಪಾಲದ ಕಂಟ್ರಿ ಇನ್ ಹೊಟೇಲ್ ಸಭಾಂಗಣದಲ್ಲಿ ಆಯೋಜಿಸಿದ ಜನಜಾಗೃತಿ ಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಶೇ. 24 ಭೂಪ್ರದೇಶ ಜಮ್ಮುವಿನಲ್ಲಿ, ಶೇ.18 ಕಾಶ್ಮೀರದಲ್ಲಿ, ಶೇ. 59 ಲಡಾಕ್‌ನಲ್ಲಿತ್ತು. ಕ್ರಮವಾಗಿ ಜನಸಂಖ್ಯೆ 53 ಲಕ್ಷ, 69 ಲಕ್ಷ, 2.9 ಲಕ್ಷ ಇತ್ತು. ಇಷ್ಟು ದೊಡ್ಡ ಲಡಾಕ್‌ನಲ್ಲಿ ಬೌದ್ಧರ ಸಂಖ್ಯೆಇಷ್ಟು ಕಡಿಮೆಯಾಗಲು ಹಿಂದೆ ನಡೆದ ನರಮೇಧವೇ ಕಾರಣ ಎಂದು ಅಭಿಪ್ರಾಯಪಟ್ಟರು.
ಭೂತಾನ್, ಬಾಂಗ್ಲಾದಿಂದ ಹಿಡಿದು ಕಾವೇರಿವರೆಗೆ ಆಡಳಿತ ನಡೆಸಿದ್ದ ಕಾಶ್ಮೀರದ ಲಲಿತಾದಿತ್ಯ ಏಕೆ ಇತಿಹಾಸಕಾರರ ಗಮನ ಸೆಳೆಯುತ್ತಿಲ್ಲ? ಗಾಂಧಿ ತಣ್ತೀ ಹೇಳುವವರು ಈಗ ಪಂಚತಾರಾ ಹೊಟೇಲ್‌ನಲ್ಲಿ ಕುಡಿಯುತ್ತಾರೆ, ಖಾದಿಯ ಬದಲು ಸಾವಿರಾರು ರೂ. ಬಟ್ಟೆ ತೊಡುತ್ತಿದ್ದಾರೆಂದು ಕಟಕಿಯಾಡಿದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಸಂಯೋಜಕ ಸಾಣೂರು ನರಸಿಂಹ ಕಾಮತ್ ಸ್ವಾಗತಿಸಿ ವಿಜಯ ಕೊಡವೂರು ಕಾರ್ಯಕ್ರಮ ನಿರ್ವಹಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಕೆ.ರಘುಪತಿ ಭಟ್, ಸುನಿಲ್‌ಕುಮಾರ್, ಬಿ.ಎಂ.ಸುಕುಮಾರ್ ಶೆಟ್ಟಿ, ಲಾಲಾಜಿ ಮೆಂಡನ್, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಬಿಜೆಪಿ ವಿಭಾಗ ಪ್ರಭಾರಿ ಕೆ.ಉದಯಕುಮಾರ ಶೆಟ್ಟಿ ಉಪಸ್ಥಿತರಿದ್ದರು.
ಕಾಶ್ಮೀರ- ಕಾಂಗ್ರೆಸ್ ನಾಯಕರಿಂದಲೂ ಸ್ವಾಗತ
ಜಮ್ಮು ಕಾಶ್ಮೀರದ 370ನೆಯ ವಿಧಿಯನ್ನು ರದ್ದುಪಡಿಸುವಾಗ ಕೇಂದ್ರ ಸರಕಾರ ಸಂವಿಧಾನದ ತಿದ್ದುಪಡಿ ಮಾಡಲಿಲ್ಲ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಬಹುಮತದ ಮೂಲಕವೇ ಇದನ್ನು ಸಾಧಿಸಿದೆ. ಕಾಂಗ್ರೆಸ್ ನಾಯಕರಾದ ಚಿದಂಬರಂ, ಕರಣ್ ಸಿಂಗ್, ಜ್ಯೋತಿರಾದಿತ್ಯ ಸಿಂಧಿಯಾ ಮೊದಲಾದವರೂ ಬೆಂಬಲ ಸಾರಿದ್ದಾರೆ. ನಾವು ತಳೆದ ಹೆಜ್ಜೆ ದೇಶಕ್ಕಾಗಿ ಬಲಿದಾನ ಮಾಡಿದವರಿಗೆ ಶ್ರದ್ಧಾಂಜಲಿ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.
ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಸದಾನಂದ ಗೌಡರನ್ನು ಪರ್ಯಾಯ ಪಲಿಮಾರು ಶ್ರೀಗಳು ಆಶೀರ್ವದಿಸಿದರು.
ಕಾಶ್ಮೀರದಲ್ಲಿ ಎಲ್ಲ ಬಗೆಯ ಅಭಿವೃದ್ಧಿ ಸಾಧಿಸಲು ಪ್ರತಿ ಇಲಾಖೆಯವರಿಗೂ ಸೂಚಿಸ ಲಾಗಿದೆ. ಅದರಂತೆ ಐಐಟಿ, ಏಮ್ಸ್ ಸ್ಥಾಪನೆ, ಪ್ರವಾಸೋದ್ಯಮ ಅಭಿವೃದ್ಧಿ ಆಗಲಿದೆ. ನಮ್ಮ ಇಲಾಖೆಯಿಂದ ಪ್ಲಾಸ್ಟಿಕ್ ರಿಸೈಕ್ಲಿಂಗ್, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಸೀಪೆಟ್ ಸಂಸ್ಥೆಯನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.
ಸಮಾನ ನಾಗರಿಕ ಸಂಹಿತೆಯೂ ಕಾಶ್ಮೀರದ ಕ್ರಮದಲ್ಲಿ ಅಡಕವಾಗಿದೆ. ಅಲ್ಲಿ ಇದುವರೆಗೆ ಎಸ್‌ಸಿ, ಎಸ್‌ಟಿ, ಒಬಿಸಿ ಮೀಸಲಾತಿ ಇರಲಿಲ್ಲ. ಇದೆಲ್ಲ ಮುಂದೆ ಜಾರಿಯಾಗಲಿದೆ. ಮುಂದೊಂದು ದಿನ ಸಮಾನ ನಾಗರಿಕ ಸಂಹಿತೆಯೂ ಸಾಧ್ಯವಾಗಲಿದೆ ಎಂದರು.
ಕಾಶ್ಮೀರದ ವ್ಯಕ್ತಿ ಪ್ರಶ್ನೆ
ಕಾಶ್ಮೀರದಿಂದ ಹೊರಬಿದ್ದವರಿಗೆ ವಾಪಸು ಹೋಗಲು ಸಾಧ್ಯವೆ ಎಂದು ಕಾಶ್ಮೀರ ಮೂಲದ ರಾಹುಲ್ ಕೌಲ್ ಪ್ರಶ್ನಿಸಿದರು. ಇಂತಹವರಿಗೆ ರಕ್ಷಣೆ ಕೊಟ್ಟು ವಾಪಸು ಕರೆಸಿಕೊಳ್ಳುತ್ತೇವೆಂದು ಪ್ರಧಾನಿ ಹೇಳಿದ್ದಾರೆಂದು ಡಿ.ವಿ. ತಿಳಿಸಿದರು.