Advertisement

ಚೌತಿ ಹಬ್ಬಕ್ಕೆ ಬಂದಿದೆ 10- 12 ಅಡಿ ಉದ್ದದ ಕಬ್ಬು

10:16 AM Sep 12, 2018 | |

ಬಜಪೆ: ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಮೂಡೆಗೆ ಇರುವಷ್ಟೇ ಪ್ರಾಮುಖ್ಯ ಚೌತಿ ಹಬ್ಬದ ಕಬ್ಬುವಿಗೆ ಇರುತ್ತದೆ. ಹೀಗಾಗಿ ಎರಡು ದಿನ ಮುಂಚಿತವಾಗಿಯೇ ಬಹುತೇಕ ಎಲ್ಲ ಅಂಗಡಿಗಳಲ್ಲಿ ಕಬ್ಬು ಮಾರಾಟ ಆರಂಭವಾಗುತ್ತದೆ. ಪ್ರತಿ ವರ್ಷದಂತೆ ಬಜಪೆ ಕಬ್ಬುವಿಗೆ ವಿಶೇಷ ಬೇಡಿಕೆ ಇದೆ. ಕಾರಣ ಆನಂದ ಗೌಡ ಎಂಬವರು ಬೆಳೆಸುವ ಗದ್ದೆ ಹಾಗೂ ಗೊಬ್ಬರ. ಅದಕ್ಕಿಂತಲೂ ಹೆಚ್ಚಾಗಿ ಆ ಕಬ್ಬುವಿನಲ್ಲಿ ಸಾಮರಸ್ಯದ ಸವಿ, ಸುವಾಸನೆಯಿದೆ. ಸ್ವಾಮಿಲಪದವಿನ ಆನಂದ ಗೌಡ ಅವರದ್ದು ಮೆಕ್ಯಾನಿಕ್‌ ವೃತ್ತಿಯಾದರೂ ಬೇಸಾಯದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಬಜಪೆ ಕಲ್ಲೋಡಿಯಲ್ಲಿ ಕಳೆದ 6 ವರ್ಷಗಳಿಂದ ಕಬ್ಬು ಬೆಳೆಸುತ್ತಿರುವ ಇವರು, ತಮ್ಮ ಹಿರಿಯರು ಮಾಡುತ್ತಿದ್ದ ಕೃಷಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

Advertisement

ಇವರ ತಂದೆ ದೇಜಪ್ಪ ಅವರು ಕೂಡ ಸ್ವಾಮಿಲ ಪದವು, ಕೊರಕಂಬಳದಲ್ಲಿ ಕಬ್ಬು ಬೆಳೆಸುತ್ತಿದ್ದರು. ಅಲ್ಲಿ ನೀರಿನ ಸಮಸ್ಯೆಯಿಂದಾಗಿ ಈಗ ಕಲ್ಲೋಡಿಯಲ್ಲಿ ಬೆಳೆಸುತ್ತಿದ್ದಾರೆ.

ಸಾಮರಸ್ಯದ ಸವಿ
ಆನಂದ ಗೌಡ ಅವರು ಕಲ್ಲೋಡಿಯಲ್ಲಿ ಪ್ರತಿ ಬಾರಿಯಂತೆ ಈ ಬಾರಿಯೂ ಸುಮಾರು 1ಎಕ್ರೆ ಜಾಗದಲ್ಲಿ ಕಬ್ಬು ಬೆಳೆಸಿದ್ದಾರೆ. ಇದರ ಜತೆ ಭತ್ತ ಬೇಸಾಯವನ್ನೂ ಮಾಡು ತ್ತಿ ದ್ದಾರೆ. ಕರೀಂ ಫಾರ್ಮ್ ನಲ್ಲಿರುವ ಗದ್ದೆಯಲ್ಲಿ ಕಬ್ಬು ಬೆಳೆಸುತ್ತಿರುವ ಇವರ ಈ ಗದ್ದೆಯ ಯಜಮಾನ ಕರೀಂ ಸಾಹೇಬರು. ಕ್ರೈಸ್ತರ ತೆನೆ ಹಬ್ಬಕ್ಕೂ ಅಪಾರ ಕಬ್ಬನ್ನು ಇವರೇ ಒದಗಿಸುತ್ತಿದ್ದಾರೆ. ಪೆರ್ಮುದೆ, ಬಜಪೆ ಚರ್ಚ್‌ಗಳಿಗೆ ಇವರು ಕಬ್ಬನ್ನು ಒದಗಿಸುತ್ತಿದ್ದಾರೆ.ಜಮೀನು ಕರೀಂ ಸಾಹೇಬರದ್ದು, ಬೆಳೆಸುವವರು ಆನಂದ ಗೌಡರು, ಕ್ರೈಸ್ತರ ತೆನೆಹಬ್ಬ, ಹಿಂದೂಗಳ ಚೌತಿ ಹಬ್ಬಕ್ಕೆ ಕಬ್ಬು ನೀಡುತ್ತಾರೆ. ಈ ಮೂಲಕ ಸಾಮರಸ್ಯ ಸಾರುತ್ತಿದ್ದಾರೆ. 

10ರಿಂದ 12 ಅಡಿ ಉದ್ದ
ಇವರು ಬೆಳೆಸುವ ಕಬ್ಬಿಗೆ ಹಟ್ಟಿ ಗೊಬ್ಬರ ಮತ್ತು ಸುಡುಮಣ್ಣು ಹಾಕುತ್ತಾರೆ. ಯಾವುದೇ ರಾಸಾಯನಿಕ ಗೊಬ್ಬರ ಬಳಸುವುದಿಲ್ಲ. ಹೀಗಾಗಿ ಕಬ್ಬುಗಳು ಪುಷ್ಟಿಯಾಗಿ ಬೆಳೆಯುತ್ತವೆ. ಒಡೆಯುವುದಿಲ್ಲ. ಸಾಧಾರಣ ಕಬ್ಬುಗಳು 6ರಿಂದ 7 ಅಡಿ ಉದ್ದವಿರುತ್ತದೆ. ಆದರೆ ಇಲ್ಲಿ ಬೆಳೆದ ಕಬ್ಬು ಸರಿಸುಮಾರು 10ರಿಂದ 12 ಅಡಿ ಉದ್ದವಿವೆ. ಕೆಲವು ಅದಕ್ಕಿಂತಲೂ ಉದ್ದವಾಗಿ ಬೆಳೆದಿವೆ ಎನ್ನುತ್ತಾರೆ ಆನಂದ ಗೌಡ. ಕಬ್ಬುಗಳಿಗೆ ಬೇಡಿಕೆ ಇದೆ. ಕರಂಬಾರು, ಕಳವಾರಿನಿಂದ ಜನ ರು ಈಗಾಗಲೇ ಕಬ್ಬುಗಳನ್ನು ಕೊಂಡೊಯ್ಯಲು ಬಂದಿದ್ದಾರೆ. ಒಳ್ಳೆಯ ಪುಷ್ಟಿದಾಯಕ ಕಬ್ಬುಗಳನ್ನೇ ಜನ ಬಯಸುತ್ತಾರೆ. ದರದ ಬಗ್ಗೆ ಚಿಂತಿಸುವುದಿಲ್ಲ ಎನ್ನುತ್ತಾರೆ ಆನಂದ ಗೌಡರು.

ಒಂದು ಕಟ್ಟಿಗೆ 350 ರೂ.
ಒಂದು ಕಟ್ಟಿನಲ್ಲಿ 12 ಕಬ್ಬುಗಳನ್ನು ಕಟ್ಟಿ ಗದ್ದೆಗಳಿಂದ ಟೆಂಪೋಗಳಲ್ಲಿ ಅಂಗಡಿಗಳಿಗೆ ಸಾಗಾಟ ಮಾಡಲಾಗುತ್ತದೆ. ಒಂದು ಕಬ್ಬಿಗೆ 35 ರಿಂದ 50 ರೂ. ಇದೆ. ಪ್ರತಿ ಬಾರಿ ಬಜಪೆ ಪೇಟೆಯಲ್ಲಿ ನಾವೇ ಕುಳಿತು ಮಾರಾಟ ಮಾಡುತ್ತೇವೆ. ಕಳೆದ ಬಾರಿಯೂ 30ರಿಂದ 40 ರೂ. ದರವಿತ್ತು. ಕಾರ್ಮಿಕರಿಗೆ 700 ರೂ. ಕೂಲಿ ನೀಡಬೇಕು. ಈ ಬಾರಿ ಎಪ್ರಿಲ್‌, ಮೇ ತಿಂಗಳಿನಲ್ಲಿ ನೀರಿನ ಸಮಸ್ಯೆ ಎದುರಾಗಿದ್ದರೂ ಉತ್ತಮ ಬೆಳೆ ಬಂದಿದೆ ಎನ್ನುತ್ತಾರೆ ಆನಂದ.

Advertisement

ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next