Advertisement

ಪ್ರತಿ ಯೂನಿಟ್‌ ದರ 1 ರೂ. ಹೆಚ್ಚ ಳಕ್ಕೆ ಜೆಸ್ಕಾಂ ಪ್ರಸ್ತಾವನೆ

12:37 PM Mar 02, 2022 | Team Udayavani |

ಕಲಬುರಗಿ: ಜೆಸ್ಕಾಂ ಸಂಸ್ಥೆಯು ತನ್ನ ಕಂಪನಿಯ ನಷ್ಟವನ್ನು ಭರಿಸಲು 2022-23ನೇ ಆರ್ಥಿಕ ವರ್ಷಕ್ಕೆ ವಿದ್ಯುತ್‌ ದರ ಪರಿಷ್ಕರಿಸಬೇಕೆಂಬ ಪ್ರಸ್ತಾವನೆ ಹಿನ್ನೆಲೆಯಲ್ಲಿ ಸೋಮವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗವು ಸಾರ್ವಜನಿಕರ ಅಭಿಪ್ರಾಯ, ಅಹವಾಲು ಆಲಿಸಿತು.

Advertisement

ದರ ಹೆಚ್ಚಳ ಕುರಿತಂತೆ ಆಯೋಗದ ಅಧ್ಯಕ್ಷ ಎಚ್‌.ಎಂ. ಮಂಜುನಾಥ ಮತ್ತು ಸದಸ್ಯ ಎಂ.ಡಿ. ರವಿ ಅವರು ಜೆಸ್ಕಾಂ ಸಂಸ್ಥೆಯ ಅಧಿಕಾರಿಗಳು ನೀಡಿದ ಅಂಕಿ-ಸಂಖ್ಯೆಗಳ ಸಮರ್ಥನೆ ಜೊತೆಗೆ ವಿದ್ಯುತ್‌ ಗ್ರಾಹಕರ ಅಭಿಪ್ರಾಯವನ್ನು ಪಡೆಯಿತು. ಆರಂಭದಲ್ಲಿ ಜೆಸ್ಕಾಂ ಎಂ.ಡಿ. ರಾಹುಲ್‌ ಪಾಂಡ್ವೆ ಅವರು ಮಾತನಾಡಿ, 2020-21ನೇ ಸಾಲಿನಲ್ಲಿ ವಿದ್ಯುತ್‌ ಖರೀದಿ ಮತ್ತು ಪೂರೈಕೆಗೆ ಒಟ್ಟಾರೆ 5957 ಕೋಟಿ ರೂ. ವೆಚ್ಚ ಮಾಡಿ ಸರಾಸರಿ ಪ್ರತಿ ಯೂನಿಟ್‌ 8.51 ರೂ. ಗಳಂತೆ ಗ್ರಾಹಕರಿಗೆ ವಿದ್ಯುತ್‌ ಪೂರೈಸಲಾಗಿದೆ. ಇದಕ್ಕೆ ಪ್ರತಿಯಾಗಿ ಗ್ರಾಹಕರಿಂದ ಪ್ರತಿ ಯೂನಿಟ್‌ಗೆ ತಲಾ 7.54 ರೂ.ಗಳಂತೆ ಒಟ್ಟಾರೆ 5282 ಕೋಟಿ ರೂ. ಆದಾಯ ಪಡೆಯಲಾಗಿದೆ. ಇಲ್ಲಿ ಪ್ರತಿ ಯೂನಿಟ್‌ಗೆ ಆದಾಯಕ್ಕಿಂತ ವೆಚ್ಚವೇ ಹೆಚ್ಚಾಗಿದೆ. ವಿದ್ಯುತ್‌ ಖರೀದಿ ದುಬಾರಿ ಮತ್ತು ಕಾರ್ಯ ಮತ್ತು ನಿರ್ವಹಣೆ ವೆಚ್ಚ ಹೆಚ್ಚಾಗಿರುವುದರಿಂದ ಈ ನಷ್ಟವನ್ನು ಸರಿದೂಗಿಸಲು ಪ್ರತಿ ಯೂನಿಟ್‌ ಗೆ ಅಂದಾಜು 1 ರೂ. ವಿದ್ಯುತ್‌ ದರ ಹೆಚ್ಚಳ ಮಾಡುವಂತೆ ಆಯೋಗಕ್ಕೆ ಮನವಿ ಮಾಡಿಕೊಂಡರು.

ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಹುಲ್‌ ಪಾಂಡ್ವೆ ಮಾತು ಮುಂದುವರೆಸಿ, ಮುಂದಿನ ವರ್ಷದೊಳಗೆ ಜೆಸ್ಕಾಂ ವ್ಯಾಪ್ತಿಯಲ್ಲಿ ಕಬ್ಬಿಣದ ಎಲ್ಲ ಕಂಬಗಳನ್ನು ಬದಲಾಯಿಸಲು ನಿರ್ಧರಿಸಲಾಗಿದೆ. 24 ಗಂಟೆ ಗ್ರಾಹಕರಿಗೆ ಉತ್ತಮ ಸೇವೆ ನೀಡಲಾಗುತ್ತಿದೆ. 18 ಕಿಲೋ ವ್ಯಾಟ್‌ ವರೆಗಿನ ವಿದ್ಯುತ್‌ ಸಂಪರ್ಕವನ್ನು ಆನ್‌ಲೈನ್‌ ಮೂಲಕ ಅರ್ಜಿ ಪಡೆದು 24 ಗಂಟೆಯಲ್ಲಿಯೇ ಸಂಪರ್ಕ ನೀಡಲಾಗುತ್ತಿದೆ. ಸಿಬ್ಬಂದಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ತಿಳಿಸಿದರು.

ಸಾರ್ವಜನಿಕ ಅಭಿಪ್ರಾಯ ಆಲಿಸಿ ಮಾತನಾಡಿದ ಆಯೋಗದ ಅಧ್ಯಕ್ಷ ಎಚ್‌.ಎಂ. ಮಂಜುನಾಥ ಅವರು, ಕಲಬುರಗಿ ಜಿಲ್ಲೆಯ ನಂದೂರು ಮತ್ತು ರಾಯಚೂರು ಕೈಗಾರಿಕೆ ಪ್ರದೇಶಗಳಲ್ಲಿ ಬಿಲ್‌ ಕೌಂಟರ್‌ ಸ್ಥಾಪನೆಗೆ ಕ್ರಮ ವಹಿಸಬೇಕು. ಸಾರ್ವಜನಿಕರ ಕುಂದು-ಕೊರತೆ ಸಭೆ ನಿಯಮಿತವಾಗಿ ನಡೆಯಬೇಕು. ಅಧೀಕ್ಷಕ ಅಭಿಯಂತರರು ಸಭೆಯಲ್ಲಿ ಭಾಗವಹಿಸಿ ಸಾರ್ವಜನಿಕರ ಅಹವಾಲು ಆಲಿಸಬೇಕು. ಉದ್ದಿಮೆದಾರರಿಗೆ ಅನುಕೂಲವಾಗುವಂತೆ ವಿದ್ಯುತ್‌ ಕೈಕೊಟ್ಟಾಗ ಲೈನ್‌ಮೆನ್‌ಗಳ ಸೇವೆ ತ್ವರಿತವಾಗಿ ಲಭಿಸಬೇಕು ಎಂದು ಜೆಸ್ಕಾಂ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಅವರು ಪ್ರಸ್ತುತ ಜೆಸ್ಕಾಂ ಸಂಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ವಿದ್ಯುತ್‌ ಗ್ರಾಹಕರು ಕಂಪನಿ ಮತ್ತು ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ದರ ಹೆಚ್ಚಿಸಬೇಡಿ ಎಂದ ಸಾರ್ವಜನಿಕರು:ಕೋವಿಡ್‌ ಕಾರಣ ಜನರ ಬದುಕು ನಿರ್ವಹಣೆ ತುಂಬಾ ಕಷ್ಟವಾಗಿದೆ. ಜೊತೆಗೆ ಜಿ.ಎಸ್‌.ಟಿ. ತೆರಿಗೆ ದೊಡ್ಡ ಹೊರೆಯಾಗಿದ್ದು, ಈ ನಡುವೆ ವಿದ್ಯುತ್‌ ದರ ಹೆಚ್ಚಿಸಿದಲ್ಲಿ ಗ್ರಾಹಕರಿಗೆ ತುಂಬಾ ತೊಂದರೆಯಾಗಲಿದೆ. ಹೀಗಾಗಿ ವಿದ್ಯುತ್‌ ದರ ಹೆಚ್ಚಿಸಬಾರದೆಂದು ದೀಪಕ ಗಾದಾ ಸೇರಿದಂತೆ ಉದ್ಯಮಿಗಳು, ಸಾರ್ವಜನಿಕರು ಒಕ್ಕೂರಲಿಂದ ಒತ್ತಾಯಿಸಿದರು.

Advertisement

ಕಳೆದ 8 ವರ್ಷದಿಂದ ಸತತವಾಗಿ ದರ ಹೆಚ್ಚಳ ಮಾಡಲಾಗುತ್ತಿದೆ. ಕುಂದುಕೊರತೆ ಸಭೆ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ. ವಿದ್ಯುತ್‌ ಸಮಸ್ಯೆ ಬಗ್ಗೆ ನೀಡಲಾದ ದೂರಿಗೆ ಕಂಪನಿಯಿಂದ ಕರೆ ಮಾಡಿ ಫೀಡ್‌ಬ್ಯಾಕ್‌ ಪಡೆಯುವ ವ್ಯವಸ್ಥೆ ಜಾರಿಯಾಗಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸಿದ್ರಾಮಯ್ಯ ಹಿರೇಮಠ ಆಗ್ರಹಿಸಿದರು.

ಕಾಸಿಯಾ ಸಂಸ್ಥೆಯ ಭೀಮಾಶಂಕರ ಪಾಟೀಲ ಅವರು ಮಾತನಾಡಿ, ರೋಗಗ್ರಸ್ಥ ಉದ್ದಿಮೆಗಳು ಪುನಃ ಪ್ರಾರಂಭಿಸಿದಾಗ ವಿದ್ಯುತ್‌ ಬಿಲ್ಲು ಹಂತ ಹಂತವಾಗಿ ಪಾವತಿಗೆ ಅವಕಾಶ ಮಾಡಿಕೊಡಬೇಕು. ನಂದೂರ ಕೈಗಾರಿಕೆ ಪ್ರದೇಶದಲ್ಲಿ ಬಿಲ್‌ ಕಲೆಕ್ಷನ್‌ ಕೇಂದ್ರ ಸ್ಥಾಪಿಸಬೇಕು ಎಂದರು.

ವಿದ್ಯುತ್‌ ಸೋರಿಕೆ ತಡೆಗಟ್ಟಿ. ವಿದ್ಯುತ್‌ ಪೂರೈಕೆ ಸೇವಾ ವ್ಯಾಪ್ತಿಯಲ್ಲಿ ಬರುವುದರಿಂದ ವ್ಯಾಪಾರದ ಮನೋಭಾನೆಯಿಂದ ನೋಡಬಾರದು ಎಂದು ಎಸ್‌.ಎಂ. ಶರ್ಮಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಎಚ್‌.ಎನ್‌. ಖಾನಿಹಾಳ ಮಾತನಾಡಿ, ವಿಶೇಷವಾಗಿ ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ಸೋಲಾರ ಅಳವಡಿಕೆ ಮಾಡಿದಲ್ಲಿ ಮತ್ತು ದಿನದಲ್ಲಿ ಉರಿಯುವ ಬೀದಿ ದೀಪಗಳಿಗೆ ಕಡಿವಾಣ ಹಾಕಿದಲ್ಲಿ ಕಂಪನಿಗೆ ನಷ್ಟ ಮತ್ತು ವಿದ್ಯುತ್‌ ದರ ಹೆಚ್ಚಳ ಪ್ರಶ್ನೆಯೇ ಬರುವುದಿಲ್ಲ ಎಂದರು.

ಸಾಮಾಜಿಕ ಸೇವಾ ಕಾರ್ಯಕರ್ತ ಬಿ.ಎಂ. ರಾವೂರ ಮಾತನಾಡಿ, ವಿಶೇಷವಾಗಿ ಪರೀಕ್ಷೆ ಸಂದರ್ಭದಲ್ಲಿ ವಿದ್ಯುತ್‌ ಬಿಲ್‌ ಪಾವತಿ ಮಾಡಿಲ್ಲ ಎಂದು ವಸತಿ ನಿಲಯದ ವಿದ್ಯುತ್‌ ಕಡಿತ ಮಾಡಲಾಗುತ್ತದೆ. ಇದರಿಂದ ಮಕ್ಕಳ ಕಲಿಕೆ ಮೇಲೆ ಗಂಭೀರ ಪರಿಣಾಮ ಬೀರುತ್ತೆ. ಮುಂದೆ ಹೀಗಾಗಂತೆ ನೋಡಿಕೊಳ್ಳಬೇಕೆಂದು ಆಯೋಗಕ್ಕೆ ಮನವಿ ಮಡಿಕೊಂಡ ಅವರು ನಗರ ಪ್ರದೇಶಗಳಲ್ಲಿ ಟಿ.ಸಿ. ಸುತ್ತಮುತ್ತ ಬೇಲಿ ತಂತಿ ಅಳವಡಿಸಿ ಅಪಾಯ ದೂರ ಮಾಡಬೇಕೆಂದರು.

ಉದ್ಯಮಿ ಚೆನ್ನಬಸಪ್ಪ ನಂದಿಕೋಲಮಠ ಮಾತನಾಡಿ, ಸರ್ಕಾರದ ವಿವಿಧ ಇಲಾಖೆಗಳಿಂದ ಎಸ್ಕಾಂಗಳಿಗೆ ಬರಬೇಕಿದ್ದ ಬಾಕಿ ಬಿಲ್ಲು ಪಾವತಿಗೆ ಕಂಪನಿ ಮುಂದಾಗಬೇಕು ಎಂದರು.

ರಾಯಚೂರಿನ ಲಕ್ಷ್ಮೀರೆಡ್ಡಿ ಮಾತನಾಡಿ, ರಾಯಚೂರಿನಲ್ಲಿ ಫೀಡರ್‌ ಸಮಸ್ಯೆ ಬಹಳಷ್ಟಿದ್ದು, ಸಮಸ್ಯೆ ಬಗೆಹರಿಸಿ ಎಂದು ಆಯೋಗಕ್ಕೆ ಅಹವಾಲು ಸಲ್ಲಿಸಿದರು. ಸಭೆಯಲ್ಲಿ ಆಯೋಗದ ಕಾರ್ಯದರ್ಶಿ ರೇಖಾ ಟಿ., ಸಹಾಯಕ ಕಾರ್ಯದರ್ಶಿ ಸಿ.ರಾಜಶೇಖರ, ಸಲಹೆಗಾರ (ಜಕಾತಿ) ಪ್ರಭಾಕರ ರಾವ್‌, ಉಪನಿರ್ದೇಶಕಿ ಉಮಾ, ಜೆಸ್ಕಾಂನ ಮುಖ್ಯ ಆರ್ಥಿಕ ಅಧಿಕಾರಿ ಬಿ.ಅಬ್ದುಲ್‌ ವಾಜೀದ್‌, ನಿರ್ದೇಶಕ (ತಾಂತ್ರಿಕ) ಸೋಮಶೇಖರ ಬಿ.ಆರ್‌ ಸೇರಿದಂತೆ ಜೆಸ್ಕಾಂ ಕಂಪನಿಯ ಎಲ್ಲಾ ಜಿಲ್ಲೆಗಳ ಅಧಿಕಾರಿಗಳು, ವಿದ್ಯುತ್‌ ಗ್ರಾಹಕರು, ಸಾರ್ವಜನಿಕರು ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next