ಬೆಂಗಳೂರು: ಮೂರು ಅವಧಿಯ ಅಂದರೆ, 1998, 1999 ಹಾಗೂ 2004ನೇ ಸಾಲಿನ ಕೆಎಎಸ್ ಅಕ್ರಮ ನೇಮಕ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ 2016ರ ಜೂ.21ರಂದು ನೀಡಿರುವ ತೀರ್ಪಿನಲ್ಲಿ ಕೆಲವೊಂದು ಸ್ಪಷ್ಟನೆಗಳನ್ನು ಕೋರಿ ಅರ್ಜಿ ಸಲ್ಲಿಸಿದ್ದ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಹೈಕೋರ್ಟ್ ಒಂದು ಲಕ್ಷ ರೂ. ದಂಡ ವಿಧಿಸಿದೆ.
ಕೆಪಿಎಸ್‌ಸಿ ಸಲ್ಲಿಸಿದ್ದ ಮಧ್ಯಾಂತರ ಅರ್ಜಿಯನ್ನು ವಜಾಗೊಳಿಸಿರುವ ನ್ಯಾ| ರವಿ ಮಳೀಮs್ ಮತ್ತು ನ್ಯಾ| ಬಿ.ವೀರಪ್ಪ ಅವರಿದ್ದ ವಿಶೇಷ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.
‘2002ರಿಂದಲೂ ಈ ವಿಚಾರ ಕೋರ್ಟ್‌ನಲ್ಲಿ ನಡೆಯುತ್ತಿದೆ, ಅಭ್ಯರ್ಥಿಗಳು ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದಾರೆ. ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಆದೇಶಗಳನ್ನು ಜಾರಿಗೊಳಿಸಬೇಕು, ಆದರೆ ಅನಗತ್ಯ ಅರ್ಜಿಗಳನ್ನು ಸಲ್ಲಿಸಿ ನ್ಯಾಯಾಲಯದ ಆದೇಶ ಜಾರಿಗೊಳಿಸುವ ತಮ್ಮ ಸಾಂಸ್ಥಿಕ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿವೆ. 2016ರಲ್ಲೇ ಆದೇಶ ನೀಡಿದ್ದರೂ ಜಾರಿಗೊಳಿಸಿಲ್ಲ, ಸರಕಾರ ಮರು ಪರಿಶೀಲನ ಅರ್ಜಿ ಸಲ್ಲಿಸಿದ್ದಾಗಿ ಈ ರೀತಿ ಗೊಂದಲ ಇದೆ ಎಂಬ ವಿಷಯವನ್ನು ಏಕೆ ನ್ಯಾಯಪೀಠದ ಗಮನಕ್ಕೆ ತರಲಿಲ್ಲ. ಆದ್ದರಿಂದ ಆಯೋಗದ ಈ ನಡೆ ಕ್ರಮ ಸಮರ್ಥನೀಯವಲ್ಲ ಎಂದು ನ್ಯಾಯಪೀಠ ಹೇಳಿದೆ.
ಹೈಕೋರ್ಟ್ ನೀಡಿದ್ದ ತೀರ್ಪಿನ ಎರಡು ಹಾಗೂ ಮೂರನೇ ಅಂಶಗಳ ಜಾರಿಯಲ್ಲಿ ತೊಡಕಾಗುತ್ತಿದೆ. ಮೂರನೇ ಅಂಶ ಜಾರಿಗೊಳಿಸಿದರೆ ಎರಡನೇ ಅಂಶದ ಪ್ರಕಾರ ಪರಿಷ್ಕರಿಸುವ ಆಯ್ಕೆ ಪಟ್ಟಿ ಮತ್ತೆ ಪರಿಷ್ಕರಣೆ ಮಾಡಬೇಕಾಗುತ್ತದೆ. ಎರಡನೇ ಅಂಶ ಜಾರಿಗೊಳಿಸಿದರೆ ಮೂರನೇ ಅಂಶ ಜಾರಿಗೊಳಿಸಲಾಗದು.ಆದ್ದರಿಂದ ನ್ಯಾಯಾಲಯವೇ ಸ್ಪಷ್ಟನೆ ನೀಡಬೇಕು ಎಂದು ಕೆಪಿಎಸ್‌ಸಿ ಮನವಿ ಮಾಡಿತ್ತು.