Advertisement

ಸ್ಥಳಾಂತರಕ್ಕೆ ತೆಂಕಿಲ ದರ್ಖಾಸಿನ 13 ಕುಟುಂಬ ನಕಾರ

10:37 PM Jul 09, 2020 | Sriram |

ವಿಶೇಷ ವರದಿ- ಪುತ್ತೂರು: ಕಳೆದ ವರ್ಷ ನಗರದ ಹೊರ ವಲಯದ ತೆಂಕಿಲ ದರ್ಖಾಸು ಗುಡ್ಡದಲ್ಲಿ ಬಿರುಕು ಕಾಣಿಸಿಕೊಂಡ ಪರಿಣಾಮ 13 ಕುಟುಂಬಗಳಿಗೆ ಸರಕಾರ ನೀಡಿದ ಬದಲಿ ಜಾಗಕ್ಕೆ ತೆರಳಲು ನಿವಾಸಿಗಳು ನಿರಾಕರಿಸಿರುವ ಹಿನ್ನೆಲೆಯಲ್ಲಿ ಮನೆ ನಿರ್ಮಾಣಕ್ಕೆ ಬಿಡುಗಡೆಗೊಂಡಿರುವ ಮೊತ್ತ ರದ್ದಾಗಲಿದೆಯೋ ಎಂಬ ಪ್ರಶ್ನೆ ಮೂಡಿದೆ!

Advertisement

ದರ್ಖಾಸಿನ ಜಾಗ ಸುರಕ್ಷಿತವಾಗಿದ್ದು, ತಾವು ಅಲ್ಲಿಂದ ತೆರಳುವುದಿಲ್ಲ ಎಂದು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ 13 ಕುಟುಂಬಗಳು ಸ್ಪಷ್ಟಪಡಿಸಿರುವ ಕಾರಣ ನಗರಾಡಳಿತ ನೀಡಿದ ಬದಲಿ ಜಾಗದಲ್ಲಿ ಮನೆ ನಿರ್ಮಾಣ ಕಾರ್ಯ ಸ್ಥಗಿತವಾಗಿದೆ.

ಗುಡ್ಡ ಬಿರುಕು: ಸ್ಥಳಾಂತರ
2019ರ ಆ. 11ರಂದು ಗುಡ್ಡದಲ್ಲಿ ಸುಮಾರು 200 ಮೀಟರ್‌ ಉದ್ದದವರೆಗೆ ಬಿರುಕು ಕಂಡು ಬಂದಿತ್ತು. ಭೂ ವಿಜ್ಞಾನ ಇಲಾಖೆ ಪರಿಶೀಲಿಸಿ ಅಪಾಯದ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಿತು. ಬಳಿಕ ಅಧಿಕಾರಿಗಳು 13 ಕುಟುಂಬಗಳನ್ನು ಸ್ಥಳಾಂತರಿಸಲು ಸೂಚಿಸಿದ್ದರೂ ಪ್ರಾರಂಭದಲ್ಲಿ ನಿವಾಸಿಗಳು ನಿರಾಕರಿಸಿದ್ದರು. ಕೊನೆಗೂ ಅಧಿಕಾರಿಗಳ, ಜನಪ್ರತಿನಿಧಿಗಳ ಒತ್ತಾಸೆಗೆ ಸ್ಥಳಾಂತರಕ್ಕೆ ಒಪ್ಪಿ ಕೆಲವು ಕುಟುಂಬ ಗಳು ಸಂಬಂಧಿಕರ ಮನೆಗೆ, ಇನ್ನೂ ಕೆಲವು ಕುಟುಂಬಗಳು ನಗರದ ಸಮುದಾಯ ಭವನದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು.

ಮಿಶ್ರ ವರದಿ
ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ಬಳಿಕ ಮೂರು ತಂಡಗಳು ಬಿರುಕು ಬಿಟ್ಟ ಸ್ಥಳ ವಾಸಕ್ಕೆ ಸೂಕ್ತವೇ ಎಂಬ ಕುರಿತು ಪರಿಶೀಲನೆ ನಡೆಸಿತು. ಈ ಸಂದರ್ಭ ಭೂ ಕುಸಿತ ಸಾಧ್ಯತೆಯ ಬಗ್ಗೆ ಮಿಶ್ರ ವರದಿಗಳು ಬಂದಿತು.

ಭೂ ಕುಸಿತ ಅಲ್ಲ ಎಂದು ಒಂದು ತಂಡ, ಹೌದು ಎಂದು ಇನ್ನೊಂದು ತಂಡ ವರದಿ ನೀಡಿದ ಕಾರಣ ಪರಿಶೀಲನ ವರದಿ ಬಗ್ಗೆಯೇ ಸಂತ್ರಸ್ತ ಕುಟುಂಬಗಳಿಗೆ ಅನುಮಾನ ಮೂಡಿತು. ಹೀಗಾಗಿ ಗುಡ್ಡದಲ್ಲಿ ಸಂಭವಿಸಿದ್ದು, ತಾತ್ಕಾಲಿಕ ಬಿರುಕು ಹೊರತು ಭೂಕುಸಿತ ಅಲ್ಲ ಎಂದು ಸ್ಥಳೀಯರು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ತಿಳಿಸಿ ತಾವು ಇಲ್ಲೆ ವಾಸಿಸುವುದಾಗಿ ಸ್ಪಷ್ಟಪಡಿಸಿದ್ದರು.

Advertisement

ಬದಲಿ ಜಾಗಕ್ಕೆ ತೆರಳಲು ನಕಾರ!
ಸಂತ್ರಸ್ತ ಕುಟುಂಬಗಳಿಗೆ ಸರಕಾರ ಪ್ರಾಕೃತಿಕ ವಿಕೋಪ ಪರಿಹಾರದಡಿ ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ಘೋಷಿಸಿತು. ನಗರ ಪ್ರದೇಶ ವ್ಯಾಪ್ತಿಯ ಬನ್ನೂರು ಬಳಿ ಜಾಗ ಗುರುತಿಸಿ ಭೂ ಸಮತ್ತಟ್ಟು ಮಾಡಲಾಗಿದೆ. ಆದರೆ ಸಂತ್ರಸ್ತ ಕುಟುಂಬಗಳು ಅಲ್ಲಿಗೆ ತೆರಳಲು ನಿರಾಕರಿಸಿವೆ. ಯಾವುದೇ ಕಾರಣಕ್ಕೂ ತಾವಿರುವ ಜಾಗದಿಂದ ತೆರಳುವುದಿಲ್ಲ. ನಮಗೆ ತೊಂದರೆ ಆದರೆ ನಾವೇ ಜವಾಬ್ದಾರರು. ಈ ಬಗ್ಗೆ ಬಾಂಡ್‌ನ‌ಲ್ಲಿ ಬೇಕಾದರೂ ಬರೆದು ಕೊಡುತ್ತೇವೆ ಎಂದಿರುವ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಮಾಹಿತಿ ನೀಡಿದ್ದಾರೆ.

ನಗರಾಡಳಿತಕ್ಕೆ ಸ್ಪಷ್ಟ ಸೂಚನೆ ಬಂದಿಲ್ಲ
ಪ್ರಥಮ ಹಂತದಲ್ಲಿ ಫೌಂಡೇಶನ್‌ ನಿರ್ಮಾಣಕ್ಕೆಂದು 1 ಲಕ್ಷ ರೂ. ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗಿದೆ. ಕಾಮಗಾರಿ ಆರಂಭವಾಗದ ಕಾರಣ ಎರಡನೇ ಹಂತದ ಹಣ ಪಾವತಿಸಲು ಸಾಧ್ಯವಿಲ್ಲ. ಮನೆ ನಿರ್ಮಾಣದ ವಿವಿಧ ಹಂತಕ್ಕೆ ತಕ್ಕಂತೆ ಹಣ ಬಿಡುಗಡೆ ಮಾಡುವ ಅಧಿಕಾರ ನಗರಸಭೆಗೆ ನೀಡಲಾಗಿದೆ. ಉಳಿದ 4 ಲಕ್ಷ ರೂ. ಸರಕಾರಕ್ಕೆ ವಾಪಸಾಗುವ ಅಥವಾ ಬದಲಿ ಜಾಗ, ಮನೆ ತಿರಸ್ಕೃತ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಸರಕಾರದಿಂದ ನಗರಾಡಳಿತಕ್ಕೆ ಸ್ಪಷ್ಟವಾದ ಸೂಚನೆ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕ್ರಿಯೆ ಸ್ಥಗಿತ
ಎಲ್ಲ 13 ಕುಟುಂಬಗಳಿಗೆ ಬನ್ನೂರು ಬಳಿ ನಿವೇಶನ ನೀಡುವ ಸ್ಥಳ ಗುರುತಿಸಿ ಭೂ ಸಮತ್ತಟ್ಟು ಮಾಡ ಲಾಗಿತ್ತು. ಪ್ರಥಮ ಹಂತದಲ್ಲಿ 1 ಲಕ್ಷ ರೂ. ನೀಡಲಾಗಿದೆ. ಆದರೆ ಅವರು ತೆಂಕಿಲ ದರ್ಖಾಸಿನಲ್ಲೇ ಉಳಿದುಕೊಳ್ಳುವುದಾಗಿ ತಿಳಿಸಿದ್ದಾರೆ. ಹೀಗಾಗಿ ಮುಂದಿನ ಹಂತದ ಪ್ರಕ್ರಿಯೆ ಸ್ಥಗಿತವಾಗಿದೆ.
-ರೂಪಾ ಶೆಟ್ಟಿ , ಪೌರಯುಕ್ತೆ, ನಗರಸಭೆ

Advertisement

Udayavani is now on Telegram. Click here to join our channel and stay updated with the latest news.

Next