ಬೆಂಗಳೂರು: ಪೊಲೀಸರ ಸೋಗಿನಲ್ಲಿ ಖಾಸಗಿ ಕಂಪನಿ ಉದ್ಯೋಗಿಗೆ ಕರೆ ಮಾಡಿದ ಸೈಬರ್ ಕಳ್ಳರು 1 ಲಕ್ಷ ರೂ. ವಂಚಿಸಿದ್ದಾರೆ. ಕನ್ನಮಂಗಲದ ನಿವಾಸಿ ಸುಶಾಂತ್ ಚಕ್ರವರ್ತಿ (56) ವಂಚನೆಗೊಳಗಾದವರು.
ಆ.8ರಂದು ಖಾಸಗಿ ಕಂಪನಿ ಉದ್ಯೋಗಿ ಸುಶಾಂತ್‌ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ “ದೆಹಲಿ ಕ್ರೈಂ ಬ್ರ್ಯಾಂಚ್ ಪೊಲೀಸ್ ಅಧಿಕಾರಿ ಭರತ್’ ಎಂದು ಪರಿಚಯಿಸಿಕೊಂಡಿದ್ದ. ನಿಮ್ಮ ಮೇಲೆ ಸಮನ್ಸ್ ಜಾರಿಯಾಗಿದ್ದು, ಇದಕ್ಕಾಗಿ ಎಸ್.ಕೆ.ಚೌದರಿ ಎಂಬ ವಕೀಲರನ್ನು ಕೂಡಲೇ ಸಂಪರ್ಕಿಸುವಂತೆ ಸೂಚಿಸಿ, ಆತನ ಮೊಬೈಲ್ ನಂಬರ್ ಕೊಟ್ಟಿದ್ದ.
ಇತ್ತ ಸುಶಾಂತ್ ಆ ನಂಬರ್‌ಗೆ ಕರೆ ಮಾಡಿ ವಿಚಾರಿಸಿದಾಗ, “ನೀವು ಈ ಹಿಂದೆ ಯೂರೋಪ್‌ಗೆ ಭೇಟಿ ನೀಡಿದಾಗ ಅಲ್ಲಿ ಸಿಮ್ ಬಳಸಿರುವ ಬಾಕಿ ಶುಲ್ಕ 72 ಸಾವಿರ ರೂ. ಪಾವತಿಸಲಿಲ್ಲ ಎಂದು ಮ್ಯಾಟ್ರಿಕ್ಸ್ ಟೆಲಿಕಾಂ ಸಂಸ್ಥೆಯವರು ನಿಮ್ಮ ವಿರುದ್ಧ ದೂರು ನೀಡಿದ್ದಾರೆ.
ಇದರ ಜತೆಗೆ 28 ಸಾವಿರ ರೂ. ಕೋರ್ಟ್ ಶುಲ್ಕ ಪಾವತಿಸಿದರೆ ನೀವು ನ್ಯಾಯಾಲಯಕ್ಕೆ ಹಾಜರಾಗುವ ಪ್ರಮೇಯವೇ ಬರುವುದಿಲ್ಲ’ ಎಂದು ಆತ ನಂಬಿಸಿದ್ದ. ಆತನ ಮಾತು ಕೇಳಿ ಒಂದು ಕ್ಷಣ ದಂಗಾದ ಸುಶಾಂತ್, ಅಪರಿಚಿತ ಕೊಟ್ಟ ಬ್ಯಾಂಕ್ ಖಾತೆಗೆ ಕೂಡಲೇ 1 ಲಕ್ಷ ರೂ. ಜಮೆ ಮಾಡಿದ್ದರು. ನಂತರ ಆತನಿಗೆ ಕರೆ ಮಾಡಿ ಹಣ ಪಾವತಿಸಿದ ವಿಚಾರ ತಿಳಿಸಿದ್ದರು.
ಇದಾದ ಬಳಿಕ ಆತ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಅನುಮಾನಗೊಂಡ ಸುಶಾಂತ್ ತಾವು ಈ ಹಿಂದೆ ಯೂರೋಪ್‌ಗೆ ಹೋಗಲು ಅವಕಾಶ ಮಾಡಿಕೊಟ್ಟ ಏಜೆನ್ಸಿಗೆ ಕರೆ ಮಾಡಿ ವಿಚಾರಿಸಿದಾಗ ಯಾವುದೇ ಶುಲ್ಕ ಬಾಕಿ ಇಲ್ಲ ಎಂದು ಹೇಳಿದ್ದರು. ಆ ವೇಳೆ ಇದು ಸೈಬರ್ ಕಳ್ಳರ ಕೃತ್ಯ ಎಂಬುದು ಬೆಳಕಿಗೆ ಬಂದಿದೆ. ಈ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.