Advertisement

ಪ್ರತಿ 18 ಸೆಕೆಂಡಿಗೆ 1 ಸಾವು ; ಅಮೆರಿಕದಲ್ಲಿಯೇ ಹೆಚ್ಚಿನ ಜೀವ ಹಾನಿ

03:20 PM Jun 30, 2020 | mahesh |

ಹೊಸದಿಲ್ಲಿ: ವಿಶ್ವದಾದ್ಯಂತ ಕೋವಿಡ್ ಸಾವಿನ ಸಂಖ್ಯೆ 5 ಲಕ್ಷ ದಾಟಿದೆ. ರಾಯ್ ರ್ಸ್‌ ಸುದ್ದಿ ಸಂಸ್ಥೆ ನೀಡಿರುವ ಅಂಕಿ-ಅಂಶಗಳ ಪ್ರಕಾರ, ಜೂ. 1ರಿಂದ 27ರವರೆಗೆ ಜಗತ್ತಿನಾದ್ಯಂತ ಪ್ರತಿ 24 ಗಂಟೆಗಳಿಗೆ 4,700ಕ್ಕಿಂತಲೂ ಅಧಿಕ ಜನರು ಸಾವಿಗೀಡಾಗುತ್ತಿದ್ದಾರೆ. ಅಂದರೆ, ಪ್ರತಿ ಗಂಟೆಗೆ 196 ಜನರು ಅಥವಾ ಪ್ರತಿ 18 ಸೆಕೆಂಡುಗಳಿಗೆ ಒಬ್ಬ ಕೋವಿಡ್ ಸೋಂಕಿತ ಮೃತನಾಗುತ್ತಿದ್ದಾನೆ. ಜಗತ್ತಿನಲ್ಲಿ ಈವರೆಗೆ ಆಗಿರುವ ಸಾವುಗಳಲ್ಲಿ ಕಾಲು ಭಾಗದಷ್ಟು ಸಾವುಗಳು ಅಮೆರಿಕದಲ್ಲೇ ಸಂಭವಿಸಿವೆ. ಅಮೆರಿಕದ ದಕ್ಷಿಣ ಹಾಗೂ ಪಶ್ಚಿಮ ರಾಜ್ಯಗಳಲ್ಲಿ ಸೋಂಕಿನ ತೀವ್ರತೆ ಹೆಚ್ಚಾಗಿದೆ. ರವಿವಾರ ಒಂದೇ ದಿನ ಅಲ್ಲಿ 44,700 ಪ್ರಕರಣಗಳು ದಾಖಲಾಗಿದ್ದು, 508 ಸಾವು ಸಂಭವಿಸಿವೆ. ಈವರೆಗೆ ಸಾವಿಗೀಡಾದ 5 ಲಕ್ಷ ಜನರಲ್ಲಿ ಹೆಚ್ಚಿನವರು ವೃದ್ಧರೇ ಆಗಿದ್ದು, ಯುವಕರು ಹಾಗೂ ಮಕ್ಕಳು ಗಣನೀಯ ಸಂಖ್ಯೆಯಲ್ಲಿ ಸಾವನ್ನಪ್ಪಿದ್ದಾರೆ.

Advertisement

ಇತ್ತೀಚಿನ ವಾರಗಳಲ್ಲಿ ಸಾವಿನ ಸಂಖ್ಯೆ ಗಣನೀಯವಾಗಿ ಏರಿಲ್ಲ . ಆದರೆ, ಅಮೆರಿಕ, ಭಾರತ, ಬ್ರೆಜಿಲ್‌ ಹಾಗೂ ಏಷ್ಯಾದ ಕೆಲವು ಭಾಗಗಳಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ರವಿವಾರದಂದು, ಯೂರೋಪ್‌ನಲ್ಲಿ ದಾಖಲಾದ ಪ್ರಕರಣಗಳಿಗಿಂತ ಹೆಚ್ಚು ಪ್ರಕರಣಗಳು ಲ್ಯಾಟಿನ್‌ ಅಮೆರಿಕದಲ್ಲಿ ದಾಖಲಾಗಿವೆ. ಹಾಗಾಗಿ, ಉತ್ತರ ಅಮೆರಿಕದಲ್ಲಿ ಆತಂಕದ ಛಾಯೆ ಆವರಿಸಿದೆ. ಇನ್ನು, ವಿಶ್ವದ ಇತರೆಡೆ ಕಣ್ಣು ಹಾಯಿಸು­ವುದಾದರೆ ಆಸ್ಟ್ರೇಲಿಯಾದಲ್ಲಿ ಹೆಚ್ಚೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದಾರೆ.ಹಾಗಾಗಿ, ಅಲ್ಲಿನ ಅಧಿಕಾರಿಗಳು ಕೆಲವು ಪ್ರದೇಶಗಳಲ್ಲಿ ಸಾಮಾಜಿಕ ಅಂತರದ ಕಟ್ಟುಪಾಡುಗಳನ್ನು ಮತ್ತಷ್ಟು ಬಿಗಿಗೊಳಿಸಲು ತೀರ್ಮಾನಿಸಿದ್ದಾರೆ.

ದೇಶದಲ್ಲಿ ಮತ್ತೆ ಏರಿಕೆ ಕಂಡ ಸೋಂಕಿತರ ಸಂಖ್ಯೆ: ದೇಶದಲ್ಲಿ ಮತ್ತೆ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದೆ. ರವಿವಾರ ಬೆಳಗ್ಗೆ ಎಂಟರಿಂದ ಸೋಮವಾರ ಬೆಳಗ್ಗೆ 8 ರ ವರೆಗಿನ ಅವಧಿಯಲ್ಲಿ 19,459 ಹೊಸ ಪ್ರಕರಣಗಳು ದೃಢಪಟ್ಟಿವೆ. 380 ಸಾವಿನ ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ ಮಹಾರಾಷ್ಟ್ರದ ಸಂಖ್ಯೆಯೇ ಅಧಿಕ. 24 ಗಂಟೆಗಳ ಅವಧಿಯಲ್ಲಿ ಸೋಂಕಿತರ ಸಂಖ್ಯೆ 15 ಸಾವಿರಕ್ಕಿಂತ ಹೆಚ್ಚು ಬೆಳಕಿಗೆ ಬರುವುದು ಸತತ ಆರನೇ ದಿನವಾಗಿದೆ.  ಜೂ.1ರ ಬಳಿಕ ದೇಶದಲ್ಲಿ ಇದುವರೆಗೆ 3.57 ಲಕ್ಷ ಪ್ರಕರಣಗಳು ಪತ್ತೆಯಾಗಿವೆ. ಇಷ್ಟು ಮಾತ್ರವಲ್ಲದೆ ಗುಣಮುಖರಾಗುವ ಪ್ರಮಾಣ ಶೇ.58.67ಕ್ಕೆ ಏರಿಕೆಯಾಗಿದೆ. ರವಿವಾರದಿಂದ ಸೋಮವಾರದ ಅವಧಿ­ಯಲ್ಲಿ ಗುಣಮುಖರಾದವರ ಒಟ್ಟು ಸಂಖ್ಯೆ 12,010 ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಪ್ರಕಟಿಸಿದೆ. ಸೋಂಕಿನಿಂದ ಅಸುನೀಗಿದವರ ಬಗ್ಗೆ ವಿವರಣೆ ನೀಡಿರುವ ಸರಕಾರ ಶೇ.70ರಷ್ಟು ಮಂದಿಯಲ್ಲಿ ಇತರ ಆರೋಗ್ಯ ಸಮಸ್ಯೆಯೂ ಕಾಣಿಸಿಕೊಂಡಿತ್ತು. ಹೀಗಾಗಿ, ಸೋಂಕು ಕೂಡ ಅವರಿಗೆ ತಗುಲಿದ ಹಿನ್ನೆಲೆಯಲ್ಲಿ ಕೊನೆಯುಸಿರೆಳೆದರು ಎಂದು ವಿವರಣೆ ನೀಡಿದೆ. ದೇಶದಲ್ಲಿ ಸೋಂಕು ಪತ್ತೆಗಾಗಿಯೇ 1,047 ವಿಶೇಷ ಪ್ರಯೋಗಶಾಲೆಗಳನ್ನು ತೆರೆಯಲಾಗಿದೆ. ಈ ಪೈಕಿ ಸರಕಾರದ್ದು 760 ಮತ್ತು ಖಾಸಗಿ ವಲಯದಲ್ಲಿ 287 ಲ್ಯಾಬ್‌ಗಳು ಇವೆ.

ಬಾಂಗ್ಲಾ ರಕ್ಷಣಾ ಕಾರ್ಯದರ್ಶಿ ಕೋವಿಡ್ ಗೆ  ಬಲಿ
ಢಾಕಾ: ಕೋವಿಡ್ ಸೋಂಕಿತರಾಗಿದ್ದ ಬಾಂಗ್ಲಾದೇಶದ ರಕ್ಷಣಾ ಕಾರ್ಯದರ್ಶಿ ಅಬ್ದುಲ್ಲಾ ಅಲ್‌ ಮೋಹ್ಸಿನ್‌ ಚೌಧರಿ (57) ಸೋಮವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಜೂನ್‌ 6ರಂದು ಅವರಿಗೆ ಕೋವಿಡ್ ಪಾಸಿಟಿವ್‌ ಇರುವುದು ದೃಢಪಟ್ಟಿತ್ತು. ಜೂ. 18ರ ಬಳಿಕ ಆರೋಗ್ಯ ಹದಗೆಟ್ಟಿದ್ದರಿಂದ ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಬಾಂಗ್ಲಾದಲ್ಲಿ ಇದುವರೆಗೆ 1.4 ಲಕ್ಷ ಮಂದಿ ಸೋಂಕಿತ­ರಾಗಿದ್ದು, 1,738 ಮಂದಿ ಮೃತಪಟ್ಟಿದ್ದಾರೆ.

ಸಿಸಿಆರ್‌ಎಸ್‌ನಿಂದ ಸಿದ್ದೌಷಧ ಪರೀಕ್ಷೆ
ಚೆನ್ನೈ: ಸೋಂಕಿಗೆ ಚೆನ್ನೈನ ಸರಕಾರಿ ಕೋವಿಡ್ ಆಸ್ಪತ್ರೆ­ಯಲ್ಲಿ ಸಿದ್ಧ ಚಿಕಿತ್ಸೆ ನೀಡಲಾ­ಗುತ್ತಿದ್ದು, ಅದರಿಂದಾಗಿ ಧನಾತ್ಮಕ ಫ‌ಲಿತಾಂಶಗಳು ಬೀರಿವೆ. ಹೀಗಾಗಿ, ಅದನ್ನು ಪರಿಶೀಲನೆ ನಡೆಸಲು ಕೇಂದ್ರ ಸಂಶೋಧನಾ ಮಂಡಳಿ (ಸಿಸಿಆರ್‌ಎಸ್‌) ಸೋಮವಾರ ನಿರ್ಧರಿಸಿದೆ. ಚೆನ್ನೈನ ವ್ಯಾಸರ್ಪಾಡಿಯ 60 ಕೋವಿಡ್ ಸೋಂಕಿತರಿಗೆ ಸಿಸಿಆರ್‌ಎಸ್‌ ತಾನೇ ಸಿದ್ದೌಷಧ ಚಿಕಿತ್ಸೆ ನೀಡಲಿದೆ. ಸಿದ್ಧ ಸಮೂ­ಹದ ಔಷಧಗಳು ಮತ್ತು ಆಯು­ರ್ವೇದ ಔಷಧ “ಕಬಾಸುರ ಕುಡಿನೀರ್‌’ ಅನ್ನು ವೈದ್ಯಕೀಯ ಪ್ರಯೋಗಕ್ಕೆ ಒಳಪಡಿಸಿ, ಅವುಗಳು ಕೋವಿಡ್ ಸೋಂಕನ್ನು ನಿಯಂತ್ರಿಸುವಲ್ಲಿ ಎಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಸುತ್ತವೆ ಎಂಬುದನ್ನು ತಿಳಿಯುವುದು ಮಂಡಳಿಯ ಉದ್ದೇಶವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next