ಬೆಂಗಳೂರು: ಕೆಎಎಸ್, ಪಿಡಿಒ, ಪಿಎಸ್ಐ ಸೇರಿ ಸರ್ಕಾರ ವಿವಿಧ ಹುದ್ದೆಗಳ ನೇಮಕಾತಿ ಸಂಬಂಧ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸ್ ಮಾಡಿಸುವುದಾಗಿ ನಂಬಿಸಿ ಉದ್ಯೋಗಾಕಾಂಕ್ಷಿಗಳಿಂದ ಲಕ್ಷಾಂತರ ರೂ. ಪಡೆದು ವಂಚಿಸುತ್ತಿದ್ದ ರೈಲ್ವೆ ಅಧಿಕಾರಿ ಯನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಿಜಯನಗರದ ಪಟ್ಟೇ ಗಾರಪಾಳ್ಯದ ಗೋವಿಂದ ರಾಜು (51) ಬಂಧಿತ. ಈತ ರೈಲ್ವೆ ಚೀಫ್ ಟಿಕೆಟ್ ಇನ್ಸ್ಪೆಕ್ಟರ್ ಆಗಿದ್ದಾನೆೆ. ಇತ್ತೀಚೆಗೆ ಉದ್ಯೋಗಾಂಕ್ಷಿಯೊಬ್ಬರಿಗೆ ಸ್ಪರ್ಧಾತ್ಮಕ ಪರೀಕ್ಷೆ ಪಾಸು ಮಾಡಿಸುವುದಾಗಿ ಲಕ್ಷಾಂತರ ರೂ. ಪಡೆದು ವಂಚಿಸಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಸುಮಾರು 46 ಮಂದಿಗೆ ವಂಚಿಸಿದ್ದು, 1 ಕೋಟಿ ರೂ. ವಸೂಲಿ ಮಾಡಿರುವುದು ತಿಳಿದು ಬಂದಿದೆ.
ನನಗೆ ಸರ್ಕಾರದ ಮಟ್ಟದಲ್ಲಿ ಹಲವು ಅಧಿಕಾರಿಗಳ ಪರಿಚಿತರಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸು ಮಾಡಿಸುವುದಾಗಿ ನಂಬಿಸಿ, ಉದ್ಯೋಕಾಂಕ್ಷಿಗಳಿಂದ ಲಕ್ಷಾಂತರ ರೂ. ಪಡೆದು ಬಳಿಕ ವಂಚಿಸುತ್ತಿದ್ದ. ಆತನ ವಿಚಾರಣೆಯಲ್ಲಿ ಐದು ವರ್ಷದ ಹಿಂದೆ ಸಿಸಿಬಿ ಪೊಲೀಸರು ವಂಚನೆ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿದ್ದರು ಎಂಬುದು ಗೊತ್ತಾಗಿದೆಎಂದು ಪೊಲೀಸರು ಹೇಳಿದರು.
46 ಮಂದಿಯ ಹೆಸರು ಪತ್ತೆ: ತಾನು ಪರೀಕ್ಷೆಯಲ್ಲಿ ಪಾಸ್ ಮಾಡಿಸಿ ಹುದ್ದೆ ಕೊಡಿಸುವುದಾಗಿ ಮಧ್ಯವರ್ತಿಗಳ ಮೂಲಕ ಪರೀಕ್ಷಾರ್ಥಿಗಳನ್ನು ಸಂಪರ್ಕಿಸುತ್ತಿದ್ದ ಆರೋಪಿ, ಪಿಡಿಒ ಹುದ್ದೆಗೆ 25 ಲಕ್ಷ ರೂ. ಹಾಗೂ ಕೆ.ಎ.ಎಸ್ ಪ್ರಿಲಿಮ್ಸ್ ಪರೀಕ್ಷೆಗೆ 50 ಲಕ್ಷ ರೂ. ನೀಡುವಂತೆ ಒಪ್ಪಂದ ಮಾಡಿಕೊಳ್ಳುತ್ತಿದ್ದ. ಪರೀಕ್ಷೆಯಲ್ಲಿ ತಮಗೆ ಖಚಿತವಾಗಿ ಗೊತ್ತಿರುವ ಪ್ರಶ್ನೆಗಳಿಗೆ ಓಎಂಆರ್ ಶೀಟ್ನಲ್ಲಿ ಉತ್ತರ ತುಂಬಿಸಿ ಗೊತ್ತಿಲ್ಲದ ಪ್ರಶ್ನೆಗಳಿಗೆ ಉತ್ತರವನ್ನು ಖಾಲಿ ಬಿಟ್ಟು ಬರುವಂತೆ ತಿಳಿಸಿ, ನಂತರ ಓಎಂಆರ್ ಶೀಟ್ನಲ್ಲಿ ಸರಿಯಾದ ಉತ್ತರವನ್ನು ತುಂಬಿಸಿ ಪಾಸ್ ಮಾಡಿಸುತ್ತೇನೆ ಎಂದು ನಂಬಿಸುತ್ತಿದ್ದ. ಅಲ್ಲದೆ, ಅದಕ್ಕೆ ಗ್ಯಾರಂಟಿಯಾಗಿ ಅಭ್ಯರ್ಥಿಗಳಿಂದ 10ನೇ ತರಗತಿ ಮತ್ತು ಪದವಿಗೆ ಸಂಬಂಧಿಸಿದ ಪ್ರಮಾಣಪತ್ರಗಳನ್ನು, ಪರೀಕ್ಷಾ ಪ್ರವೇಶ ಪತ್ರಗಳನ್ನು ಪಡೆದುಕೊಂಡು, ಸಹಿ ಹಾಕಿರುವ ಖಾಲಿ ಚೆಕ್ಗಳನ್ನು ಪಡೆದುಕೊಂಡಿದ್ದಾನೆ. ಸದ್ಯ ಅವುಗಳನ್ನು ಮಧ್ಯವರ್ತಿಗಳಿಗೆ ನೀಡಿದ್ದಾಗಿ ತಿಳಿಸಿದ್ದಾನೆ. ನಂತರ ಈತನ ವಶದಲ್ಲಿದ್ದ 4 ಮೊಬೈಲ್ಗಳನ್ನು ಪರಿಶೀಲಿಸಿದಾಗ 46 ಜನಗಳ ಹೆಸರು ಮತ್ತು ಅದರ ಮುಂದೆ ಚೆಕ್ ಮತ್ತು ಡಾಕ್ಯೂಮೆಂಟ್ ಎಂದು ನಮೂದಿಸಿರುವ ಫೋಟೋಗಳು ಪತ್ತೆಯಾಗಿವೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಆರೋಪಿ 1 ಕೋಟಿ ರೂ.ಗೂ ಅಧಿಕ ವಂಚನೆ ಮಾಡಿರುವುದು ಗೊತ್ತಾಗಿದೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಆರೋಪಿಯ ವಿಚಾರಣೆಯಲ್ಲಿ ಕೆಲವೊಂದು ಮಾಹಿತಿ ಸಿಕ್ಕಿದ್ದು, ಈತನಿಗೆ ಚೆಕ್ ನೀಡಿರುವ ಅಭ್ಯರ್ಥಿಗಳನ್ನು ಸಂಪರ್ಕಿಸಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆರೋಪಿ ಸಹಚರರು ಬೇರೆ ಜಿಲ್ಲೆಯಲ್ಲೂ ಇರುವ ಮಾಹಿತಿಯಿದ್ದು, ತನಿಖೆ ಮುಂದುವರಿದಿದೆ.
-ಎಸ್.ಗಿರೀಶ್, ಪಶ್ಚಿಮ ವಿಭಾಗದ ಡಿಸಿಪಿ