Advertisement

Guarantee: ಸಮೀಕ್ಷೆಗೆ 1 ಕೋಟಿ ರೂ- ಲೋಕಸಭೆ ಚುನಾವಣೆಗೆ ಮುನ್ನ ಸಮೀಕ್ಷಾ ವರದಿ ಬಿಡುಗಡೆ

08:15 PM Sep 30, 2023 | Team Udayavani |

ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೊಳಿಸಿರುವ ನಾಲ್ಕು ಗ್ಯಾರಂಟಿ ಯೋಜನೆಗಳ ಕುರಿತು ಸಮೀಕ್ಷೆ ನಡೆಸಲು ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಸಂಸ್ಥೆಗೆ 1 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ.

Advertisement

ನಾಡಿನ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲೂ ಈ ಯೋಜನೆ ಅನುಷ್ಠಾನಗೊಳ್ಳುತ್ತಿರುವ ಬಗ್ಗೆ ಹಾಗೂ ಅರ್ಹ ಫ‌ಲಾನುಭವಿಗಳಿಗೆ ಯೋಜನೆಯ ಲಾಭ ಎಷ್ಟರ ಮಟ್ಟಿಗೆ ಆಗಿದೆ? ಎಂಬುದರ ಕುರಿತು ಸಮೀಕ್ಷೆ ನಡೆಸುವ ಹೊಣೆಗಾರಿಕೆ ನೀಡಲಾಗಿದೆ.

ಪ್ರತಿ ತಿಂಗಳು ಒಂದೊಂದು ಗ್ಯಾರಂಟಿಗಳ ಬಗ್ಗೆ ಸಮೀಕ್ಷೆ ನಡೆಸಬೇಕು, ನಾಲ್ಕು ತಿಂಗಳಲ್ಲಿ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿ ಫೆಬ್ರವರಿ ಅಥವಾ ಮಾರ್ಚ್‌ ವೇಳೆಗೆ ಅಂದರೆ ಲೋಕಸಭಾ ಚುನಾವಣೆಗೆ ಮುನ್ನ ವರದಿ ಸಲ್ಲಿಸುವಂತೆ ಸೂಚಿಸಿದೆ.

ಈ ವರದಿಯು ಮುಂದಿನ ಲೋಕಸಭೆ ಚುನಾವಣೆಗೆ ಸಹಕಾರಿಯಾಗಲಿದ್ದು, ನಾಲ್ಕು ಗ್ಯಾರಂಟಿ ಯೋಜನೆಗಳ ಲಾಭ ಎಷ್ಟರ ಮಟ್ಟಿಗೆ ಆಗಿದೆ ಎಂಬುದನ್ನು ಮುಂದಿಟ್ಟುಕೊಂಡು ಲೋಕಸಭೆ ಚುನಾವಣೆಗೆ ಪ್ರಣಾಳಿಕೆ ಸಿದ್ಧಪಡಿಸುವ ಚಿಂತನೆಯೂ ನಡೆದಿದೆ.

ಯೋಜನೆಗೆ ಒದಗಿಸಿದ ಅನುದಾನದಲ್ಲೇ ಸಮೀಕ್ಷೆ
ಸಮೀಕ್ಷೆಯ ವೆಚ್ಚವನ್ನು ಆಯಾ ಯೋಜನೆಗೆ ಒದಗಿಸಿದ ಅನುದಾನದಲ್ಲೇ ಸಂಬಂಧಪಟ್ಟ ಇಲಾಖೆಯಿಂದ ಭರಿಸಬೇಕು. ಗೃಹಲಕ್ಷ್ಮೀ ಯೋಜನೆಯ ಸಮೀಕ್ಷೆಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 25 ಲಕ್ಷ ರೂ., ಗೃಹಜ್ಯೋತಿ ಸಮೀಕ್ಷೆಗೆ ಇಂಧನ ಇಲಾಖೆಯಿಂದ 25 ಲಕ್ಷ ರೂ., ಶಕ್ತಿ ಯೋಜನೆಯ ಸಮೀಕ್ಷೆಗೆಂದು ಸಾರಿಗೆ ಇಲಾಖೆಯಿಂದ 25 ಲಕ್ಷ ರೂ. ಮತ್ತು ಅನ್ನಭಾಗ್ಯ ಯೋಜನೆಗಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ 25 ಲಕ್ಷ ರೂ.ಗಳನ್ನು ಖರ್ಚು ಮಾಡಲು 4(ಜಿ) ವಿನಾಯಿತಿ ನೀಡಲಾಗಿದೆ.

Advertisement

ದಸರಾ ಸರಕು, ಸೇವೆ, ಕಾಮಗಾರಿ ಸಂಗ್ರಹಣೆಗೆ 15 ಕೋಟಿ
ಪ್ರಸಕ್ತ ಸಾಲಿನ ನಾಡಹಬ್ಬ ದಸರಾ ಮಹೋತ್ಸವ ಆಚರಣೆಗೆ ಅವಶ್ಯಕ ಸರಕು, ಸೇವೆ, ಕಾಮಗಾರಿ ಸಂಗ್ರಹಣೆಗೆ 15 ಕೋಟಿ ರೂ.ಗಳ ಅನುದಾನ ಮಂಜೂರು ಮಾಡಲಾಗಿದೆ.
ದಸರಾ ವಿಶೇಷಾಧಿಕಾರಿಯೂ ಆಗಿರುವ ಮೈಸೂರು ಜಿಲ್ಲಾಧಿಕಾರಿಗೆ ಅಧಿಕಾರ ನೀಡಲಾಗಿದ್ದು, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ) ಅಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪಾರದರ್ಶಕ ಕಾಯ್ದೆಯಿಂದ ವಿನಾಯಿತಿ ನೀಡಲಾಗಿದೆ.

ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದೃಢಪಡಿಸಿಕೊಳ್ಳಬೇಕೆಂದು ಸರ್ಕಾರದ ಅಧಿಸೂಚನೆಯಲ್ಲಿ ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next