ಆಲಮಟ್ಟಿ: ಕೃಷ್ಣೆ ಉಗಮ ಸ್ಥಾನ ಮತ್ತು ಕೃಷ್ಣೆ ಉಪ ನದಿಗಳಾಗಿರುವ ವೇದಗಂಗಾ, ದೂದಗಂಗಾ ಸೇರಿದಂತೆ ಪಂಚಗಂಗಾ ನದಿಗಳು ಹಾಗೂ ಘಟಪ್ರಭಾ ನದಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯಕ್ಕೆ 1,41,389 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಜಲಾಶಯದ 26 ಗೇಟುಗಳನ್ನು 1.4 ಮೀ. ಎತ್ತರಿಸಿ 1.41ಲಕ್ಷ ಕ್ಯೂಸೆಕ್‌ಹಾಗೂ ಶಾಸ್ತ್ರಿ ಜಲಾಶಯದ ಬಲ ಬದಿಯಲ್ಲಿರುವ ಕರ್ನಾಟಕ ವಿದ್ಯುತ್ ಉತ್ಪಾದನಾ ಘಟಕದ ಆಲಮಟ್ಟಿ ಜಲ ವಿದ್ಯುದಗಾರದ ಎಲ್ಲ ಆರು ಘಟಕಗಳಿಂದ 39 ಸಾವಿರ ಕ್ಯೂಸೆಕ್ ನೀರು ಸೇರಿ ಒಟ್ಟು 1.80 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಬುಧವಾರ ಕನಿಷ್ಠ ಒಳ ಹರಿವಿದ್ದ ನದಿಯಲ್ಲಿ ಗುರುವಾರದಿಂದ ಜಲಾಶಯ ಒಳ ಹರಿವಿನಲ್ಲಿ ಏರಿಕೆಯಾಗುತ್ತಾ ಸಾಗಿದೆ. ರಾಜಾಪುರ ಬ್ಯಾರೇಜು ಹಾಗೂ ಕಲ್ಲೋಳ ಬ್ಯಾರೇಜಿನ ಮಾಹಿತಿಯಂತೆ ಶುಕ್ರವಾರ ರಾತ್ರಿ ವೇಳೆಗೆ 2.01 ಲಕ್ಷ ಕ್ಯೂಸೆಕ್ ನೀರು ಆಲಮಟ್ಟಿ ಜಲಾಶಯ ತಲುಪುವ ನಿರೀಕ್ಷೆಯಿದೆ ಎಂದು ಕೃಷ್ಣಾಭಾಗ್ಯಜಲ ನಿಗಮದ ಮೂಲಗಳು ತಿಳಿಸಿವೆ.
519.60 ಮೀ. ಎತ್ತರದಲ್ಲಿ 123.081 ಟಿಎಂಸಿ ಅಡಿ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಶುಕ್ರವಾರ ಸಾಯಂಕಾಲ 517.91ಮೀ. ಎತ್ತರವಾಗಿ 1.41 ಲಕ್ಷ ಕ್ಯೂಸೆಕ್ ನೀರು ಒಳಹರಿವಾಗಿ, 1.80 ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಕಳೆದ ವರ್ಷ ಆ. 7ರಂದು 3,30,790 ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿತ್ತು. ಇದರಿಂದ ಮುಂಜಾಗ್ರತಾ ಕ್ರಮವಾಗಿ ಜಲಾಶಯದ ಗೇಟ್ ಗಳಿಂದ 3,48,072 ಕ್ಯೂಸೆಕ್ ಹಾಗೂ ಆಲಮಟ್ಟಿ ಜಲ ವಿದ್ಯುದಗಾರದಿಂದ 42 ಸಾವಿರ ಕ್ಯೂಸೆಕ್ ನೀರು ಸೇರಿ ಒಟ್ಟು 3,90,072 ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿತ್ತು.
ವಿದ್ಯುತ್ ಉತ್ಪಾದನೆ : ಆಲಮಟ್ಟಿ ಜಲ ವಿದ್ಯುದಗಾರದಲ್ಲಿ 55 ಮೆ.ವ್ಯಾ.ನ 5 ಘಟಕ ಹಾಗೂ 15 ಮೆ.ವ್ಯಾ.1 ಘಟಕ ಸೇರಿ ಒಟ್ಟು 6 ಘಟಕಗಳಿಂದ 290 ಮೆ.ವ್ಯಾ. ವಿದ್ಯುತ್ ಉತ್ಪಾದನೆಯಾಗುತ್ತದೆ. ಶುಕ್ರವಾರ 39 ಸಾವಿರ ಕ್ಯೂಸೆಕ್ ನೀರನ್ನು ಬಳಸಿಕೊಂಡು 250 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ ಎಂದು ಕೆಪಿಸಿಎಲ್‌ನ ಅಧೀಕ್ಷಕ ಅಭಿಯಂತರರು ತಿಳಿಸಿದರು.
-ಶಂಕರ ಜಲ್ಲಿ