ಹಾಂಗ್ ಕಾಂಗ್:ಆರೋಪಿಗಳ ಹಸ್ತಾಂತರ ಮಸೂದೆಯನ್ನು ವಿರೋಧಿಸಿ ಕಳೆದ ಎರಡು ತಿಂಗಳಿನಿಂದ ಹಾಂಗ್ ಕಾಂಗ್ ನಲ್ಲಿ ನಡೆಯುತ್ತಿರುವ ಭಾರೀ ಪ್ರತಿಭಟನೆಗೆ ಇದೀಗ ಸಾವಿರಾರು ಜನರು ಬೆಂಬಲ ಸೂಚಿಸಿ ಬೀದಿಗಿಳಿಯುವ ಮೂಲಕ ಜಗತ್ತಿನ ಗಮನ ಸೆಳೆಯುವಂತಾಗಿದೆ.
ಹಾಂಗ್ ಕಾಂಗ್ ಅಧಿಕೃತವಾಗಿ ವಿಶೇಷ ಆಡಳಿತ ಪ್ರದೇಶವಾಗಿದ್ದು, ಚೀನಾದ ದಕ್ಷಿಣ ಕಡಲ ತೀರದಲ್ಲಿರುವ ಸುಂದರ ಪ್ರದೇಶ ಹಾಂಗ್ ಕಾಂಗ್. ಮೂರು ದಿಕ್ಕಿನಲ್ಲಿ ದಕ್ಷಿಣ ಚೀನ ಸಮುದ್ರದಿಂದ ಆವೃತ್ತವಾಗಿರುವ ಈ ದ್ವೀಪ ಪ್ರದೇಶ ಈಗ ಚೀನದ ತೆಕ್ಕೆಯಲ್ಲಿದೆ. 1,104 ಚದರ ಕಿಲೋ ಮೀಟರ್ ವ್ಯಾಪ್ತಿ ಹೊಂದಿರುವ ಹಾಂಗ್ ಕಾಂಗ್ ಜನಸಂಖ್ಯೆ 7.4 ಮಿಲಿಯನ್. ಜಗತ್ತಿನಲ್ಲಿಯೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರದೇಶ ಇದಾಗಿದೆ.
ಮುಖ್ಯ ಅಧಿಕಾರಿಯೇ ಹಾಂಗ್ ಕಾಂಗ್ ಸರಕಾರದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಾರೆ. ಇವರ ಗರಿಷ್ಠ ಅವಧಿ 10(2 ಬಾರಿ ಸೇರಿ) ವರ್ಷದ್ದಾಗಿರುತ್ತದೆ. ಹಾಂಗ್ ಕಾಂಗ್ ಗೆ ಚೀನಾ ಮುಖ್ಯ ಅಧಿಕಾರಿಯನ್ನು ನೇಮಿಸುತ್ತದೆ. ಇಲ್ಲಿನ ಲೆಜಿಸ್ಲೇಟಿವ್ ಮಂಡಳಿಯಲ್ಲಿ 70 ಮಂದಿ ಸದಸ್ಯರಿರುತ್ತಾರೆ.
ಬೀದಿಗಿಳಿದ ಲಕ್ಷಾಂತರ ಮಂದಿ, ಹಾಂಗ್ ಕಾಂಗ್ ವಿರುದ್ಧ ಪ್ರತಿಭಟನೆ!
2019ರ ಏಪ್ರಿಲ್ ನಲ್ಲಿ ಹಾಂಗ್ ಕಾಂಗ್ ಸರಕಾರ ಆರೋಪಿಗಳ(ಗಡಿಪಾರು) ಹಸ್ತಾಂತರ ಮಸೂದೆಯನ್ನು ಮಂಡಿಸಿತ್ತು. ಈ ಕಾಯ್ದೆ ಪ್ರಕಾರ ಸ್ಥಳೀಯ ಅಧಿಕಾರಿಗಳು ಅಪರಾಧ ಪ್ರಕರಣಗಳಲ್ಲಿ ಬಂಧಿತರಾದವರನ್ನು ವಿಚಾರಣೆಗಾಗಿ ಚೀನಾಕ್ಕೆ ಗಡಿಪಾರು ಮಾಡಬಹುದಾಗಿದೆ. ಒಂದು ವೇಳೆ ಹಾಂಗ್ ಕಾಂಗ್ ನಲ್ಲಿ ಈ ಕಾಯ್ದೆ ಜಾರಿಗೊಂಡರೆ ಚೀನಾದಲ್ಲಿ ವಿಚಾರಣೆ ಎದುರಿಸಬೇಕಾಗುತ್ತದೆ ಎಂಬುದು ಹಾಂಗ್ ಕಾಂಗ್ ನಿವಾಸಿಗಳ ಆತಂಕವಾಗಿದೆ.
ಈ ಹಿನ್ನೆಲೆಯಲ್ಲಿ 2019ರ ಗಡಿಪಾರು ಮಸೂದೆ ವಿರುದ್ಧ ಮಾರ್ಚ್ ತಿಂಗಳಿನಲ್ಲಿಯೇ ಪ್ರತಿಭಟನೆ ಆರಂಭವಾಗಿತ್ತು. ಜೂನ್ 9ರಂದು ಸಾವಿರಾರು ಮಂದಿ ಮಸೂದೆ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಜೂನ್ 12ರಂದು ಪ್ರತಿಭಟನೆ ತೀವ್ರ ಸ್ವರೂಪ ಪಡೆದು, ಪೊಲೀಸರು ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಪ್ರಯೋಗ ಮತ್ತು ರಬ್ಬರ್ ಬುಲೆಟ್ ಪ್ರಯೋಗಿಸಿದ್ದರು.
ಏತನ್ಮಧ್ಯೆ ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದ ಹಾಂಗ್ ಕಾಂಗ್ ಮುಖ್ಯ ಅಧಿಕಾರಿ ಕ್ಯಾರಿ ಲ್ಯಾಮ್ ಮಸೂದೆಯನ್ನು ಜೂನ್ 15ರಂದು ಅಮಾನತ್ತಿನಲ್ಲಿಡುವುದಾಗಿ ಹೇಳಿದ್ದರು. ಆದರೆ ಮಸೂದೆಯನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆಯೇ ಇಲ್ಲವೇ ಎಂಬ ಬಗ್ಗೆ ಸ್ಪಷ್ಟವಾಗಿ ಹೇಳಿಲ್ಲ. ಈ ಹಿನ್ನೆಲೆಯಲ್ಲಿ ಹಾಂಗ್ ಕಾಂಗ್ ಬೀದಿಯಲ್ಲಿ ಈಗ 15ಲಕ್ಷಕ್ಕೂ ಅಧಿಕ ಪ್ರಜಾಪ್ರಭುತ್ವ ಪರ ಹೋರಾಟಗಾರರು ಪ್ರತಿಭಟನೆಯಲ್ಲಿ ತೊಡಗುವ ಮೂಲಕ ಜಗತ್ತಿನ ಗಮನ ಸೆಳೆದಿದ್ದಾರೆ.
ಹಾಂಗ್ ಕಾಂಗ್ ಜನರ ಆತಂಕ ಏನು?
ಒಂದು ವೇಳೆ ಗಡಿಪಾರು ಮಸೂದೆ ಜಾರಿಯಾದರೆ ಆರೋಪಿ ಚೀನಾಕ್ಕೆ ಹಸ್ತಾಂತರವಾದ ಮೇಲೆ ಅಲ್ಲಿನ ನ್ಯಾಯಾಂಗ ವ್ಯವಸ್ಥೆಯಂತೆಯೇ ವಿಚಾರಣೆ, ಶಿಕ್ಷೆ ಎದುರಿಸಬೇಕು. ಅಲ್ಲದೇ ಹಾಂಗ್ ಮೇಲೆ ಚೀನಾ ಹಿಡಿತ ಮತ್ತಷ್ಟು ಹೆಚ್ಚುತ್ತದೆ. ಪ್ರಾದೇಶಿಕ ನ್ಯಾಯಾಂಗ ಮತ್ತು ಹಕ್ಕುಗಳನ್ನು ಕಸಿದಂತಾಗುತ್ತದೆ. ಪತ್ರಕರ್ತರು, ಸಾಮಾಜಿಕ ಹೋರಾಟಗಾರರನ್ನು, ಪ್ರವಾಸಿಗರನ್ನು ಗುರಿಯಾಗಿರಿಸಿ ಬಂಧಿಸುವ ಮೂಲಕ ಕಾನೂನನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತದೆ ಎಂಬುದು ಹಾಂಗ್ ಕಾಂಗ್ ಪ್ರತಿಭಟನಾಕಾರರ ಆರೋಪವಾಗಿದೆ.
ಈ ಕಾಯ್ದೆ ಜಾರಿಗೆ ತರಲು ಕಾರಣವೇನು?
ಹಾಂಗ್ ಕಾಂಗ್ ನಲ್ಲಿ ಗಡಿಪಾರು ಮಸೂದೆ 2019 ಅನ್ನು ಜಾರಿಗೆ ತರಲು ಕಾರಣವಾಗಿದ್ದು, 2018ರಲ್ಲಿ ತೈವಾನ್ ನಲ್ಲಿ ದಂಪತಿ ಹತ್ಯೆ ಪ್ರಕರಣವೊಂದರಲ್ಲಿ ಶಾಮೀಲಾಗಿದ್ದು! ಆದರೆ ಶಂಕಿತ ಆರೋಪಿಗಳನ್ನು ತೈವಾನ್ ಗೆ ಗಡಿಪಾರು ಮಾಡುವ ಯಾವುದೇ ಒಪ್ಪಂದ ಹಾಂಗ್ ಕಾಂಗ್ ಮಾಡಿಕೊಂಡಿಲ್ಲ. ಈ ನಿಟ್ಟಿನಲ್ಲಿ ಶಂಕಿತ ಆರೋಪಿಗಳ ಗಡಿಪಾರು ವಿಚಾರ ಚೀನಾಕ್ಕೆ ಸಮಸ್ಯೆಯನ್ನು ತಂದೊಡ್ಡಿತ್ತು. ಇದರಿಂದಾಗಿ ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಹಾಂಗ್ ಕಾಂಗ್ ಸರಕಾರ ತಲೆಮರೆಯಿಸಿ ಆರೋಪಿಗಳ ಸುಗ್ರೀವಾಜ್ಞೆ ಕಾಯ್ದೆಗೆ ತಿದ್ದುಪಡಿ ತರುವ ಶಿಫಾರಸ್ಸು ಮಾಡಿತ್ತು. ಹೀಗಾಗಿ 2019ರ ಗಡಿಪಾರು ಮಸೂದೆ ಕಾಯ್ದೆಯನ್ನು ಮಂಡಿಸಿತ್ತು. ಕಾಯ್ದೆ ಅನ್ವಯ ಚೀನಾ, ತೈವಾನ್ ಗೂ ಆರೋಪಿಗಳನ್ನು ಗಡಿಪಾರು ಮಾಡಬಹುದಾಗಿದೆ.