Advertisement

ಕಾಂಕ್ರೀಟ್‌ ಕಾಮಗಾರಿಗೆ 1.5 ಕೋ.ರೂ. ಅನುದಾನ ಮಂಜೂರು

12:48 AM Feb 06, 2020 | Sriram |

ಗಂಗೊಳ್ಳಿ: ಮೀನುಗಾರಿಕಾ ಬಂದರನ್ನು ಸಂಪರ್ಕಿಸುವ ಗಂಗೊಳ್ಳಿ – ತ್ರಾಸಿ ಜಿಲ್ಲಾ ಮುಖ್ಯ ರಸ್ತೆಯ ಅಭಿವೃದ್ಧಿಗೆ ಬಹುಕಾಲದಿಂದ ಬೇಡಿಕೆಯಿದ್ದು, ಈಗ ಲೋಕೋಪಯೋಗಿ ಇಲಾಖೆಯಿಂದ ಅನುದಾನ ಮಂಜೂರಾಗಿದೆ. ಕಳೆದ ವರ್ಷ 700 ಮೀ. ಕಾಂಕ್ರೀಟೀಕರಣ ಕಾಮಗಾರಿ ಆಗಿದ್ದು, ಇನ್ನು ಸುಮಾರು 1 ಕಿ.ಮೀ.ವರೆಗಿನ ಕಾಂಕ್ರೀಟಿಕರಣಕ್ಕೆ 1.5 ಕೋ.ರೂ. ಅನುದಾನ ಬಿಡುಗಡೆಯಾಗಿದೆ.

Advertisement

ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿ ಅವರ ಮುತುವರ್ಜಿಯಲ್ಲಿ ಈಗ ಈ ರಸ್ತೆಯ ಅಭಿವೃದ್ಧಿಗೆ ಲೋಕೋಪ ಯೋಗಿ ಇಲಾಖೆಯಿಂದ ಅನುದಾನ ಮಂಜೂರಾಗಿದೆ.

ಈಗಾಗಲೇ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರ ಕಾಂಕ್ರಿಟ್‌ ಕಾಮಗಾರಿ ಆರಂಭವಾಗುವ ಸಾಧ್ಯತೆಯಿದೆ.

ಕುಂದಾಪುರ ಹಾಗೂ ತ್ರಾಸಿ ಕಡೆಯಿಂದ ಗಂಗೊಳ್ಳಿಯನ್ನು ಸಂಪರ್ಕಿ ಸುವ ಮುಖ್ಯ ರಸ್ತೆಯ ಅನೇಕ ಕಡೆಗಳಲ್ಲಿ ಮಳೆಯಿಂದಾಗಿ ಹೊಂಡ – ಗುಂಡಿಗಳು ಬಿದ್ದಿದ್ದು, ಕೆಲವೆಡೆಗಳಲ್ಲಿ ಕೆಲ ದಿನ ಹಿಂದೆ ತೇಪೆ ಹಾಕಲಾಗಿದೆ. ಆದರೆ ಮತ್ತೆ ಕೆಲವು ಕಡೆಗಳಲ್ಲಿ ಇನ್ನೂ ಕೂಡ ಹೊಂಡಗಳು ಹಾಗೇ ಇವೆ.

ಎಲ್ಲಿಂದ – ಎಲ್ಲಿಯ ವರೆಗೆ
ಕಳೆದ ಬಾರಿ ಮೇಲ್‌ಗ‌ಂಗೊಳ್ಳಿ ವಾಟರ್‌ ಟ್ಯಾಂಕ್‌ನಿಂದ ಗಂಗೊಳ್ಳಿ ಪಂಚಾಯತ್‌ ಕಚೇರಿವರೆಗಿನ ಸುಮಾರು 700 ಮೀ. ಉದ್ದದ ಮುಖ್ಯ ರಸ್ತೆಯನ್ನು ನೆರೆ ಪರಿಹಾರದಲ್ಲಿ ಮಂಜೂರಾಗಿದ್ದ 1.08 ಕೋ.ರೂ. ವೆಚ್ಚದಲ್ಲಿ ಕಾಂಕ್ರಿಟೀಕರಣ ಮಾಡಲಾಗಿತ್ತು. ಈಗ ಪಂ. ಕಚೇರಿ ಬಳಿಯಿಂದ ಮೀನುಗಾರಿಕಾ ಬಂದರು ವರೆಗಿನ ಸುಮಾರು 1 ಕಿ.ಮೀ. ರಸ್ತೆಯು ಕಾಂಕ್ರೀಟೀಕರಣಗೊಳ್ಳಲಿದೆ.

Advertisement

ಹೆಚ್ಚಿನ ವಾಹನ ದಟ್ಟಣೆ
ಹದಗೆಟ್ಟ ರಸ್ತೆ ಕಾಮಗಾರಿಯಿಂದಾಗಿ ಕುಂದಾಪುರ, ತ್ರಾಸಿ ಕಡೆಯಿಂದ ಬರುವ ಹಾಗೂ ಹೋಗುವ ಸಾವಿರಾರು ವಾಹನಗಳಿಗೆ ಸಮಸ್ಯೆಯಾಗುತ್ತಿದೆ. ಕೆಲವೆಡೆ ಚರಂಡಿ ವ್ಯವಸ್ಥೆಯಿಲ್ಲದೆ ಮಳೆಗಾಲದಲ್ಲಿ ಮಳೆ ನೀರು ರಸ್ತೆ ಯಲ್ಲಿಯೇ ಹರಿಯುತ್ತಿರುತ್ತದೆ. ವಾಹನಗಳ ದಟ್ಟಣೆಯೂ ಹೆಚ್ಚಾಗಿದೆ.

ಮೀನುಗಾರಿಕೆಗೆ ತೊಡಕು
ಇದು ಗಂಗೊಳ್ಳಿಯ ಮೀನುಗಾರಿಕಾ ಬಂದರಿಗೆ ತೆರಳುವ ಮುಖ್ಯ ರಸ್ತೆಯಾಗಿದೆ. ಈ ಬಂದರಿನಿಂದ ಬೇರೆ ಬೇರೆ ಕಡೆಗಳಿಗೆ ಮೀನು ಸಾಗಾಟ ಮಾಡಲಾಗುತ್ತದೆ. ಮೀನು ಸಾಗಾಟದ ಲಾರಿಗಳು, ಐಸ್‌ ಸಾಗಾಟದ ವಾಹನ, ಮೀನುಗಾರಿಕಾ ಸಲಕರಣೆಗಳನ್ನು ಸಾಗಿಸುವ ವಾಹನಗಳು, ನಿತ್ಯ ಹತ್ತಾರು ಸರಕಾರಿ ಹಾಗೂ ಖಾಸಗಿ ಬಸ್‌ಗಳು, ಶಾಲಾ ವಾಹನಗಳು, ಕಾರು, ಆಟೋರಿಕ್ಷಾ ಸೇರಿದಂತೆ ಸಾವಿರಾರು ವಾಹನಗಳು ಪ್ರತಿನಿತ್ಯ ಇದೇ ಮಾರ್ಗವಾಗಿ ಸಂಚರಿಸುತ್ತವೆ. ಈ ಹೊಂಡ – ಗುಂಡಿಗಳ ರಸ್ತೆಯಿಂದಾಗಿ ಮೀನುಗಾರಿಕಾ ವಹಿವಾಟಿಗೆ ತೊಂದರೆ ಯಾಗುತ್ತಿದೆ.

ಉದಯವಾಣಿ ವರದಿ
ಗಂಗೊಳ್ಳಿಯ ಮುಖ್ಯ ರಸ್ತೆಯ ಅವ್ಯವಸ್ಥೆ ಕುರಿತಂತೆ “ಉದಯವಾಣಿ’ ಅನೇಕ ಬಾರಿ ವಿಶೇಷ ವರದಿಗಳನ್ನು ಪ್ರಕಟಿಸಿದ್ದಲ್ಲದೆ, ಮೀನುಗಾರರಿಗೆ, ಜನರಿಗೆ, ಬಸ್‌ಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಗಮನಸೆಳೆದಿತ್ತು.

ಚರಂಡಿ ನಿರ್ಮಾಣಕ್ಕೆ ಬೇಡಿಕೆ
ಗಂಗೊಳ್ಳಿಯಿಂದ ತ್ರಾಸಿಯವರೆಗಿನ ಮುಖ್ಯ ರಸ್ತೆಯುದ್ದಕ್ಕೂ ಅನೇಕ ಕಡೆಗಳಲ್ಲಿ ಚರಂಡಿ ವ್ಯವಸ್ಥೆ ಸರಿ ಇಲ್ಲದ ಕಾರಣ ರಸ್ತೆಯಲ್ಲಿಯೇ ಮಳೆ ನೀರು ಹರಿದು ಹೋಗುವುದು ಸರ್ವೇ ಸಾಮಾನ್ಯವಾಗಿದೆ. ಈ ಬಾರಿಯ ಕಾಂಕ್ರೀಟ್‌ ಕಾಮಗಾರಿಯೊಂದಿಗೆ ರಸ್ತೆಯ ಇಕ್ಕೆಲಗಳಲ್ಲಿಯೂ ಕೂಡ ಚರಂಡಿಯನ್ನು ಕೂಡ ನಿರ್ಮಾಣ ಮಾಡಲಿ ಎನ್ನುವುದು ಸ್ಥಳೀಯರ ಬೇಡಿಕೆಯಾಗಿದೆ.

ಶೀಘ್ರ ಕಾಮಗಾರಿ
ಲೋಕೋಪಯೋಗಿ ಇಲಾಖೆಯಿಂದ ಈ ಗಂಗೊಳ್ಳಿ ಮುಖ್ಯ ರಸ್ತೆಯ ಕಾಂಕ್ರೀಟ್‌ ಕಾಮಗಾರಿಗೆ ಅನುದಾನ ಮಂಜೂರಾಗಿದೆ. ಈಗಾಗಲೇ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭವಾಗಲಿದೆ. – ದುರ್ಗಾದಾಸ್‌, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ

ಅನುದಾನ ಬಿಡುಗಡೆ
ಗಂಗೊಳ್ಳಿಯ ಮುಖ್ಯ ರಸ್ತೆಯ ಕಾಂಕ್ರೀಟಿಕರಣಕ್ಕೆ ಲೋಕೋಪಯೋಗಿ ಇಲಾಖೆಯಿಂದ 1.5 ಕೋ.ರೂ. ಅನುದಾನಮಂಜೂರಾಗಿದೆ. ಟೆಂಡರ್‌ ಕೂಡ ಪೂರ್ಣಗೊಂಡಿದ್ದು, ಸದ್ಯದಲ್ಲಿಯೇ ಕಾಮಗಾರಿಗೆ ಚಾಲನೆ ನೀಡಲಾಗುವುದು. ಅನೇಕ ಸಮಯಗಳಿಂದ ಈ ಬಗ್ಗೆ ಮೀನುಗಾರರು ಮನವಿ ಸಲ್ಲಿಸುತ್ತಲೇ ಇದ್ದರು. ಈಗ ಅನುದಾನ ಬಿಡುಗಡೆಯಾಗಿದೆ. ಇದರಿಂದ ಮೀನುಗಾರರಿಗೆ, ಸಾರ್ವಜನಿಕರಿಗೆ ಸಾಕಷ್ಟು ಪ್ರಯೋಜನವಾಗಲಿದೆ.
– ಬಿ.ಎಂ. ಸುಕುಮಾರ್‌ ಶೆಟ್ಟಿ,
ಬೈಂದೂರು ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next