ಮೈಸೂರು: ಲಾಕ್‌ಡೌನ್ ಹಿನ್ನೆಲೆ ಮೃಗಾಲಯ ನಿರ್ವಹಣೆಗಾಗಿ ಸಚಿವ ಎಸ್.ಟಿ. ಸೋಮಶೇಖರ್ ಮೂರನೇ ಹಂತವಾಗಿ 21.14 ಲಕ್ಷ ರೂ. ಹಾಗೂ ಸಚಿವ ಭೈರತಿ ಬಸವರಾಜು ಅವರು 84 ಲಕ್ಷ ರೂ. ಚೆಕ್‌ನ್ನು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಅವರಿಗೆ ಹಸ್ತಾಂತರಿಸಿದರು. ಈ ಮೂಲಕ ಮೃಗಾಲಯಕ್ಕೆ ಒಟ್ಟಾರೆ 1,05,14,000 ರೂ. ದೇಣಿಗೆಯಾಗಿ ನೀಡಿದಂತಾಗಿದೆ.
ಮೃಗಾಲಯ ಬಂದ್ ಮಾಡಿದ್ದರ ಪರಿಣಾಮ ಜೀವಿಗಳು ಸೇರಿದಂತೆ ನೌಕರರ ನಿರ್ವಹಣೆಗೆ ಸಂಪನ್ಮೂಲ ಕೊರತೆ ಎದುರಾಗಿತ್ತು. ಈ ಹಿನ್ನೆಲೆ ಸಚಿವರು ಗುರುವಾರ 3ನೇ ಬಾರಿಗೆ ಮೃಗಾಲಯಕ್ಕೆ ಭೇಟಿ ನೀಡಿ, ತಮ್ಮ ಸ್ವಕ್ಷೇತ್ರದಲ್ಲಿ ದಾನಿಗಳಿಂದ ದೇಣಿಗೆ ಸಂಗ್ರಹಿಸಿದ್ದರು. ಸಚಿವ ಸೋಮಶೇಖರ್ ಮಾತನಾಡಿ, ರಾಜ್ಯದ ಸಚಿವರಲ್ಲಿ ಮೃಗಾಲಯಕ್ಕೆ ದೇಣಿಗೆ ನೀಡುವಂತೆ ಮಾಡಿದ ಮನವಿಗೆ ಸ್ಪಂದಿಸಿ ಸಚಿವ ಬೈರತಿ ಬಸವರಾಜು 84 ಲಕ್ಷ ರೂ. ಸಂಗ್ರಹಿಸಿ ನೀಡಿದ್ದಾರೆ. ಇದು ಅವರ ಸಮಾಜಮುಖೀ ಕಾರ್ಯವನ್ನು ತೋರಿಸುತ್ತದೆ ಎಂದರು. ಅಮೆರಿಕದ ಅಕ್ಕ ಸಂಸ್ಥೆ ಅಧ್ಯಕ್ಷ ಅಮರನಾಥ ಅವರೊಂದಿಗೆ ಈ ಬಗ್ಗೆ ಮಾತನಾಡಿದ್ದೇನೆ. ಅವರಿಗೂ ದೇಣಿಗೆ ಬಗ್ಗೆ ಮಾಹಿತಿ ನೀಡಿದ್ದೇನೆ. ಅವರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಮಾಹಿತಿ ನೀಡಿದರು.
ಹಸಿವು ನೀಗಿಸುವುದು ನಮ್ಮ ಕರ್ತವ್ಯ: ಸಚಿವ ಬೈರತಿ ಬಸವರಾಜು ಮಾತನಾಡಿ, ಮನುಷ್ಯರು ಹಸಿವಾದರೆ ಹೇಳಿಕೊಳ್ಳಬಹುದು. ಆದರೆ, ಪ್ರಾಣಿಗಳಿಗೆ ಅದು ಸಾಧ್ಯವಿಲ್ಲ. ಹೀಗಾಗಿ ಅವುಗಳ ಹಸಿವು ನೀಗಿಸುವುದು ನಮ್ಮ ಕರ್ತವ್ಯ. ದಾನಿಗಳು ಅರ್ಥ ಮಾಡಿಕೊಂಡು ಆದಷ್ಟು ಆರ್ಥಿಕ ಸಹಾಯ ಮಾಡಿ ಎಂದು ಸಚಿವ ಸೋಮಶೇಖರ್ ಅವರು ಮನವಿ ಮಾಡಿದರು.
ರೈತರ ಅನುಕೂಲಕ್ಕಾಗಿ ಗಡಿಭಾಗ ಸಡಿಲ: ಲಾಕ್‌ಡೌನ್‌ನಿಂದಾಗಿ ರೈತರಿಗೆ ಬೆಳೆದ ಬೆಳೆ ಮಾರಾಟಕ್ಕೆ ತೊಂದರೆಯಾಗುತ್ತಿದೆ. ಹೀಗಾಗಿ ಹೂವು, ತರಕಾರಿ ಹಾಗೂ ಇನ್ನಿತರ ಉತ್ಪನ್ನಗಳ ಮಾರಾಟಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಗಡಿಭಾಗದಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇನ್ನು ಕೆಲವು ಕಡೆಗಳಲ್ಲಿ ಯಾವುದಕ್ಕೆ ಅವಕಾಶ ಕೊಡಬೇಕು ಎಂಬುದ ಕುರಿತು ಶೀಘ್ರ ನಿರ್ಧಾರವಾಗಲಿದೆ ಎಂದು ಸಚಿವರು ಹೇಳಿದರು.
ಮೃಗಾಲಯಕ್ಕೆ 2.32 ಕೋಟಿ ರೂ. ಕೊಡುಗೆ: ಸಚಿವ ಸೋಮಶೇಖರ್ ಅವರು ಈವರೆಗೆ ತಮ್ಮ ಕ್ಷೇತ್ರ ಹಾಗೂ ಇತರ ಸಚಿವರಿಂದ ಮೃಗಾಲಯಕ್ಕೆ ಒಟ್ಟಾರೆಯಾಗಿ 2,31,60,000 ರೂ. ದೇಣಿಗೆಯಾಗಿ ನೀಡಿದಂತಾಗಿದೆ. ಈ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕ ಎಸ್.ಎ.ರಾಮದಾಸ್, ಎಲ್. ನಾಗೇಂದ್ರ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹಾಜರಿದ್ದರು.