ಕೊಪ್ಪಳ: ನಗರದ ತೋಟಗಾರಿಕೆ ಕಚೇರಿ ಆವರಣದಲ್ಲಿ 10 ದಿನಗಳ ಕಾಲ ನಡೆದ ಮಾವು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಸುಮಾರು 160 ಟನ್‌ಗೂ ಹೆಚ್ಚು ವಿವಿಧ ತಳಿಯ ಮಾವಿನ ಹಣ್ಣುಗಳು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಮಾರಾಟವಾಗಿದ್ದು, 1.50 ಕೋಟಿಗೂ ಹೆಚ್ಚಿನ ವಹಿವಾಟು ನಡೆದಿದೆ ಎಂದು ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ತಿಳಿಸಿದರು.
ನಗರದ ತೋಟಗಾರಿಕೆ ಉಪನಿರ್ದೇಶಕರ ಕಚೇರಿ ಆವರಣದಲ್ಲಿ ನಡೆದ ಮಾವು ಪ್ರದರ್ಶನ ಮತ್ತು ಮಾರಾಟ ಮೇಳದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಾವು ಮೇಳದಲ್ಲಿ ಬೇರೆ, ಬೇರೆ ಜಿಲ್ಲೆಗಳಿಗೆ ಸರಕು ವಾಹನಗಳ ಮೂಲಕ, ಬಸ್ ಗಳ ಮೂಲಕ ದೂರ ದೂರಿನ ಜಿಲ್ಲೆಗಳಿಗೂ ತಲುಪಿಸಿ ಮಾರಾಟ ಮಾಡಲಾಗಿದೆ. ಕೊಪ್ಪಳ ಕೇಸರ್ ಎಂದೇ ಪ್ರಸಿದ್ಧವಾದ ಈ ತಳಿಗೆ ಕಲ್ಯಾಣ ಕರ್ನಾಟಕ ಅಷ್ಟೇ ಅಲ್ಲದೇ ರಾಜ್ಯದ ಉದ್ದಗಲಕ್ಕೂ ಬೇಡಿಕೆ ಬಂದಿದೆ. ನೂರಾರು ಕೆಜಿ ಹಣ್ಣುಗಳನ್ನು ದೆಹಲಿಯಲ್ಲಿರುವ ಗ್ರಾಹಕರಿಗೂ ತಲುಪಿಸಲಾಗಿದೆ. ಜಿಲ್ಲೆಯ ವಿವಿಧ ಭಾಗಗಳಿಂದ 10 ದಿನಗಳ ಕಾಲ ನಡೆದ ಮಾವು ಮೇಳದಲ್ಲಿ ಅಂದಾಜು 20 ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದು, ರೂ. 1.50 ಕೋಟಿಗೂ ಹೆಚ್ಚಿನ ವಹಿವಾಟು ನಡೆದಿದೆ ಎಂದರು.
ಮೇಳದಲ್ಲಿ ಜಿಲ್ಲೆಯ ನಾಲ್ಕೂ ತಾಲೂಕುಗಳ 50ಕ್ಕೂ ಹೆಚ್ಚು ರೈತರು ಭಾಗವ ಹಿಸಿದ್ದರು. ಮೇಳದಲ್ಲಿ ಮಾವು ಮಾರಾಟ ಮಾಡಲು ರೈತರಿಗೆ ಹಾಗೂ ರೈತ ಉತ್ಪಾದಕ ಸಂಘಗಳು, ಹಾಪ್ ಕಾಮ್ಸ್, ಇಲಾಖಾ ತೋಟಗಾರಿಕೆ ಕ್ಷೇತ್ರಗಳಿಗೆ ತಮ್ಮ ಉತ್ಪನ್ನವನ್ನು ಮಾರಾಟ ಮಾಡಲು 20 ಮಾರಾಟ ಮಳಿಗೆಗಳನ್ನು ಉಚಿತವಾಗಿ ತೆರೆಯಲಾಗಿತ್ತು. ರೈತರು ನೈಸರ್ಗಿಕವಾಗಿ ಮಾಗಿಸಿದ ತಮ್ಮ ವಿವಿಧ ತಳಿಯ ಹಣ್ಣುಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಿದ್ದಾರೆ. ಮೇಳದಲ್ಲಿ ಕೇಸರ್ ತಳಿಯ ಮಾವಿನ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಬಂದಿದ್ದು, 100 ಟನ್ ಗೂ ಹೆಚ್ಚು ಮಾರಾಟವಾಗಿದೆ.
ಬೆನೆಶಾನ್, ಕೇಸರ್, ದಶಹರಿ, ರಸಪುರಿ, ಸ್ವರ್ಣರೇಖಾ, ಇಮಾಮ ಪಸಂಧ, ಆಪೋಸ್, ಮಲ್ಲಿಕಾ, ತೋತಾಪುರಿ, ಪುನಾಸ್ ಸೇರಿದಂತೆ ವಿವಿಧ ತಳಿಯ ಮಾವಿನ ಹಣ್ಣುಗಳು 50ರಿಂದ 60 ಟನ್‌ಗೂ ಹೆಚ್ಚು ಮಾರಾಟವಾಗಿದೆ. ಪುನಾಸ್ ಉಪ್ಪಿನಕಾಯಿ ಮಾವಿನ ಕಾಯಿಗೆ ಸಾರ್ವಜನಿಕರಿಂದ ಹೆಚ್ಚಿನ ಬೇಡಿಕೆ ಬಂದು 5 ಟನ್ ನಷ್ಟು ಮಾರಾಟವಾಗಿದೆ. ನೈಸರ್ಗಿಕವಾಗಿ ಯಾವುದೇ ಹಾನಿಕಾರಕ ರಾಸಾಯನಿಕಗಳನ್ನು ಬಳಸದೇ ಮಾಗಿಸಿ ಗ್ರಾಹಕರಿಗೆ ಕೈಗೆಟುವ ದರದಲ್ಲಿ ಮಾರಾಟ ಮಾಡಲಾಗಿದೆ. ಇದರಿಂದಾಗಿ ಗ್ರಾಹಕರಿಗೂ ಯೋಗ್ಯ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಹಣ್ಣುಗಳು ಲಭಿಸಿದ್ದು ಅವರೂ ಈ ಮೇಳದಲ್ಲಿ ಸಕ್ರಿಯವಾಗಿ ಭಾಗವಹಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೇಳದಲ್ಲಿ ಬಾಕ್ಸ್‌ನಲ್ಲಿನ ಕೊಪ್ಪಳ ಕೇಸರ್ ಮಾವಿನ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಬಂದಿದ್ದು, ಸಾರ್ವಜನಿಕರು ಬಾಕ್ಸ್‌ನಲ್ಲಿನ ಹಣ್ಣುಗಳನ್ನು ಅಧಿಕ ಪ್ರಮಾಣದಲ್ಲಿ ಖರೀದಿಸಿರುತ್ತಾರೆ. ಈ ಬಾರಿ ಮೇಳವನ್ನು ಪ್ಲಾಸ್ಟಿಕ್ ಮುಕ್ತವಾಗಿಡುವ ಉದ್ದೇಶದಿಂದ ಸಾರ್ವಜನಿಕರಿಗೆ ಹಣ್ಣುಗಳನ್ನು ತೆಗೆದುಕೊಂಡು ಹೋಗಲು ಅನುಕೂಲವಾಗುವಂತೆ ಇಲಾಖೆಯಿಂದ ಪೇಪರ್ ಬ್ಯಾಗ್‌ಗಳನ್ನು ನೀಡಲಾಗಿದೆ. ಇದರಿಂದ ಕೊಪ್ಪಳ ಕೇಸರ್ ಹೆಚ್ಚು ಜನಪ್ರಿಯವಾಗಿದೆ. ಅಲ್ಲದೇ ಸಾರ್ವಜನಿಕರು ಪೇಪರ್ ಬ್ಯಾಗ್‌ಗಳನ್ನು ಮೆಚ್ಚಿಕೊಂಡಿದ್ದಾರೆ ಎಂದರು.
ಜಿಲ್ಲೆಯಲ್ಲಿನ 5 ರೈತ ಉತ್ಪಾದಕ ಕಂಪನಿಗಳ ಮೂಲಕ ಹಾಗೂ ಫೇಸ್‌ಬುಕ್, ಅಮೇಜಾನ್ ಮೂಲಕ ಕೆಲ ಪ್ರಗತಿಪರ ರೈತರು ಇಲಾಖೆ ಸಂಪರ್ಕದಿಂದ ಕಳಿಸಿ ಲಾಭ ಪಡೆದಿದ್ದಾರೆ. ಹೆಚ್ಚಿನ ರೈತರು ಮಾವು ಮೇಳದಿಂದ ಉತ್ತೇಜಿತರಾಗಿದ್ದು, ಮೇಳದಲ್ಲಿ ಮಾವು ಬೆಳೆಯ ಕುರಿತು ತಾಂತ್ರಿಕ ಮಾಹಿತಿ ಪಡೆದು, ಮಾವು ಬೆಳೆಯಲು ಆಸಕ್ತಿ ತೋರಿದ್ದಾರೆ. ಮುಂದಿನ ದಿನಗಳಲ್ಲಿ ಕೇಸರ್ ತಳಿಯನ್ನು ಅಧಿಕ ಸಾಂದ್ರತೆ ಬೇಸಾಯ ಪದ್ಧತಿಯಲ್ಲಿ 1000 ಎಕರೆ ಪ್ರದೇಶಾಭಿವೃದ್ಧಿ ಕೈಗೊಳ್ಳುವ ಗುರಿ ಹೊಂದಲಾಗಿದೆ ಎಂದರು.
ರೈತರಾದ ಶಿವಣ್ಣ ಹೊಸಮನಿ, ನಾಗಪ್ಪ, ವೀರಭದ್ರಸ್ವಾಮಿ ಬಸವರಾಜ, ಫಕೀರಪ್ಪಸ್ವಾಮಿ ಬಸವರಾಜಸ್ವಾಮಿ, ಅರಳಿಮರದ ಫಾರಂ, ವಾಮದೇವ ಎಚ್, ಮಾರುತಿ, ಹಂಪಿ ಹೆರಿಟೇಜ್ ರೆಸಾರ್ಟ್, ಶ್ರೀಪಾದ ಮುರಡಿ, ಸೇರಿದಂತೆ ಇನ್ನಿತರ ರೈತರು ಮಧ್ಯವರ್ತಿಗಳಿಲ್ಲದೇ ಮೇಳದಲ್ಲಿ ನೇರವಾಗಿ ಮಾರಾಟದ ಅನುಭವ ವ್ಯಕ್ತಪಡಿಸಿದರು.