ಬೆಂಗಳೂರು: ನಗರದ ಆಗ್ನೇಯ ವಿಭಾಗದ ಪೊಲೀಸರು ಮಾದಕ ವಸ್ತು ಮಾರಾಟ, ಮೊಬೈಲ್ ಕಳವು, ಚಿನ್ನಾಭರಣ ಕಳವು, ದ್ವಿಚಕ್ರ ವಾಹನಗಳ ಕಳವು ಸೇರಿ ವಿವಿಧ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ 71 ಮಂದಿ ಆರೋಪಿಗಳನ್ನು ಬಂಧಿಸಿ ಸುಮಾರು 1.48 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಬಂಧಿತರಿಂದ ಒಂದು ಕೆಜಿ ಚಿನ್ನಾಭರಣ ಹಾಗೂ ಒಂದು ವಜ್ರದ ನೆಕ್ಲೇಸ್, 3 ಕೆ.ಜಿ.ಬೆಳ್ಳಿ ವಸ್ತು, 62 ಕೆ.ಜಿ.ಗಾಂಜಾ, 18 ಎಲ್‌ಎಸ್‌ಡಿ ಪೇಪರ್, 76 ದ್ವಿಚಕ್ರ ವಾಹನ, 2 ದ್ವಿಚಕ್ರ ವಾಹನ ಹಾಗೂ ನಾಲ್ಕು ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೋರಮಂಗಲ- 32, ಮಡಿವಾಳ- 24, ಆಡುಗೋಡಿ- 18, ಸದ್ದುಗುಂಟೆಪಾಳ್ಯ- 10, ಮೈಕೋ ಲೇಔಟ್- 7, ಬೊಮ್ಮನಹಳ್ಳಿ- 2, ಬೇಗೂರು- 6, ಎಲೆಕ್ಟ್ರಾನಿಕ್ ಸಿಟಿ- 7, ಪರಪ್ಪನ ಅಗ್ರಹಾರ- 4, ತಿಲಕ್‌ನಗರ- 8, ಎಚ್‌ಎಸ್‌ಆರ್ ಲೇಔಟ್ -6 ಹಾಗೂ ಬಂಡೆಪಾಳ್ಯ ಠಾಣೆಯ 4 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ.
ಗಾಂಜಾ ಮಾರಾಟಗಾರರ ಬಂಧನ: ಕೋರಮಂಗಲ ಪೊಲೀಸರು ಅಂತಾರಾಜ್ಯ ಮಾದಕ ವಸ್ತು ಮಾರಾಟ ಜಾಲವನ್ನು ಬೇಧಿಸಿದ್ದು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಶ್ರೀನಿವಾಸ್(48), ಸುರೇಶ್(24), ಎನ್.ಕೆ. ವಿಥೇಶ್(21), ಒಡಿಶಾ ಮೂಲದ ಗೋವಿಂದ (25) ಮತ್ತು ಜಗತ್ ಕಿಲೋ(25) ಬಂಧಿಸಿದ್ದಾರೆ.
ಆರೋಪಿಗಳಿಂದ 35 ಕೆ.ಜಿ. ಗಾಂಜಾ ವಶಕ್ಕೆ ಪಡೆಯಲಾಗಿದೆ. ಶ್ರೀನಿವಾಸ್ ಕೋರಮಂಗಲ ಠಾಣೆಯ ರೌಡಿಶೀಟರ್ ಆಗಿದ್ದು, ಈ ಹಿಂದೆಯೂ ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ಬಂಧನವಾಗಿ, ಜೈಲು ಸೇರಿದ್ದ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ. ಆರೋಪಿ ತನ್ನ ಮಗನನ್ನು ದಂಧೆಗೆ ಸೇರಿಸಿಕೊಂಡು ಒಡಿಶಾಗೆ ವಿಮಾನದಲ್ಲಿ ಹೋಗಿ, ನಂತರ ರೈಲುಗಳ ಮೂಲಕ ಭಾರೀ ಪ್ರಮಾಣದ ಗಾಂಜಾವನ್ನು ಬೆಂಗಳೂರಿಗೆ ತರುತ್ತಿದ್ದ.
ನಂತರ ಕಾರಿನಲ್ಲಿ ಗಾಂಜಾ ಸಾಗಾಟ ಮಾಡಿ, ನಗರದ ಇತರೆ ವ್ಯಾಪಾರಿಗಳಿಗೆ ಪ್ರತಿ ಕೆ.ಜಿಗೆ 15 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದರು. ಗೋವಿಂದ್ ಮತ್ತು ಜಗತ್ ಶ್ರೀನಿವಾಸ್ ಮತ್ತು ಇತರೆ ಮಾರಾಟಗಾರರ ನಡುವೆ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.
ಪ್ರೇಯಸಿಗಾಗಿ ಸರ ಕಳವು: ಎಚ್‌ಎಸ್‌ಆರ್ ಲೇಔಟ್ ಪೊಲೀಸರು ರೌಡಿಶೀಟರ್ ವಿಶ್ವಾಸನನ್ನು ಬಂಧಿಸಿದ್ದು, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದಾರೆ. ವಿಶ್ವಾಸ ಅಂತರ್ಜಾತಿ ವಿವಾಹವಾಗಿದ್ದು, ಅದಕ್ಕೆ ಮನೆಯವರು ಒಪ್ಪಿಗೆ ನೀಡಿಲ್ಲ. ಹೀಗಾಗಿ ಜೀವನೋಪಾಯಕ್ಕಾಗಿ ಅಲ್ಲಲ್ಲಿ ಸರ ಕಳವು ಮಾಡಿಕೊಂಡು ಜೀವನ ನಡೆಸುತ್ತಿದ್ದಾನೆ. ಈತನ ವಿರುದ್ಧ ಕೋರಮಂಗಲ ಹಾಗೂ ಇತರೆಡೆ ರೌಡಿಪಟ್ಟಿ ತೆರೆಯಲಾಗಿದೆ ಎಂದು ಪೊಲೀಸರು ಹೇಳಿದರು.