ವಿಜಯಪುರ: ಮಹಾರಾಷ್ಟ್ರ ರಾಜ್ಯದಲ್ಲಿ ಸುರಿಯುತ್ತಿರುವ ಮಳೆಗೆ ಕರ್ನಾಟಕ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಮಹಾರಾಷ್ಟ್ರದಲ್ಲಿ ಭೀಮಾ ನದಿಗೆ ನಿರ್ಮಿಸಿರುವ ಉಜನಿ ಜಲಾಶಯದಿಂದ ಶನಿವಾರ ಮಧ್ಯಾಹ್ನದ ವೇಳೆಗೆ 1.31 ಲಕ್ಷ ಕ್ಯೂಸೆಕ್ ನೀರು ಹೊರಬಿಟ್ಟಿದ್ದು ವಿಜಯಪಯಪುರ ಜಿಲ್ಲೆಯಲ್ಲಿ ಪ್ರವಾಹ ಸಂಕಷ್ಟ ಎದುರಾಗುವ ಅಪಾಯದ ಮುನ್ಸೂಚನೆ ಇದೆ.
ನೆರೆಯ ಮಹಾರಾಷ್ಟ್ರ ರಾಜ್ಯದ ಭೀಮಾ ನದಿ ಪಾತ್ರದ ಜಿಲ್ಲಾಡಳಿತಗಳೊಂದಿಗೆ ಸಂಪರ್ಕ ಸಾಧಿಸಿರುವ ವಿಜಯಪುರ ಜಿಲ್ಲಾಡಳಿತ, ಉಜನಿ ಜಲಾಶಯದಿಂದ ಭಾರಿ ಪ್ರಮಾಣದ ನೀರು ಭೀಮಾ ನದಿಗೆ ಬಿಡಲಾಗುತ್ತಿದ್ದು, ಜಿಲ್ಲೆಯಲ್ಲಿ ಪ್ರವಾಹ ಸೃಷ್ಟಿಸುತ್ತಿದೆ. ಶನಿವಾರ ಮಧ್ಯಾಹ್ನದ ವೇಳೆಗೆ 91 ಸಾವಿರ ಕ್ಯೂಸೆಕ್ ನಷ್ಟಿದ್ದ ನದಿ ನೀರಿನ ಪ್ರಮಾಣ, ಸಂಜೆಯ ವೇಳೇಗೆ 1:31 ಲಕ್ಷ ಕ್ಯೂಸೆಕ್‌ಗೆ ಏರಿಕೆಯಾಗಿತ್ತು. ರಾತ್ರಿ ವೇಳೆಗೆ ಭೀಮಾ ನದಿಯಲ್ಲಿ ಇನ್ನೂ ಹೆಚ್ಚಿನ ನೀರಿನ ಹರಿವು ಸಾಧ್ಯತೆಯ ನಿರೀಕ್ಷೆ ಇದ್ದು ಪ್ರವಾಹ ಸಂಕಷ್ಟ ಎದುರಾಗಿದೆ.
ಪ್ರವಾಹದ ಮುನ್ಸೂಚನೆ ದೊರೆಯುತ್ತಲೇ ಶನಿವಾರ ಬೆಳಗ್ಗೆಯಿಂದಲೇ ಭೀಮಾ ನದಿ ಪಾತ್ರದ ಹಳ್ಳಿಗಳಲ್ಲಿ ಸಂಚಾರ ಆರಂಭಿಸಿರುವ ಜಿಲ್ಲಾಧಿಕಾರಿ ಡಾ| ವಿ.ಬಿ. ದಾನಮ್ಮನವರ, ನದಿ ತೀರದಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಲು ಸಿದ್ಧತೆ ಪರಿಶೀಲಿಸುತ್ತಿದ್ದಾರೆ. ಭೀಮಾ ನದಿ ತೀರದಲ್ಲಿರುವ ಚಡಚಣ, ಇಂಡಿ, ಆಲಮೇಲ ಭಾಗದ ಹಳ್ಳಿಗಳಿಗೆ ಭೇಟಿ ನೀಡುತ್ತಿರುವ ಜಿಲ್ಲಾಧಿಕಾರಿಗಳು ಜನರಿಗೆ ಪ್ರವಾಹದ ಮುನ್ನೆಚ್ಚರಿಕೆ ನೀಡುತ್ತಿದ್ದಾರೆ.
ಧೂಳಖೇಡ, ಚಣೇಗಾಂವ, ಹಿಂಗಂಣಿ, ಬರಗುಡಿ ಭಾಗದ ಹಳ್ಳಿಗಳಲ್ಲಿ ಸಂಚರಿಸುತ್ತಿರುವ ಜಿಲ್ಲಾಧಿಕಾರಿಗಳು, ಸೇತುವೆ, ಕೇಳಹಂತದ ಸೇತುವೆಗಳು, ರಸ್ತೆಗಳ ಸ್ಥಿತಿಗತಿ ಪರಿಶೀಲಿಸಿದ್ದಾರೆ. ಅಲ್ಲದೇ ಪ್ರವಾಹ ಪರಿಸ್ಥಿತಿ ಎದುರಾದಲ್ಲಿ ಜನರನ್ನು ಸ್ಥಳಾಂತರಿಸಲು ಸುರಕ್ಷಿತ ಕಟ್ಟಡಗಳ ಪರಿಶೀಲನೆ ನಡೆಸಿದ್ದಾರೆ. ಇದರ ಭಾಗವಾಗಿ ಅಂಗನವಾಡಿ, ಸರ್ಕಾರಿ-ಖಾಸಗಿ ಶಾಲೆ-ಕಾಲೇಜುಗಳ ಕಟ್ಟಡಗಳ ಸ್ಥಿತಿಗತಿಯನ್ನು ಖುದ್ದು ಪರಿಶೀಲನೆ ನಡೆಸಿದ್ದಾರೆ. ಇದಲ್ಲದೇ ಭೀಮಾ ತೀರದ ಹಳ್ಳಿಗಳ ಜನರಿಂದ ಪ್ರವಾಹ ಪರಿಸ್ಥಿತಿ ಎದುರಾದಲ್ಲಿ ಈ ಹಿಂದೆ ನೀರು ಎಲ್ಲಿಯವರೆಗೆ ನುಗ್ಗುತ್ತಿತ್ತು, ನೀರಿನ ಪ್ರಮಾಣ ಎಷ್ಟಿತ್ತು, ಆಗೆಲ್ಲ ತುರ್ತಾಗಿ ಕೈಗೊಳ್ಳುತ್ತಿದ್ದ ಕ್ರಮಗಳೇನು ಎಂದೆಲ್ಲ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದ್ದಾರೆ.
ಪ್ರವಾಹ ಸಂಕಷ್ಟದ ಎದುರಾಗುವ ಅಪಾಯವಿದ್ದು, ನದಿ ತೀರದ ಜನರು ಮುನ್ನೆಚ್ಚರಿಕೆ ಕ್ರಮವಾಗಿ ಎತ್ತರದಲ್ಲಿರುವ ಸುರಕ್ಷಿತ ಪ್ರದೇಶಗಳಿಗೆ ತೆರಳಬೇಕು. ಒಂದೊಮ್ಮೆ ಪ್ರವಾಹ ಸಂದಿಗ್ಧದಲ್ಲಿ ಸಿಲುಕಿದರೆ ಸ್ಥಳೀಯ ಅಧಿಕಾರಿಗಳ ಮೂಲಕ ರಕ್ಷಣೆ ಪಡೆಯಬೇಕು ಎಂದು ಸಲಹೆ ನೀಡುತ್ತಿದ್ದಾರೆ. ಮತ್ತೊಂದೆಡೆ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ನದಿ ತೀರದ ಹಳ್ಳಿಗಳಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ನಿರೀಕ್ಷಕರು, ಪಿಡಿಒಗಳು, ಆರೋಗ್ಯ ಸಹಾಯಕಿಯರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ತುರ್ತು ಸೇವೆ ಬೇಕಿರುವ ಸಿಬ್ಬಂದಿಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಜಿಲ್ಲಾಧಿಕಾರಿಗಳೊಂದಿಗೆ ಇಂಡಿ ಉಪ ವಿಭಾಗದ ಸಹಾಯಕ ಆಯುಕ್ತ ರಾಮಚಂದ್ರ ಗಡಾದೆ, ಚಡಚಣ ತಹಶೀಲ್ದಾರ ಎಚ್.ಎನ್.ಶಿರಹಟ್ಟಿ ಇತರರು ಜಿಲ್ಲಾಧಿಕಾರಿಗಳ ಜೊತೆಗಿದ್ದರು.