ತೇರದಾಳ: ಪಟ್ಟಣದ ಮೂಲಕ ಹಾಯ್ದುಹೋಗುವ ಜಮಖಂಡಿ-ಕಾಗವಾಡ ರಾಜ್ಯ ಹೆದ್ದಾರಿಯ ಕುಡಚಿ ರಸ್ತೆಯ ದಡದಲ್ಲಿ ಬಾವಿಯೊಂದು ಹಾಳು ಬಿದ್ದಿದ್ದು, ಇದನ್ನು ಭರ್ತಿ ಮಾಡಲು ಪುರಸಭೆಯವರು 1.3 ಲಕ್ಷ ಹಣ ಖರ್ಚು ಮಾಡಿದರೂ ಇನ್ನೂ ಬಾವಿ ಮಾತ್ರ ಭರ್ತಿ ಆಗಿಲ್ಲ.
ಇದರಿಂದ ವಾಹನ ಸವಾರರು ಭಯದಲ್ಲಿಯೇ ವಾಹನ ಓಡಿಸಬೇಕಾದ ಸ್ಥಿತಿ ನಿರ್ಮಾಣವಾಗಿದ್ದು, ಜನಪ್ರತಿನಿ ಧಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಪುರಸಭೆ ಸೇರಿದಂತೆ ಬೇರೆ ಬೇರೆ ಇಲಾಖೆಯಡಿ ಹಲವು ವಿವಿಧ ಕಾಮಗಾರಿಗಳು ನಡೆಯುತ್ತಿವೆ.
ಅಷ್ಟೇ ಏಕೆ ಪೊಲೀಸ್ ಠಾಣೆಯಿಂದ ಹಿಡಿದು ಬಸ್ ನಿಲ್ದಾಣದವರೆಗೆ ಲೋಕೋಪಯೋಗಿ ಇಲಾಖೆಯಡಿ ರಸ್ತೆ ಅಗಲೀಕರಣ ಕೆಲಸ ಪೂರ್ಣಗೊಂಡಿದೆ. ಇಂತಹ ಕಾಮಗಾರಿಗಳು ನಡೆಯುವ ವೇಳೆ ಸಾಕಷ್ಟು ಕಲ್ಲು-ಮಣ್ಣು ಸಂಗ್ರಹವಾಗುತ್ತದೆ. ಅದನ್ನು ಬೇರೆ ಎಲ್ಲಿಯೋ ಹಾಕಿ ಬರುವ ಬದಲು ಇಂತಹ ಹಾಳು ಬಿದ್ದ ಅಥವಾ ತಗ್ಗು ಪ್ರದೇಶಗಳಲ್ಲಿ ಹಾಕಿದರೆ ನಡೆಯುವುದಿಲ್ಲವೇ. ಇಷ್ಟೊಂದು ಅವಕಾಶ ಇದ್ದರೂ ಪುರಸಭೆಯಲ್ಲಿ ಬಾವಿ ಮುಚ್ಚಲು 1.3 ಲಕ್ಷ ಹಣ ಖರ್ಚು ಮಾಡುವ ಅವಶ್ಯಕತೆ ಏನಿತ್ತು?. ಅದು ಕೂಡ ಬಾವಿ ಭರ್ತಿಯೂ ಆಗಿಲ್ಲ. ಇದೆಂಥ ವ್ಯವಸ್ಥೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಆದರೆ ಈ ಬಗ್ಗೆ ಯಾವೊಬ್ಬ ಜನಪ್ರತಿನಿಧಿಯೂ ತಲೆ ಕಡೆಸಿಕೊಳ್ಳದಿರುವುದು ಅವರ ಬೇಜವಾಬ್ದಾರಿಗೆ ಹಿಡಿದ ಕೈಗನ್ನಡಿ.
ಹಾಳು ಬಿದ್ದ ಬಾವಿ ಮುಚ್ಚುವ ಕ್ರಮ ಕೈಗೊಳ್ಳದಿರುವಷ್ಟು ಪುರಸಭೆ ಆಡಳಿತ ಹದಗೆಟ್ಟು ಹೋಗಿದೆ. ಪುರಸಭೆ ವತಿಯಿಂದಲೇ ಸಾಕಷ್ಟು ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ಕಲ್ಲು-ಮಣ್ಣುಗಳಂತಹ ನಿರುಪಯುಕ್ತ ವಸ್ತುಗಳಿಂದ ಬಾವಿ ತುಂಬಿಸಬಹುದು. ಆದರೆ ಬಾವಿ ಮುಚ್ಚಲು ಲಕ್ಷಾಂತರ ಹಣ ಖರ್ಚು ಮಾಡಿದ್ದಾರೆ. ಅದು ಕೂಡ ಭರ್ತಿ ಆಗಿಲ್ಲ. ಶಾಸಕರು ಬರೀ ಪೂಜೆ ಮಾಡುವ ಬದಲು ಯಾವ ಕೆಲಸ, ಎಷ್ಟು ಪ್ರಮಾಣದಲ್ಲಿ ನಡೆಯುತ್ತಿದೆ ಮತ್ತು ಎಷ್ಟರ ಮಟ್ಟಿಗೆ ಅನುದಾನ ಸದ್ಬಳಕೆ ಆಗುತ್ತಿದೆ ಎಂಬುದರ ಬಗ್ಗೆ ಗಮನ ಹರಿಸಬೇಕು.
ಹನಮಂತ ರೋಡನ್ನವರ, ಪುರಸಭೆ ಮಾಜಿ ಅಧ್ಯಕ್ಷ